ಭಟ್ಕಳ: ತಾಲೂಕಿನಲ್ಲಿ ಒಟ್ಟೂ ಸರಕಾರಿ ಲೆಕ್ಕದಲ್ಲಿರುವ 52 ಕೆರೆಗಳಿದ್ದು ಅವುಗಳ ಒಟ್ಟೂ ವಿಸ್ತೀರ್ಣ 21 ಎಕರೆ, 04 ಗುಂಟೆ 28 ಆಣೆ ಇದೆ. ಆದರೆ ಇಂದು ಹಲವಾರು ಕೆರೆಗಳು ಒತ್ತುವರಿಯಾಗಿದ್ದರೆ ಇನ್ನೂ ಹಲವು ಬತ್ತಿ ಬರಡಾಗಿವೆ. ಕೇವಲ ಮಳೆಗಾಲದಲ್ಲಿ ಮಾತ್ರ ನೀರು ತುಂಬಿಕೊಂಡಿರುತ್ತಿದ್ದು ಮಳೆಯ ಜೊತೆಗೇ ಬತ್ತಿ ಹೋಗುತ್ತಿರುವುದು ಕೆರೆಗಳ ಬಗ್ಗೆ ತೋರಿದ ದಿವ್ಯ ನಿರ್ಲಕ್ಷಕ್ಕೆ ಸಾಕ್ಷಿಯಾಗಿದೆ.
ತಾಲೂಕಿನಲ್ಲಿ ಅತೀ ದೊಡ್ಡ ಕೆರೆಯೆನ್ನುವ ಹೆಗ್ಗಳಿಕೆ ನಗರ ಮಧ್ಯದಲ್ಲಿರುವ ಕೊಕ್ತಿ ಕೆರೆ. ಇದರ ವಿಸ್ತೀರ್ಣ 6 ಎಕರೆ 9 ಗುಂಟೆ. ಅತೀ ಚಿಕ್ಕ ಕೆರೆ ಎಂದರೆ ಮಾರುಕೇರಿ ಸರ್ವೆ ನಂ.147ರಲ್ಲಿರುವ 12 ಆಣೆ ವಿಸ್ತೀರ್ಣದ ಸರಕಾರಿ ಕೆರೆ.
ಅನೇಕ ಕಡೆಗಳಲ್ಲಿ ಕೆರೆಗಳ ಒತ್ತುವರಿಯಾಗಿದ್ದು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಹೀಗಾಗಿ ಇನ್ನು ಅನೇಕ ಕೆರೆಗಳು ಹೂಳು ತುಂಬಿ ಅಸ್ತಿತ್ವವನ್ನೇ ಕಳೆದುಕೊಂಡಿದೆ. ಇದೇ ರೀತಿ ಮುಂದುವರಿದರೆ ಮುಂದೊಂದು ದಿನ ಕೆರೆಗಳನ್ನು ಹುಡುಕುವ ಕಾಲ ಸನ್ನಿಹಿತವಾಗಬಹುದು.
ಭಟ್ಕಳ ನಗರ ಭಾಗದಲ್ಲಿರುವ ಕೋಕ್ತಿ ಕೆರೆ ಬರುಬರುತ್ತಾ ಚಿಕ್ಕದಾಗುತ್ತಾ ಇಂದು ಕೆರೆ ಮಧ್ಯ ಭಾಗದಲ್ಲಿ ಮಾತ್ರ ನೀರಿದ್ದರೆ, ಮಳೆಗಾಲದಲ್ಲಿ ಸಂಪೂರ್ಣ ತುಂಬಿಕೊಂಡಿರುತ್ತದೆ. ನಗರಕ್ಕೆ ಹೊಂದಿಕೊಂಡಿರುವ ಈ ಕೆರೆಯ ಭಾಗದಲ್ಲಿ ಜಮೀನಿನ ಮೌಲ್ಯ ಅತ್ಯಧಿಕವಾಗಿದ್ದರಿಂದ ಹಲವು ಭಾಗ ಅತಿಕ್ರಮಣವಾಗಿದ್ದು ಸೂಕ್ತ ಕ್ರಮದ ಅಗತ್ಯವಿದೆ. ನಗರದ ಅಂತರ್ಜಲ ವೃದ್ಧಿಗೆ ತನ್ನದೇ ಆದ ಕೊಡುಗೆ ನೀಡುತ್ತಿತ್ತಾದರೂ ಬಹಳ ವರ್ಷಗಳಿಂದ ಹೂಳು ತುಂಬಿ, ಅತಿಕ್ರಮಣಕ್ಕೊಳಗಾಗಿ ಸೊರಗುತ್ತಿದೆ. ಕೆಲವೇ ವರ್ಷಗಳಲ್ಲಿ ಕೆರೆ ನಾಪತ್ತೆಯಾದರೂ ಆಶ್ಚರ್ಯವಿಲ್ಲ ಎಂಬುದು ಸ್ಥಳೀಯರ ಅಭಿಪ್ರಾಯ.
Advertisement
ಹಿಂದೆ ರಾಜರುಗಳು ಪ್ರತಿ ದೇವಸ್ಥಾನದ ಎದುರು ಒಂದು ಕೆರೆ ನಿರ್ಮಿಸುತ್ತಿದ್ದರು. ಇದಕ್ಕೆ ಕಾರಣ ಜನರು ದೇವರ ಕರೆ ನಿರ್ಲಕ್ಷ ಮಾಡುವುದಿಲ್ಲ, ಒತ್ತುವರಿಯೂ ಆಗುವುದಿಲ್ಲ ಎನ್ನುವ ನಂಬಿಕೆ. ಇಂದು ಇಷ್ಟೆಲ್ಲಾ ಕೆರೆಗಳಿವೆ ಎಂದರೆ ಅದು ನಮ್ಮ ಪೂರ್ವಜರ ಕೊಡುಗೆಯೇ ಸರಿ. ಆದರೆ ಇಂದು ನಾವು ದೇವರ ಕೆರೆಯನ್ನೂ ಸೇರಿಸಿ ಹಲವಾರು ಕೆರೆಗಳನ್ನು ನುಂಗಿ ಹಾಕಿದ್ದೇವೆ. ಕೇವಲ ರೆವೆನ್ಯೂ ದಾಖಲೆಗಳಲ್ಲಿ ಮಾತ್ರ ಕೆರೆಗಳಿವೆ ವಾಸ್ತವಿಕವಾಗಿ ಅಲ್ಲಿ ಕೆರೆಗಳೇ ಇಲ್ಲ ಎನ್ನುವುದು ಎಷ್ಟೋ ಕಡೆಗಳಲ್ಲಿ ಸಾಬೀತಾಗಿವೆ.
Related Articles
Advertisement
ತಾಲೂಕಿನ ಕೆರೆಗಳ ಒಟ್ಟೂ ವಿಸ್ತೀರ್ಣದಲ್ಲಿ ಸುಮಾರು 1 ಎಕರೆಗೂ ಹೆಚ್ಚು ಅತಿಕ್ರಮಣವಾಗಿದ್ದು ಜಿಲ್ಲಾಡಳಿತ ತಕ್ಷಣ ಕ್ರಮ ತೆಗೆದುಕೊಳ್ಳದೇ ಇದ್ದಲ್ಲಿ ಕೆರೆಗಳೇ ನಾಪತ್ತೆಯಾಗುವ ದಿನ ದೂರವಿಲ್ಲ.
ತಾಲೂಕಿನಲ್ಲಿ ಸೂಸಗಡಿಯಲ್ಲಿ ಕೋಕ್ತ್ತಿಕೆರೆ (ಅತಿ ದೊಡ್ಡ ಕೆರೆ), ಜಂಬೂರಮಠ ಕೆರೆ, ಮುಟ್ಟಳ್ಳಿ ಪಂಚಾಯತ್ ವ್ಯಾಪ್ತಿಯಲ್ಲಿ ಬಾಳೆಕಟ್ಟು ಕೆರೆ, ಸ.ನಂ.216ರಲ್ಲಿನ ಸರಕಾರಿ ಕೆರೆ, ತಲಾನ್‌ನಲ್ಲಿ ಸ.ನಂ.160ರಲ್ಲಿನ ಸರಕಾರಿ ಕೆರೆ, ಮೂಢಭಟ್ಕಳದಲ್ಲಿ ಕಾನಕೆರೆ, ಹೆಬಳೆ ಪಂಚಾಯತ್ ವ್ಯಾಪ್ತಿಯಲ್ಲಿ ವರಕೊಡ್ಲ ಕೆರೆ, ಸ.ನಂ.227ರಲ್ಲಿ 2 ಎಕರೆ 25 ಗುಂಟೆ ಜಾಗಾದಲ್ಲಿರುವ ಸರಕಾರಿ ಕೆರೆ, ಹುಲ್ಮಕ್ಕಿ ಕೆರೆ, ಮಾವಿನಕುರ್ವೆ ಪಂಚಾಯತ್ ವ್ಯಾಪ್ತಿಯಲ್ಲಿ ಹೊನ್ನೆಮಡಿ ಕೆರೆ, ತಲಗೇರಿ ಕೆರೆ, ಹತ್ತಿಗುಂಡಿ ಕೆರೆ, ಬೆಳ್ನಿ ಸ.ನಂ.62ರಲ್ಲಿರುವ ಸರಕಾರಿ ಕೆರೆ, ಸ.ನಂ.75ರಲ್ಲಿರುವ ಸರಕಾರಿ ಕೆರೆ, ಜಾಲಿ ಪಪಂ ವ್ಯಾಪ್ತಿಯ ಸ.ನಂ.239ರ ಸರಕಾರಿ ಕೆರೆ, ಜಾಲಿ ಸ.ನಂ.85ರ ಸರಕಾರಿ ಕೆರೆ, ವೆಂಕ್ಟಾಪುರ ಸ.ಣ.129ರಲ್ಲಿರುವ ಸರಕಾರಿ ಕೆರೆ, ಯಲ್ವಡಿಕವೂರ ಪಂಚಾಯತ್ ವ್ಯಾಪ್ತಿಯ ಸ.ನಂ.74ರ ಹಡೀನ ಸರಕಾರಿ ಕೆರೆ, ಮಾರುಕೇರಿ ಪಂಚಾಯತ್ ವ್ಯಾಪ್ತಿಯಲ್ಲಿ ಸರಕಾರಿ ಕೆರೆಗಳು ಒಟ್ಟೂ 8, ಕೋಟಖಂಡ ಸರಕಾರಿ ಕೆರೆಗಳು 7, ಕಿತ್ರೆ ಸರಕಾರಿ ಕೆರೆ 1, ಅಂತ್ರವಳ್ಳಿ ಸರಕಾರಿ ಕೆರೆ 1 ಸೇರಿ ಒಟ್ಟೂ 16 ಕೆರೆಗಳಿವೆ. ಬೆಳಕೆ ಪಂಚಾಯತ್ ವ್ಯಾಪ್ತಿಯಲ್ಲಿ 3 ಎಕರೆ 12 ಗುಂಟೆ ಸ್ಥಳದಲ್ಲಿ ಕಟಗೇರಿ ದೇವರ ಕೆರೆ, ಬೆಳಕೆ ಸ.ಣ,.383ರಲ್ಲಿರುವ ಸರಕಾರಿ ಕೆರೆ, ಬೈಲೂರು ಪಂಚಾಯತ್ ವ್ಯಾಪ್ತಿಯಲ್ಲಿ ಮಟ್ನಗದ್ದೆ ಕೆರೆ, ಮಡಿಕೇರಿ ಕೆರೆ, ಮರ್ಕಾಂಡೇಶ್ವರ ಕೆರೆ, ಶಿವಗಂಗೆ ಕೆರೆ, ಮೂಡ್ಲಗೊಂಡ ಕೆರೆ, ಮಾವಳ್ಳಿ-1 ಪಂಚಾಯತ್ ವ್ಯಾಪ್ತಿಯಲ್ಲಿ ಸ.ನಂ.395ರಲ್ಲಿರುವ ಸರಕಾರಿ ಕೆರೆ, ಮಾವಳ್ಳಿ-2 ಪಂಚಾಯತ್ ವ್ಯಾಪ್ತಿಯಲ್ಲಿ ಸ.ನಂ.295ರಲ್ಲಿರುವ ಸರಕಾರಿ ಕೆರೆ, ಬೇಂಗ್ರೆ ಪಂಚಾಯತ್ ವ್ಯಾಪ್ತಿಯಲ್ಲಿ ಬೇಂಗ್ರೆ ಕೆರೆ, ಮಾಲಿಕೊಡ್ಲು ಕೆರೆ, ಸ.ನಂ.123/3ರಲ್ಲಿರುವ ಸರಕಾರಿ ಕೆರೆ, ಕೊಪ್ಪ ಪಂಚಾಯತ್ ವ್ಯಾಪ್ತಿಯಲ್ಲಿ ಸ.ನಂ.266ರಲ್ಲಿರುವ ಕೆರೆ, ಕಾಯ್ಕಿಣಿ ಪಂಚಾಯತ್ ವ್ಯಾಪ್ತಿಯಲ್ಲಿ ಮಲ್ಲಹೊಂಡ ಕೆರೆ, ಕಾಡಿಕೆರೆ, ಹೆಗ್ಗೆರೆ ಕೆರೆ, ಹುಳಸಿ ಕೆರೆ ಹೀಗೆ ಒಟ್ಟೂ 52 ಕೆರೆಗಳಿದ್ದು ಇವುಗಳ ರಕ್ಷಣೆಗೆ ಸರಕಾರ ಕ್ರಮ ಕೈಗೊಳ್ಳಬೇಕಾಗಿದೆ.
•ಆರ್ಕೆ, ಭಟ್ಕಳ