Advertisement

ಪ್ರಯೋಗದಲ್ಲಿವೆ 30 ಲಸಿಕೆಗಳು

02:29 AM Sep 17, 2020 | mahesh |

ಹೊಸದಿಲ್ಲಿ: ಕೋವಿಡ್ ವೈರಸ್‌ ನಿಗ್ರಹಕ್ಕಾಗಿ ರೂಪಿಸಲಾಗಿರುವ ಸುಮಾರು 30 ಲಸಿಕೆಗಳ ನಮೂನೆಗಳನ್ನು ಭಾರತದಲ್ಲಿ ಪರೀಕ್ಷೆಗೊಳಪಡಿಸಲು ಕೇಂದ್ರ ಸರಕಾರ ಅನುಮೋದನೆ ನೀಡಿದೆ. ಆ ಎಲ್ಲಾ ನಮೂನೆಗಳ ಪರೀಕ್ಷೆ ಭಾರತದಲ್ಲಿ ಆರಂಭವಾಗಿದ್ದು, ಅವುಗಳಲ್ಲಿ ಮೂರು ನಮೂನೆಗಳ ಪರೀಕ್ಷೆ ತೃತೀಯ ಹಂತಕ್ಕೆ ಕಾಲಿಟ್ಟಿದೆ. ನಾಲ್ಕು ನಮೂನೆಗಳು “ಅಡ್ವಾನ್ಸ್ ಪ್ರೀ-ಕ್ಲಿನಿಕಲ್‌ ಮತ್ತು ಡೆವಲಪ್‌ಮೆಂಟ್‌’ ಹಂತದಲ್ಲಿವೆ ಎಂದು ಕೇಂದ್ರ ಸರಕಾರ ತಿಳಿಸಿದೆ.

Advertisement

ರಾಜ್ಯಸಭೆಯಲ್ಲಿ ಈ ವಿಷಯ ತಿಳಿಸಿದ ಕೇಂದ್ರ ಗೃಹ ಇಲಾಖೆಯ ಸಹಾಯಕ ಸಚಿವ ನಿತ್ಯಾನಂದ ರಾಯ್‌, “”ಲಸಿಕೆಗಳ ಜೊತೆಗೆ ಈಗಾಗಲೇ ಜ್ವರ, ಶೀತದಂಥ ಕಾಯಿಲೆಗಳಿಗೆ ಬಳಸಲಾಗುವ 13 ಔಷಧಿಗಳನ್ನು ಕೋವಿಡ್ ವಿರುದ್ಧದ ಚಿಕಿತ್ಸೆಗೆ ಬಳಸಲು (ರಿ-ಪರ್ಪಸ್ಡ್) ಅನುಮತಿ ನೀಡಲಾಗಿದೆ. ಈ ಮೂಲಕ, ಕೊರೊನಾಕ್ಕೆ ಪರಿಣಾಮಕಾರಿ ಚಿಕಿತ್ಸೆಯೊಂದನ್ನು ರೂಪಿಸಲು ಪ್ರಯತ್ನಿಸಲಾಗಿದೆ. ಇದೆಲ್ಲದರ ಮೇಲೆ ನಿಗಾ ವಹಿಸಲು ಹಾಗೂ ಸೂಕ್ತ ಮಾರ್ಗದರ್ಶನವನ್ನು ನೀಡಲು ಆ. 7ರಂದು ಕೇಂದ್ರ ಸರಕಾರ ರಾಷ್ಟ್ರಮಟ್ಟದ ಲಸಿಕೆ ತಜ್ಞರ ಸಮಿತಿಯೊಂದನ್ನೂ ರಚಿಸಿದೆ’ ಎಂದರು.

ಭಾರತದಲ್ಲಿ ಸ್ನುಟ್ನಿಕ್‌-5 ಪರೀಕ್ಷೆ: ರಷ್ಯಾದಲ್ಲಿ ಸಿದ್ಧವಾಗಿರುವ ಸ್ನುಟ್ನಿಕ್‌ ಕೊರೊನಾ ಲಸಿಕೆಯ ಅಂತಿಮ ಹಂತದ ಪರೀಕ್ಷೆಯನ್ನು ಭಾರತದಲ್ಲಿ ನಡೆಸುವ ಒಪ್ಪಂದಕ್ಕೆ ಹೈದರಾಬಾದ್‌ ಮೂಲದ ಔಷಧ ತಯಾರಿಕಾ ಸಂಸ್ಥೆಯಾದ ಡಾ. ರೆಡ್ಡಿ ಲ್ಯಾಬೊರೇಟರೀಸ್‌ ಸಹಿ ಹಾಕಿದೆ. ಈ ಒಪ್ಪಂದ ಜಾರಿಗಾಗಿ ಕೇಂದ್ರ ಸರಕಾರದ ಅನುಮತಿ ಕೋರಲಾಗಿದ್ದು, “”ಅನುಮತಿ ಸಿಕ್ಕಕೂಡಲೇ ಡಾ. ರೆಡ್ಡಿ ಕಂಪನಿಯಿಂದ ಸಾಮೂಹಿಕ ಪರೀಕ್ಷೆ ಪರಿಕಲ್ಪನೆಯಡಿ 10 ಕೋಟಿ ಜನರ ಮೇಲೆ ಇದನ್ನು ಪ್ರಯೋಗಿಸಲಾಗುತ್ತದೆ” ಎಂದು ಮೂಲಗಳು ತಿಳಿಸಿವೆ.

50 ಲಕ್ಷ ಮೀರಿದ ಪ್ರಕರಣ: ದೇಶದಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಈಗ 50 ಲಕ್ಷ ದಾಟಿದೆ. ಮಂಗಳವಾರದಿಂದ ಬುಧವಾರದ ಅವಧಿಯಲ್ಲಿ 90,123 ಹೊಸ ಪ್ರಕರಣಗಳು ದೃಢಪಟ್ಟಿವೆ ಮತ್ತು 1,290 ಮಂದಿ ಅಸುನೀಗಿದ್ದಾರೆ. ದಿನಗಳಲ್ಲಿ 50 ಲಕ್ಷ ಸೋಂಕು ಪ್ರಕರಣ ದೃಢಪಟ್ಟಿರುವುದು ಗಮನಾರ್ಹವಾಗಿದೆ.

ಮಾಹಿತಿ ಇಲ್ಲ: ದೇಶಾದ್ಯಂತ ಲಾಕ್‌ಡೌನ್‌ ಜಾರಿಯಾಗಿದ್ದ ಅವಧಿಯಲ್ಲಿ ಜನರು ಅಸುನೀಗಿದ ಬಗ್ಗೆ, ಗಾಯಗೊಂಡ ಬಗ್ಗೆ ಮಾಹಿತಿ ಇಲ್ಲ ಎಂದು ರಾಜ್ಯಸಭೆಗೆ ತಿಳಿಸಿದೆ. ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಜಿ.ಕಿಶನ್‌ ರೆಡ್ಡಿ ಬುಧವಾರ ನೀಡಿದ ಲಿಖೀತ ಉತ್ತರದಲ್ಲಿ ತಿಳಿಸಿದ್ದಾರೆ.

Advertisement

“ಕೊರೊನಾ ಲಾಕ್‌ಡೌನ್‌ ಜಾರಿ ಅವಧಿಯಲ್ಲಿ ಜನರು ಅಸುನೀಗಿರುವ ಬಗ್ಗೆ, ಕೇಸು ಮತ್ತು ಎಫ್ಐಆರ್‌ ದಾಖಲಾಗಿರುವ ಬಗ್ಗೆ, ತೊಂದರೆ ನೀಡಿರುವುದರ ವಿರುದ್ಧ ಯಾವುದೇ ಕೇಸುಗಳು ದಾಖಲಾಗಿರುವ ಮಾಹಿತಿ ಇಲ್ಲ’ ಎಂದು ರೆಡ್ಡಿ ತಿಳಿಸಿದ್ದಾರೆ. ಕಾನೂನು ಸುವ್ಯವಸ್ಥೆ, ಪೊಲೀಸ್‌ ವ್ಯವಸ್ಥೆ ರಾಜ್ಯ ಸರಕಾರಗಳ ಹೊಣೆಯಾಗಿದೆ. ಹೀಗಾಗಿ, ಪ್ರಕರಣಗಳು ಏನಾದರೂ ಇದ್ದಲ್ಲಿ ರಾಜ್ಯ ಸರಕಾರಗಳೇ ಅವುಗಳ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದರು.

ಇದೇ ವೇಳೆ ಲಾಕ್‌ಡೌನ್‌ ಜಾರಿ ಮಾಡಿದ್ದರಿಂದ 29 ಲಕ್ಷಗಳಷ್ಟು ಕೊರೊನಾ ವೈರಸ್‌ ಪ್ರಕರಣಗಳನ್ನು ನಿಯಂತ್ರಿಸಲಾಗಿದೆ ಎಂಬುದಕ್ಕೆ ಯಾವ ಆಧಾರವಿದೆ ಎಂದು ಕಾಂಗ್ರೆಸ್‌ನ ಆನಂದ ಶರ್ಮಾ ಪ್ರಶ್ನೆ ಮಾಡಿದರು. ಇದೇ ವೇಳೆ ಜೂ.1ರಿಂದ ದೇಶದಲ್ಲಿ ಅನ್‌ಲಾಕ್‌ ನಿಯಮ ಜಾರಿಗೊಳಿಸಿದ ಬಳಿಕ ಅರ್ಥ ವ್ಯವಸ್ಥೆ ಚೇತರಿಸಿಕೊಂಡಿದೆ ಎಂದು ಸರಕಾರ ಹೇಳಿದೆ. ಮಾ.24ರಂದು ಮೊದಲ ಹಂತದ ಲಾಕ್‌ಡೌನ್‌ ಘೋಷಿಸಲಾಗಿತ್ತು.ಲಾಕ್‌ಡೌನ್‌ ಅವಧಿಯಲ್ಲಿ ವಿವಿಧ ದೇಶಗಳಿಂದ “ವಂದೇ ಭಾರತ್‌’ ವಿಮಾನ ಯಾನ ನಡೆಸಿದ್ದರಿಂದ ಆ.31ರ ವರೆಗೆ ಸರಕಾರಕ್ಕೆ 2,550 ಕೋಟಿ ಆದಾಯ ಬಂದಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ. ಕೇಂದ್ರ ಸರಕಾರಿ ನೌಕರರ ನಿವೃತ್ತಿ ವಯಸ್ಸಿನಲ್ಲಿ ಬದಲು ಮಾಡುವ ಇರಾದೆ ಸರಕಾರಕ್ಕೆ ಇಲ್ಲವೆಂದು ಸಿಬ್ಬಂದಿ ಖಾತೆ ಸಹಾಯಕ ಸಚಿವ ಡಾ.ಜಿತೇಂದ್ರ ಸಿಂಗ್‌ ಲೋಕಸಭೆಗೆ ತಿಳಿಸಿದ್ದಾರೆ.

224 ಆ್ಯಪ್‌ಗ್ಳಿಗೆ ನಿಷೇಧ: ರಾಷ್ಟ್ರೀಯ ಭದ್ರತೆಯನ್ನು ಗಮನಿಸಿಕೊಂಡು ಇಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಟಿಕ್‌ಟಾಕ್‌, ವಿಚಾಟ್‌ ಸೇರಿದಂತೆ 224 ಮೊಬೈಲ್‌ ಆ್ಯಪ್‌ಗ್ಳನ್ನು ನಿಷೇಧಿಸಿದೆ. ಕೇಂದ್ರ ಇಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಹಾಯಕ ಸಚಿವ ಸಂಜಯ ಧೋತ್ರೆಗೆ ಲೋಕಸಭೆಗೆ ಈ ಮಾಹಿತಿ ನೀಡಿದ್ದಾರೆ.

ಕೇರಳದಲ್ಲಿ ಉತ್ತರ ಕೊರಿಯಾ ರೀತಿಯ ನಾಯಕತ್ವ !
ಕೇರಳ ಸರಕಾರದಲ್ಲಿರುವ ನಾಯಕತ್ವ ಉತ್ತರ ಕೊರಿಯಾ ಮಾದರಿಯದ್ದಾಗಿದೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ. ಲೋಕಸಭೆಯಲ್ಲಿ ಅಕ್ರಮ ಚಿನ್ನ ಸಾಗಣೆ ವಿಚಾರ ಪ್ರಸ್ತಾಪಿಸಿ ಮಾತನಾಡಿದ ಅವರು, ಕೇರಳ ಸರಕಾರದ ಸಚಿವರು ಸ್ವಜನ ಪಕ್ಷಪಾತದಲ್ಲಿ ತೊಡಗಿದ್ದಾರೆ. ಮಂಗಳವಾರ ರಾಜ್ಯದ ವಿವಿಧೆಡೆ ನಡೆದಿದ್ದ ಪ್ರತಿಭಟನೆ ವೇಳೆ ಬಿಜೆಪಿ ಕಾರ್ಯಕರ್ತರ ಜತೆಗೆ ಪೊಲೀಸರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ದೂರಿದ್ದಾರೆ. ರಾಜ್ಯ ಸರಕಾರದ ನಾಯಕತ್ವ ಉತ್ತರ ಕೊರಿಯಾ ಮಾದರಿಯನ್ನು ಹೊಂದಿದೆ ಎಂದು ದೂರಿದರು.

ಯಾವತ್ತೂ ಮಾಸ್ಕ್ ಧರಿಸಿ
“ರಾಜ್ಯಸಭೆಯಲ್ಲಿ ಮಾಸ್ಕ್ ಧರಿಸಬೇಕು’ ಹೀಗೆನ್ನುವ ಸೂಚನೆ ನೀಡಿದ್ದು ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು. ಸಮಾಜವಾದಿ ಪಕ್ಷದ ರಾಜ್ಯಸಭೆ ಸದಸ್ಯ ರಾಮ್‌ ಗೋಪಾಲ್‌ ಯಾದವ್‌ ಉಸಿರಾಟಕ್ಕೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಾಸ್ಕ್ ತೆಗೆಯಲು ಅನುಮತಿ ಕೋರಿದರು. ಅದಕ್ಕೆ ಉತ್ತರಿಸಿದ ಸಭಾಪತಿ “ಮಾಸ್ಕ್ ಧರಿಸಿ ಮಾತನಾಡುವುದು ಮತ್ತು ಅದನ್ನು ಧರಿಸಿ ಕುಳಿತುಕೊಂಡಿರುವುದು ಕಷ್ಟ ಹೌದು. ಆದರೆ ಐಸಿಎಂಆರ್‌ನ ನಿರ್ದೇಶಕರ ಪ್ರಕಾರ ರಾಜ್ಯಸಭೆ ಹವಾನಿಯಂತ್ರಣ ವ್ಯವಸ್ಥೆ ಹೊಂದಿರುವುದರಿಂದ ಮಾಸ್ಕ್ ಧರಿಸುವುದು ಸೂಕ್ತ ಎಂಬ ಅಭಿಪ್ರಾಯ ಹೊಂದಿದ್ದಾರೆ’ ಎಂದರು.

14 ಸಂಸದರಿಗೆ ರಜೆ
ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌, ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಸೇರಿ ರಾಜ್ಯಸಭೆಯ 14 ಮಂದಿ ಸದಸ್ಯರಿಗೆ ಕಲಾಪದಿಂದ ಗೈರು ಹಾಜರಾಗಲು ಅನುಮತಿ ನೀಡಲಾಗಿದೆ. ಪಟ್ಟಿಯಲ್ಲಿ ಆಸ್ಕರ್‌ ಫ‌ರ್ನಾಂಡಿಸ್‌, ಡಾ.ನರೇಂದ್ರ ಜಾಧವ್‌, ಪರಿಮಳ ನತ್ವಾನಿ (ವೈಎಸ್‌ಆರ್‌ ಕಾಂಗ್ರೆಸ್‌), ಎ.ನವನೀತ ಕೃಷ್ಣನ್‌ (ಎಐಎಡಿಎಂಕೆ) ಪ್ರಮುಖರು. ರಾಜ್ಯಸಭೆಗೆ ಆಯ್ಕೆಯಾಗಿರುವ ಮಾಜಿ ಪ್ರಧಾನಿ
ಎಚ್‌.ಡಿ.ದೇವೇಗೌಡರೂ ವಯಸ್ಸಿನ ಕಾರಣದಿಂದ ಸಂಸತ್‌ ಅಧಿವೇಶನದಿಂದ ದೂರ ಉಳಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next