ಬೆಂಗಳೂರು : ಕಾಂಗ್ರೆಸ್ ಶಾಸಕರು ನನ್ನ ಸಂಪರ್ಕದಲ್ಲಿ ಇದ್ದಾರೆ ಎಂದು ಬಿಜೆಪಿ ಶಾಸಕ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಬಿಡುವಾಗ 36 ಜನ ನನ್ನ ಜೊತೆ ಇದ್ದರು.ಅದರಲ್ಲಿ 17 ಜನ ಮಾತ್ರ ಬಿಜೆಪಿಗೆ ಬಂದೆವು.ಉಳಿದವರೂ ನಮ್ಮ ಜೊತೆ ಇದ್ದಾರೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಅವರು ಯಾರನ್ನೂ ವಾಪಸ್ ತೆಗೆದುಕೊಳ್ಳುವುದಿಲ್ಲ ಅಂತ ಅಧಿವೇಶನದಲ್ಲಿ ಹೇಳಿದ್ದರು. ಈಗ ಯಾಕೆ ನಮ್ಮವರು ಬೇಕು ಅಂತಾರೆ ಎಂದು ಪ್ರಶ್ನಿಸಿದರು.
ದಯವಿಟ್ಟು ಸಿದ್ದರಾಮಯ್ಯ ಹಾಗೆಲ್ಲ ಮಾತಾಡಬಾರದು. 19 ಜನ ನಮ್ಮ ಸಂಪರ್ಕದಲ್ಲಿ ಇದ್ದಾರೆ. ಅದರಲ್ಲಿ 3 ಮಂದಿ ಜೆಡಿಎಸ್ ಅವರು. ಅವರನ್ನ ನಾವು ಮುಟ್ಟುವುದಿಲ್ಲ.16 ಮಂದಿ ಕಾಂಗ್ರೆಸ್ ಶಾಸಕರು ನನ್ನ ಜೊತೆ ಇದ್ದಾರೆ. ಹಿಂದೆ ಹೇಳಿದ್ದ ಜಿಲ್ಲೆಯ ಕಾಂಗ್ರೆಸ್ ಶಾಸಕರು ನಮ್ಮ ಜೊತೆ ಇದ್ದಾರೆ.ಅದರಲ್ಲಿ ನಮ್ಮ ಜಿಲ್ಲೆ ಇಬ್ಬರು ಇದ್ದಾರೆ.ಮೂರನೇ ಅವರು ಬರುವವರು ಇದ್ದಾರೆ. ಅವರನ್ನು ನಾನು ತೆಗೆದುಕೊಳ್ಳುವುದಿಲ್ಲ. ಅವರು ಬಿಜೆಪಿಗೆ ಬಂದರೆ ನಾನು ಬೇರೆ ಕಡೆ ಹೋಗುತ್ತೇನೆ ಎಂದು ಸಿದ್ದರಾಮಯ್ಯ ಅವರಿಗೆ ನೇರವಾಗಿ ಮತ್ತು ಪರೋಕ್ಷವಾಗಿ ಬಿಜೆಪಿಗೆ ಸವಾಲು ಹಾಕಿದರು.
ವಿಧಾನ ಸಭೆ ಒಳಗೆ ಏನು ಹೇಳಿದ್ದರು, ಒಮ್ಮೆ ಸಿದ್ದರಾಮಯ್ಯ ಜ್ಞಾಪಿಸಿಕೊಳ್ಳಲಿ. ಟೇಬಲ್ ಕುಟ್ಟಿ ಹೇಳಿದ್ದರು. ಯಾವುದೇ ಕಾರಣಕ್ಕೂ ಈ ದ್ರೋಹಿಗಳನ್ನ ಸೇರ್ಪಡೆ ಮಾಡಿಕೊಳ್ಳಲ್ಲ ಎಂದಿದ್ದರು. ಈಗ ಯಾಕೆ ಬೇಕು ಇವರಿಗೆ. ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗುವುದಕ್ಕೆ ಮತ್ತೆ ಕರೆಯುತ್ತಿದ್ದಾರಾ? ಯಾವುದೇ ಕಾರಣಕ್ಕೂ ಇದು ಸಾಧ್ಯವಿಲ್ಲ. ಮತ್ತೆ ಬೊಮ್ಮಯಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಬರುತ್ತದೆ ಎಂದರು.
ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ.ಅಮಿತ್ ಶಾ ನಮ್ಮ ಹೈಕಮಾಂಡ್.ನಾನು ಇಲ್ಲೆ ಇದ್ದು ಪಕ್ಷ ಸಂಘಟನೆ ಮಾಡುತ್ತೇನೆ. ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ.ಸಿಎಂ, ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ದ ಎಂದರು.