ಚಿಕ್ಕಬಳ್ಳಾಪುರ: ಅರಮನೆಯಲ್ಲಿದ್ದೂ ಆತ್ಮಹತ್ಯೆ ಮಾಡಿಕೊಂಡವರು ನಮ್ಮಲ್ಲಿದ್ದಾರೆ. ಅಮೆರಿಕದಲ್ಲಿ ವರ್ಷಕ್ಕೆ 1.8 ಲಕ್ಷ ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದಕ್ಕೆ ಕಾರಣ ಜೀವನ ಸುಖವಾಗಿಲ್ಲ. ಆದ್ದರಿಂದ ಮನುಷ್ಯ ಬಾಳಲು ಅಧ್ಯಾತ್ಮ ಮುಖ್ಯ ಎಂದು ಸದ್ಗುರು ಜಗ್ಗಿ ವಾಸುದೇವ್ ಹೇಳಿದರು.
ಈಶಾ ಕೇಂದ್ರದಲ್ಲಿ ಸೋಮವಾರ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧ್ಯಾತ್ಮ ಸಹಿತ ಎಲ್ಲ ಕ್ಷೇತ್ರದಲ್ಲೂ ಶೇ.1ರಷ್ಟು ಕಳ್ಳರಿದ್ದಾರೆ. ಆ ಕ್ಷೇತ್ರಗಳನ್ನು ಸರಿ ಮಾಡಬೇಕಾಗಿದೆ ಎಂದರು.
ಈಶಾ ಯೋಗ ಕೇಂದ್ರದಲ್ಲಿ ಸಾಂಪ್ರದಾಯಿಕ ಸಂಗೀತ, ಕಳರಿಪಯಟ್ಟು, ಯೋಗ ಒಳಗೊಂಡ ಶಿಕ್ಷಣ ನೀಡಲಾಗುವುದು. ಈಗಾಗಲೇ ಕೊಯಮತ್ತೂರಿನ ಈಶಾ ಯೋಗ ಕೇಂದ್ರದಲ್ಲಿ ಈ ಶಾಲೆ ನಡೆಯುತ್ತಿದ್ದು, ಇಲ್ಲಿಯೂ ಆರಂಭಿಸಲಾಗುವುದು ಎಂದರು.
ಆಹ್ವಾನ ಇದೆ; ಆದರೆ ಹೋಗಲಾಗುತ್ತಿಲ್ಲ
ಅಯೋಧ್ಯೆ ಮಂದಿರ ಉದ್ಘಾಟನೆಗೆ ನನಗೂ ಆಹ್ವಾನ ಬಂದಿದೆ. ಆದರೆ ಪೂರ್ವನಿಗದಿತ ಕಾರ್ಯಕ್ರಮದಿಂದಾಗಿ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.