ತೇರದಾಳ: ಗ್ರಾಮಾಂತರ ಪ್ರದೇಶದಲ್ಲೂ ಇ-ಸ್ಟಾಂಪಿಂಗ್ ಹಾಗೂ ಪಹಣಿ ಪತ್ರ ಸೌಲಭ್ಯದಿಂದ ರೈತರಿಗೆ ಅನುಕೂಲವಾಗಿದೆ ಎಂದು ನ್ಯಾಯವಾದಿ ರಮೇಶ ಸವದಿ ಹೇಳಿದರು.
ದಿ ತೇರದಾಳ ಅರ್ಬನ್ ಸೌಹಾರ್ದ ಕ್ರೆಡಿಟ್ ಸಹಕಾರಿ ಬ್ಯಾಂಕ್ ಗೋಲಭಾವಿ ಗ್ರಾಮದ ಶಾಖೆಯಲ್ಲಿ ಇ-ಸ್ಟಾಂಪಿಂಗ್ ಮತ್ತು ರೈತರಿಗೆ ಪಹಣಿ ಪತ್ರ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಗೋಲಭಾವಿ ಗ್ರಾಮದಲ್ಲಿ ಎಂಟು ಬ್ಯಾಂಕ್‌ಗಳಿದ್ದರೂಇ-ಸ್ಟಾಂಪಿಂಗ್ ವ್ಯವಸ್ಥೆ ಇರಲಿಲ್ಲ. ಇದರಿಂದ ಗ್ರಾಮದ ರೈತರು ಇ-ಸ್ಟಾಂಪಿಂಗ್‌ಗಾಗಿ ಬೇರೆ ಕಡೆಗೆ ಹೋಗಬೇಕಾಗಿತ್ತು. ಆದರೆ ತೇರದಾಳ ಸೌಹಾರ್ದ ಬ್ಯಾಂಕಿನ ಶಾಖೆಯವರು ರೈತರ ಪಹಣಿ ಪತ್ರ ಹಾಗೂ ಇ-ಸ್ಟಾಂಪಿಂಗ್ ಆರಂಭಿಸುವ ಮೂಲಕ ಗ್ರಾಮಸ್ಥರಿಗೆ ಸಹಕಾರ ನೀಡಿದ್ದಾರೆ ಎಂದು ಬಣ್ಣಿಸಿದರು.
ಸಂಸ್ಥೆಯ ಚೇರಮನ್ ಸಾಗರ ಚವಜ ಪ್ರಾಸ್ತಾವಿಕವಾಗಿ ಮಾತನಾಡಿ, ಬ್ಯಾಂಕ್ ಸ್ಥಾಪಿಸುವುದು ಮುಖ್ಯವಲ್ಲ. ಬದಲಾಗಿ ಗ್ರಾಹಕರ ಬೇಡಿಕೆ ಮತ್ತು ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿದಾಗ ಅಭಿವೃದ್ಧಿ ಹೊಂದಲು ಸಾಧ್ಯ. ತೇರದಾಳ ಸೌಹಾರ್ದ ಬ್ಯಾಂಕ್ ಗ್ರಾಹಕರ ಏಳ್ಗೆಯ ಉದ್ದೇಶ ಇಟ್ಟುಕೊಂಡು ಸಾಗುತ್ತಿದೆ ಎಂದರು.
ಮುಖಂಡರಾದ ಮಹೇಂದ್ರಗೌಡ ಪಾಟೀಲ, ಮಾರುತಿ ರೇಳೇಕರ, ಸಹಕಾರಿ ಬ್ಯಾಂಕಿನ ಜಿಎಂ ಮಹಾವೀರ ಗೌಡನವರ, ಗೋಲಭಾವಿ ಶಾಖೆಯ ಕಾರ್ಯದರ್ಶಿ ಈರಪ್ಪ ಮೇಗಾಡಿ ಪಾಲ್ಗೊಂಡಿದ್ದರು.