Advertisement

ತೇರದಾಳ: 69ನೇ ಅಖಿಲ ಭಾರತ ಸಹಕಾರ ಸಪ್ತಾಹ

10:03 PM Nov 20, 2022 | Team Udayavani |

ಮಹಾಲಿಂಗಪುರ: ಸಹಕಾರಿ ಸಂಘಗಳಲ್ಲಿ ಹೆಚ್ಚಾಗಿ ನಗದುರಹಿತ ವ್ಯವಹಾರಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಭ್ರಷ್ಟಾಚಾರ ಮತ್ತು ಅವ್ಯವಹಾರಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಜಮಖಂಡಿ ಅಮೂಲ್ಯ ಫೈನಾನ್ಸ್ ಲಿಟರೇಸಿ ಸೆಂಟರ್ ಕೌನ್ಸಿಲರ್ ವಿಟ್ಠಲ ಗುರವ ಹೇಳಿದರು.

Advertisement

ರವಿವಾರ ಸಮೀಪದ ಢವಳೇಶ್ವರ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಜಿಲ್ಲಾ ಸಹಕಾರ ಯುನಿಯನ್, ತೇರದಾಳ ಮತಕ್ಷೇತ್ರದ ಸಹಕಾರ ಸಂಘಗಳು, ಢವಳೇಶ್ವರ ಪಿಕೆಪಿಎಸ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ತೇರದಾಳ ಮತಕ್ಷೇತ್ರ ವ್ಯಾಪ್ತಿಯ 69ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದ ವಿಶೇಷ ಉಪನ್ಯಾಸಕರಾಗಿ ಮಾತನಾಡಿದ ಅವರು, ಸಹಕಾರ ಸಂಘಗಳ ಅಭಿವೃದ್ದಿಗೆ ಸಮಾಜದಲ್ಲಿರುವ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ. ಸಾಧ್ಯವಾದಷ್ಟು ಎಲ್ಲಾ ಸಹಕಾರಿ ಸಂಸ್ಥೆಗಳು ನಗದುರಹಿತ ವ್ಯವಹಾರಕ್ಕೆ ಆದ್ಯತೆ ನೀಡಬೇಕು ಎಂದರು.

ಸಮಾರಂಭವನ್ನು ಉದ್ಘಾಟಿಸಿದ ತೇರದಾಳ ಶಾಸಕ ಸಿದ್ದು ಸವದಿ ಮಾತನಾಡಿ ತಾನು ಎಲ್ಲರಿಗಾಗಿ, ಎಲ್ಲರೂ ತನಗಾಗಿ ಎಂಬ ಸಹಕಾರ ತತವದಿಂದ ಮಾತ್ರ ಸಹಕಾರಿ ಕ್ಷೇತ್ರಗಳಲ್ಲಿ ಅಭಿವೃದ್ದಿ ಸಾಧ್ಯ. ಡಿಜಿಟಲೀಕರಣದಿಂದ ಅವ್ಯವಹಾರ ತಡೆಗಟ್ಟಿ ವ್ಯವಹಾರಗಳಲ್ಲಿ ಪಾರದರ್ಶಕತೆ ತರಲು ಸಾಧ್ಯ. ಢವಳೇಶ್ವರ ಗ್ರಾಮಸ್ಥರ ಬೇಡಿಕೆಯಂತೆ ಗ್ರಾಮದಲ್ಲಿ ಬಿಡಿಸಿಸಿ ಬ್ಯಾಂಕಿನ ಶಾಖೆಯನ್ನು ಪ್ರಾರಂಭಿಸಲು ಪ್ರಯತ್ನಿಸುತ್ತೇವೆ. ಸೂಕ್ತಜಾಗೆಯನ್ನು ತೋರಿಸಿದರೆ ಗ್ರಾಮಕ್ಕೆ ಮಂಜೂರಿಯಾದ ಸರ್ಕಾರಿ ಪಿಯು ಕಾಲೇಜು ಶೀಘ್ರ ಪ್ರಾರಂಭವಾಗುತ್ತದೆ ಎಂದರು.

ಸಹಕಾರಿ ಸಪ್ತಾಹ ನಿಮಿತ್ಯ ಹಮ್ಮಿಕೊಂಡ ಕಲಾತಂಡಗಳ ಮೆರವಣಿಗೆಗೆ ಚಾಲನೆ ನೀಡಿದ ಮಾಜಿ ಸಚಿವೆ ಉಮಾಶ್ರೀ ಮಾತನಾಡಿ ಜನರಿಂದ ಜನರಿಗಾಗಿ ಹುಟ್ಟಿಕೊಂಡಿರುವ ಸಹಕಾರಿ ಸಂಸ್ಥೆಗಳು ದೇಶ-ರಾಜ್ಯದ ಅಭಿವೃದ್ದಿಯಲ್ಲಿ ಪ್ರಮುಖಪಾತ್ರ ವಹಿಸಿವೆ. ರಾಜ್ಯದಲ್ಲಿ ಸುಮಾರು 96 ಸಾವಿರಕ್ಕೂ ಅಧಿಕ ಸಹಕಾರಿ ಸಂಘ,ಸಂಸ್ಥೆಗಳು ಜನರ ಆರ್ಥಿಕಾಭಿವೃದ್ದಿಗೆ ಶ್ರಮಿಸುತ್ತಿವೆ. ಹಿಂದಿನ ಹಿರಿಯರು ಕಟ್ಟಿಬೆಳೆಸಿದ ಸಹಕಾರಿ ಸಂಸ್ಥೆಗಳನ್ನು ಕುಟುಂಬ ಆಧಾರಿತ ಮತ್ತು ಸ್ವಾರ್ಥರಹಿತವಾಗಿ ಉಳಿಸಿ-ಬೆಳೆಸಿಕೊಂಡು ಹೋಗುವದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಹೆಚ್ಚು ಹೆಚ್ಚು ಸಹಕಾರಿ ಸಂಸ್ಥೆಗಳು ಹುಟ್ಟಿಕೊಂಡು ಸಮಾಜದಲ್ಲಿನ ಜನರ ಆರ್ಥಿಕ ಅಭಿವೃದ್ದಿಗೆ ಪೂರಕವಾಗಿ ಕಾರ್ಯನಿರ್ವಹಿಸಲಿ ಎಂದರು.

ಸಹಕಾರ ಧ್ವಜಾರೋಹಣ ನೇರವೇರಿಸಿದ ಬಾಗಲಕೋಟೆ ಜಿಲ್ಲಾ ಸಹಕಾರ ಯುನಿಯನ್ ಅಧ್ಯಕ್ಷ ಕಾಶೀನಾಥ ಹುಡೇದ ಮಾತನಾಡಿ ಬಾಗಲಕೋಟೆ ಜಿಲ್ಲೆಯಲ್ಲಿ ಪಿಕೆಪಿಎಸ್, ನೇಕಾರ, ಮಹಿಳಾ, ನೌಕರ ಸಂಘ, ಜನತಾ ಬಜಾರ್ ಸೇರಿದಂತೆ ಒಟ್ಟು 1763 ಸಹಕಾರಿ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಜಮಖಂಡಿ ಉಪವಿಭಾಗದಲ್ಲಿ ಅತಿಹೆಚ್ಚು ಸಹಕಾರಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿರುವದು ಹೆಮ್ಮೆಯ ಸಂಗತಿ. ಪ್ರಸಕ್ತ ವರ್ಷ ಬಾಗಲಕೋಟೆಯ ಚಂದ್ರಶೇಖರ ಜಿಗಜಿನ್ನಿ, ಇಳಕಲ್ಲನ ಅರವಿಂದ ಮಂಗಳೂರು ಅವರಿಗೆ ರಾಜ್ಯ ಸಹಕಾರ ರತ್ನ ಪ್ರಶಸ್ತಿ ದೊರೆತಿದೆ. ಸಹಕಾರ ಕ್ಷೇತ್ರದ ಅಭಿವೃದ್ದಿಯಲ್ಲಿ ಬಾಗಲಕೋಟೆ ಜಿಲ್ಲೆಯು ರಾಜ್ಯದಲ್ಲಿಯೇ 2ನೇ ಸ್ಥಾನದಲ್ಲಿರುವದು ಹೆಮ್ಮೆಯ ಸಂಗತಿಯಾಗಿದೆ ಎಂದರು.

Advertisement

ಸಾನಿಧ್ಯವಹಿಸಿದ್ದ ಶಿರೂರ ಮಹಾಂತತೀರ್ಥ ಡಾ| ಬಸವಲಿಂಗ ಮಹಾಸ್ವಾಮಿಜಿ, ಜಿಲ್ಲಾ ಸಹಕಾರಿ ಯುನಿಯನ್ ನಿರ್ದೇಶಕ ಸುರೇಶ ಹಾದಿಮನಿ ಮಾತನಾಡಿದರು. ಢವಳೇಶ್ವರ ಪಿಕೆಪಿಎಸ್ ಅಧ್ಯಕ್ಷ ಎಸ್.ಎಂ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

ಢವಳೇಶ್ವರ ಗ್ರಾಪಂ ಅಧ್ಯಕ್ಷ ಗೋಪಾಲ ಮಾಂಗ, ವಿವಿಧ ಸಹಕಾರಿ ಮುಖಂಡರಾದ ಮಹಾದೇವ ಹಣಗಂಡಿ, ಧರೆಪ್ಪ ಆಲಗೂರ, ಸಿದ್ದಣ್ಣ ಬಿಳ್ಳೂರ, ಮಲ್ಲಿಕಾರ್ಜುನ ಹುಂಡೇಕಾರ, ಉಮೇಶ ಸಿದರಡ್ಡಿ, ಅಶೋಕಗೌಡ ಪಾಟೀಲ, ಮಹಾಲಿಂಗಪ್ಪ ನಾಯಕ, ಈರಪ್ಪ ದಿನ್ನಿಮನಿ, ಅಡಿವೆಪ್ಪ ಬಾರಿಕಾಯಿ, ಜಿ.ಎಸ್.ಗೊಂಬಿ, ಸಂಗಮೇಶ ಪಟ್ಟೇದ, ರಮೇಶ ಕಮತಗಿ, ಸಿದ್ರಾಮ ಯರಗಟ್ಟಿ, ರೇವಣೇಶ ಬ್ಯಾಳಿ, ಜಮಖಂಡಿ ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಸ್.ಆರ್.ಬಾಡಗಿ, ಸಹಕಾರ ಅಭಿವೃದ್ದಿ ಅಧಿಕಾರಿ ಶ್ರೀನಿವಾಸ ಧಾರವಾಡ, ಮುಧೋಳ ಸಹಕಾರ ಅಭಿವೃದ್ದಿ ಅಧಿಕಾರಿ ಶ್ರೀಮತಿ ಜಯಶ್ರೀ ಸವದಿ, ಎಂ.ಎಸ್.ಸಂಶಿ, ಬಸವರಾಜ ಮೇಟಿ, ಜಯರಾಮಶೆಟ್ಟಿ ಅತಿಥಿಗಳಾಗಿ ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರನ್ನಬೆಳಗಲಿ ರಾಚಯ್ಯಾ ಸಾಲಿಮಠ, ಬೈಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ನಾವಲಗಿಯ ಮಲ್ಲಪ್ಪ ಗಣಿ, ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶಿರೂರಿನ ಶ್ರೀಮತಿ ಗುರಮ್ಮ ಸಂಕಿನ ಅವರನ್ನು ಸನ್ಮಾನಿಸಲಾಯಿತು.
ಢವಳೇಶ್ವರ ಪಿಕೆಪಿಎಸ್‌ನ ಸರ್ವಸದಸ್ಯರು, ತೇರದಾಳ ಮತಕ್ಷೇತ್ರದ ಎಲ್ಲಾ ಸಹಕಾರಿ ಸಂಘಗಳ ಸದಸ್ಯರು, ಅಧಿಕಾರಿಗಳು ಇದ್ದರು. ಸಹಕಾರ ಸಪ್ತಾಹ ನಿಮಿತ್ಯ ಸಿರಿಧಾನ್ಯ ಕಾಳು, ವಿವಿಧ ಕಬ್ಬಿನ ತಳಿಯ ಸಸಿಗಳು, ಗೊಬ್ಬರ, ಔಷಧ, ಖಾದಿಬಟ್ಟೆಗಳು ಸೇರಿದಂತೆ ಹಲವು ಮಳಿಗೆಗಳ ಗ್ರಾಮೀಣ ಕೃಷಿ ಮೇಳ ಏರ್ಪಡಿಸಲಾಗಿತ್ತು. ಪಿಕೆಪಿಎಸ್ ಕಾರ್ಯಾಲಯದಿಂದ ಸಮಾರಂಭದ ವೇದಿಕೆವರೆಗೆ ವಿವಿಧ ಕಲಾಮೇಳಗಳೊಂದಿಗೆ ಮೆರವಣಿಗೆಯನ್ನು ನಡೆಸಲಾಯಿತು.

ಪ್ರಕಾಶ ಪಾಟೀಲ ರೈತಗೀತೆ ಹಾಡಿದರು. ಕೆ.ಜಿ.ನೇಗಿನಾಳ ನಿರೂಪಿಸಿದರು.ದುಂಡಪ್ಪ ಪಟ್ಟಣಶೆಟ್ಟಿ ಸ್ವಾಗತಿಸಿ-ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next