ಬೆಂಗಳೂರು: ಸಿದ್ಧಾಂತ ಎಂಬುದು ಬಂಧನವಲ್ಲ. ಸಿದ್ಧಾಂತ ಹಾಗೂ ಚಳವಳಿಯಿಂದ ಸೃಜನಶೀಲತೆಗೆ ಹೊಸ ಆಯಾಮ ದೊರಕುತ್ತದೆ ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.
ನಗರದ ಗಾಂಧಿ ಭವನದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಪ್ರೊ.ಎ.ಕೆ.ಹಂಪಣ್ಣ ಅವರ “ಬಯಲ ಜೋಗಿ’ ಸಮಗ್ರ ಕಾವ್ಯ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, “ಕೆಲವರು ಹೇಳುವಂತೆ ಸಿದ್ಧಾಂತವೆಂಬುದು ಬಂಧನವಲ್ಲ. ಸಾಹಿತಿಗಳು ಸಿದ್ಧಾಂತದಿಂದ ಸ್ಫೂರ್ತಿ ಪಡೆಯಬೇಕು. ಸಿದ್ಧಾಂತವೆಂಬುದು ಸರ್ವಾಧಿಕಾರವಲ್ಲ. ಇದರಿಂದ ಸೃಜನಶೀಲತೆಗೆ ಧಕ್ಕೆ ಬರುವುದಿಲ್ಲ’ ಎಂದು ಹೇಳಿದರು.
ಚಳವಳಿಯಲ್ಲಿ ಕ್ರಿಯಾತ್ಮಕ ಹಾಗೂ ಮನೋಧರ್ಮವೆಂಬ ವಿಧಗಳಿರುತ್ತವೆ. ಬಸವಣ್ಣನವರು ಕ್ರಿಯಾತ್ಮಕವಾಗಿ ಸಾಮಾಜಿಕ ಚಳವಳಿ ಮಾಡಿದರೆ, ಪಂಪ, ಕುವೆಂಪು, ಬೇಂದ್ರೆ ಅವರ ಮನೋಧರ್ಮವೇ ಚಳವಳಿಯಾಗಿತ್ತು. ಹಾಗೆಯೇ ಅವರ ಸೃಜನಶೀಲತೆಗೆ ಪೂರಕವಾಗಿತ್ತು’ ಎಂದು ವಿಶ್ಲೇಷಿಸಿದರು.
ಹಂಪಣ್ಣ ಅವರು ಚಳವಳಿಗಳ ನಡುವೆಯೇ ಕವಿಯಾಗಿ ಬೆಳೆದವರು. 70- 80ರ ದಶಕದಲ್ಲಿ ಸಾಹಿತಿಗಳಿಗೆ ಸಾಮಾಜಿಕ ಬದ್ಧತೆ, ಜವಾಬ್ದಾರಿ ಇರಬೇಕು ಎಂದು ಹೇಳಲಾಗುತ್ತಿತ್ತು. ಇಂದಿನ ಸಾಹಿತಿಗಳಿಗೂ ಸಾಮಾಜಿಕ ಜವಾಬ್ದಾರಿ, ಸೈದ್ಧಾಂತಿಕ ಬದ್ಧತೆಯ ಅಗತ್ಯವಿದೆ ಎಂದು ಹೇಳಿದರು.
ಕವಿ ಹಂಪಣ್ಣ ಮಾತನಾಡಿ, “ದೇಸಿ ಸೊಗಡಿನ ಕಾವ್ಯಗಳು ರಚನೆಯಾಗುತ್ತಿದ್ದರೂ ಅವುಗಳ ಬಗ್ಗೆ ವಿಮರ್ಶೆಯಾಗುತ್ತಿಲ್ಲ. ಗ್ರಾಮೀಣ ಪ್ರದೇಶದ ಬರಹಗಾರರಿಗೂ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ’ ಎಂದು ತಿಳಿಸಿದರು. ಸಾಹಿತಿ ಡಾ.ಎಲ್.ಹನುಮಂತಯ್ಯ, ಡಾ.ಮೀರಸಾಬಿಹಳ್ಳಿ ಶಿವಣ್ಣ ಇತರರು ಉಪಸ್ಥಿತರಿದ್ದರು.