ಬೆಂಗಳೂರು: ಯಾವುದೇ ಒಂದು ಸಿದ್ಧಾಂತ ಪ್ರತಿಪಾದಿಸುವವರನ್ನು ಉತ್ತಮವಾದ ವಿಮರ್ಶಕರಲ್ಲ ಎಂದು ನಿರ್ಧರಿಸುವುದು ತಪ್ಪು ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಂಗಳವಾರ ಪ್ರಕೃತಿ ಪ್ರಕಾಶನ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರಕಾಶ್ ಕೊಡಗನೂರು ಅವರ “ಏಟ್ಸ್ ಮತ್ತು ನಾನು’ಕೃತಿ ಲೋಕಾರ್ಪಣೆಗೊಳಿಸಿದರು.
ಬಳಿಕ ಮಾತನಾಡಿದ ಅವರು, ಒಂದು ಸಿದ್ಧಾಂತ ಪ್ರತಿಪಾದಿಸುವವರನ್ನು ವಿಮರ್ಶಕರು ಅಲ್ಲ ಎಂದು ಹೇಳುವ ದೊಡ್ಡ ವರ್ಗ ಕನ್ನಡ ಸಾಹಿತ್ಯ ಲೋಕದಲ್ಲಿದೆ. ಹೀಗೆ ನಿರ್ಣಯಿಸುವುದು ತಪ್ಪು ಎಂದರು. ಕುವೆಂಪು ಅವರ ಕೆಲವು ಕವಿತೆಗಳು ಸಾಮಾಜಿಕ ಆಶಯಗಳನ್ನು ಪ್ರತಿಪಾದಿಸುತ್ತವೆ. ಬಸವಣ್ಣ ನವರ ವಚನಗಳು ಧಾರ್ಮಿಕ ಸಿದ್ಧಾಂತ ಹೇಳುತ್ತವೆ. ಹೀಗಾಗಿ ಒಂದು ಸಿದ್ಧಾಂತಕ್ಕೆ ಒಳಪಡುವವರನ್ನು ಅಪರಾಧದ ರೀತಿಯಲ್ಲಿ ನೋಡುವ ಪ್ರವೃತ್ತಿ ಸರಿಯಲ್ಲ.
ಸಿದ್ಧಾಂತದ ಸವಾಲುಗಳು ಯಾವತ್ತೂ ಬೇರೆ ಬೇರೆಯಾಗಿರುತ್ತವೆ ಎಂದು ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ಉತ್ತಮ ಯುವ ಸಾಹಿತಿಗಳು ಕಾಣಿಸಿಕೊಳ್ಳುತ್ತಿದ್ದು, ಗ್ರಾಮೀಣ ಪ್ರದೇಶದಿಂದಲೂ ಯುವ ಸಾಹಿತಿಗಳ ಆಗಮನವಾಗುತ್ತಿದೆ. ಅಂತಹ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ಅಗತ್ಯ ಎಂದರು.
ಪ್ರಕಾಶ್ ಕೊಡಗನೂರು ಅವರ ಕೃತಿಯ ಸಾಲುಗಳಲ್ಲಿ ಶಕ್ತಿಯಿದೆ.ಹೀಗಾಗಿ ಮುಂದಿನ ದಿನಗಳಲ್ಲಿ ಉತ್ತಮ ಸಾಹಿತಿಯಾಗಿ ರೂಪಗೊಳ್ಳುವ ಎಲ್ಲಾ ಲಕ್ಷಣಗಳು ಪ್ರಕಾಶ್ ಅವರ ಬರಹದಲ್ಲಿದೆ ಎಂದು ಹೇಳಿದರು. ವಿಮರ್ಶಕ ಡಾ.ಬೈರಮಂಗಲ ರಾಮೇಗೌಡ ಮಾತನಾಡಿ, ಹಲವು ವರ್ಷಗಳ ನಂತರ ಕವಿ ಪ್ರಕಾಶ್ ಕೊಡಗನೂರು ಅವರು ಉತ್ತಮವಾದ ಕಾವ್ಯ ಸಂಕಲವನ್ನು ಹೊರತಂದಿದ್ದಾರೆ.
ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಕವಿತೆಗಳು ಇವರ ಲೇಖನಿಯಲ್ಲಿ ಹೊರಹೊಮ್ಮಲಿ ಎಂದು ಆಶಿಸಿದರು. ಬೆಂ.ವಿ.ವಿ.ಯ ಕನ್ನಡ ಪ್ರಾಧ್ಯಾಪಕ ಡಾ.ರಾಜಪ್ಪ ದಳವಾಯಿ, ಕವಿ ಪ್ರಕಾಶ್ ಕೊಡಗನೂರು, ಪ್ರಕೃತಿ ಪ್ರಕಾಶನದ ಎಚ್.ಎನ್.ಗೋಪಾಲಕೃಷ್ಣ, ಜನ ಪ್ರಕಾಶನದ ಬಿ.ರಾಜಶೇಖರ ಮೂರ್ತಿ ಉಪಸ್ಥಿತರಿದ್ದರು.