ಹುಬ್ಬಳ್ಳಿ: ಮಹದಾಯಿಯಿಂದ ಹನಿ ನೀರನ್ನು ಕರ್ನಾಟಕಕ್ಕೆ ನೀಡುವುದಿಲ್ಲವೆಂದು ಈ ಹಿಂದೆ ಗೋವಾದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿಕೆ ನೀಡಿದ್ದಾಗ, ರಾಜ್ಯಬಿಜೆಪಿ ನಾಯಕರು ಮುಗಿಬಿದ್ದು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಮಹಾರಾಷ್ಟ್ರ ಚುನಾವಣೆ ವೇಳೆ, ಅದೇ ಬಿಜೆಪಿ ನಾಯಕರು ಸಾಧಕ-ಬಾಧಕ, ಭವಿಷ್ಯದ ಸಮಸ್ಯೆ ಬಗ್ಗೆ ಯೋಚಿಸದೆ ರಾಜ್ಯದಿಂದ ಮಹಾರಾಷ್ಟ್ರದ ಜತ್ತ್ ತಾಲೂಕಿಗೆ ನೀರು ನೀಡುವುದಾಗಿ ಹೇಳಿರುವುದು ರಾಜ್ಯದ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಸತತ ಬರದಿಂದ ಕೃಷ್ಣಾ, ಭೀಮಾ, ಘಟಪ್ರಭಾ, ಮಲಪ್ರಭಾ ನದಿಗಳು ಸಂಪೂರ್ಣ ಬತ್ತಿದ್ದರಿಂದ ಮಾನವೀಯತೆ ನೆಲೆಯಲ್ಲಿ ನೀರು ನೀಡುವಂತೆ ಮಹಾರಾಷ್ಟ್ರಕ್ಕೆ ಪರಿಪರಿಯಾಗಿ ಬೇಡಿದರೂ, ಬಿಜೆಪಿ ನಿಯೋಗ ಹೋದರೂ, ರಾಜ್ಯ ಸರ್ಕಾರ ಮನವಿ ಮೇಲೆ ಮನವಿ ಮಾಡಿದರೂ ಹನಿ ನೀರು ಬಿಡದ ಮಹಾರಾಷ್ಟ್ರಕ್ಕೆ, ವಿಜಯಪುರ ಜಿಲ್ಲೆ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯಿಂದ ಜತ್ತ್ ತಾಲೂಕಿಗೆ ನೀರು ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಹಾರಾಷ್ಟ್ರ ಚುನಾವಣೆ ಪ್ರಚಾರದಲ್ಲಿ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ವಿಲನ್ ಆಗಬೇಕಾದೀತು?: ಈ ಹಿಂದೆ ಗೋವಾ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಲಾಭ ಮಾಡಿಕೊಳ್ಳುವ ಉದ್ದೇಶದಿಂದಲೇ ಸೋನಿಯಾ ಗಾಂಧಿ ಅಲ್ಲಿನ ಚುನಾವಣೆ ಪ್ರಚಾರ ಸಭೆಯಲ್ಲಿ ಮಹದಾಯಿಯಿಂದ ಹನಿ ನೀರನ್ನು ಬಿಡುವುದಿಲ್ಲ ಎಂದು ಹೇಳಿಕೆ ನೀಡಿದ್ದರು ಎಂದು ರಾಜ್ಯದ ಬಿಜೆಪಿ ನಾಯಕರು ಬಹುದೊಡ್ಡ ರೀತಿಯಲ್ಲಿ ಆರೋಪ ಮಾಡಿದ್ದರು. ಕಳಸಾ-ಬಂಡೂರಿ, ಮಹದಾಯಿ ವಿಚಾರ ಬಂದಾಗಲೆಲ್ಲ, ಸಭೆ-ಸಮಾರಂಭಗಳಲ್ಲಿ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಸೋನಿಯಾ ಗಾಂಧಿ ಹೇಳಿಕೆಯನ್ನು ಅಸ್ತ್ರವಾಗಿ ಇಂದಿಗೂ ಬಳಕೆ ಮಾಡುತ್ತಿದ್ದಾರೆ. ಆ ವಿಚಾರದಲ್ಲಿ ಸೋನಿಯಾ ಗಾಂಧಿಯನ್ನು ವಿಲನ್ ರೀತಿ ಬಿಂಬಿಸಲಾಗಿತ್ತು. ಇದೀಗ ಅದೇ ಬಿಜೆಪಿ ನಾಯಕರು ರಾಜ್ಯದ ಹಿತ ಕಡೆಗಣಿಸುವ ನಿಟ್ಟಿನಲ್ಲಿ ಹೇಳಿಕೆ ನೀಡಿದ್ದು, ಈಗ ಯಾರು ವಿಲನ್ ಪಾತ್ರ ವಹಿಸಿಕೊಳ್ಳಬೇಕು ಎಂಬ ಪ್ರಶ್ನೆ ಅನೇಕರದ್ದಾಗಿದೆ. ಮಹಾರಾಷ್ಟ್ರದವರು ಸಣ್ಣದೊಂದು ಅವಕಾಶ ನೀಡಿದರೂ ಎಲ್ಲವನ್ನು ತಮ್ಮದಾಗಿಸಿಕೊಳ್ಳುವಲ್ಲಿ ನಿಸ್ಸೀಮರು. ಗೋವಾದಲ್ಲಿ ತನ್ನ ಪಕ್ಷಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸೋನಿಯಾ ಗಾಂಧಿ ಹೇಳಿಕೆ ನೀಡಿ ತಪ್ಪು ಮಾಡಿದ್ದರು. ಇದೀಗ ಬಿಜೆಪಿ ನಾಯಕರು ಸಹ ಮಹಾರಾಷ್ಟ್ರ ವಿಚಾರದಲ್ಲಿ ಅಂತಹದ್ದೇ ತಪ್ಪು ಮಾಡಿದ್ದಾರೆ ಎಂದೆನಿಸದೆ ಇರದು.
ನೀರು ನೀಡಿಕೆ ಸುಲಭವೇ?: ಬಿ.ಎಸ್. ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಒಂದಿಷ್ಟು ಯೋಚನೆ ಮಾಡಿದ್ದರೂ ಇಂತಹ ಹೇಳಿಕೆ ಹೊರ ಬೀಳುತ್ತಿರಲಿಲ್ಲವೇನೊ ಎಂದೆನಿಸುತ್ತದೆ. ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ರೂಪುಗೊಂಡಿರುವುದು ವಿಜಯಪುರ ಹಾಗೂ ಬೆಳಗಾವಿ ಜಿಲ್ಲೆ ಕೆಲ ತಾಲೂಕಗಳಿಗೆ ನೀರಾವರಿ ಉದ್ದೇಶದಿಂದ.
ಕೃಷ್ಣಾ ನದಿಯಿಂದ ಸುಮಾರು 6.3 ಟಿಎಂಸಿ ಅಡಿ ನೀರು ಪಡೆದು ಅಂದಾಜು 1.33 ಲಕ್ಷ ಎಕರೆ ಪ್ರದೇಶಕ್ಕೆ ನೀರು ನೀಡುವುದಾಗಿದೆ. ಯೋಜನೆ ಸ್ಥಿತಿಗತಿ ಅರಿಯದೇ, ಯಾರೋ ಬರೆದುಕೊಟ್ಟ ಮಾಹಿತಿ ಓದಿ ಮುಖ್ಯಮಂತ್ರಿಯವರು ಪೇಚಿಗೆ ಸಿಲುಕಿದರೆ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಮಹಾರಾಷ್ಟ್ರದೊಂದಿಗೆ ನೀರಿಗೆ ನೀರು ಒಪ್ಪಂದದ ಅನ್ವಯ ಈ ಹೇಳಿಕೆ ನೀಡಿದ್ದಾರೆ ಎಂದಾದರೂ, ಒಪ್ಪಂದದಲ್ಲಿ ನಮ್ಮ ಹಾಗೂ ಅವರ ಬೇಡಿಕೆ ಏನು, ಷರತ್ತುಗಳೇನು, ಯಾವ ವೇಳೆ ಹಾಗೂ ಎಷ್ಟು ನೀರು ನೀಡುವ-ಪಡೆಯುವುದಾಗಬೇಕು ಎಂಬುದೇ ಇನ್ನೂ ಸ್ಪಷ್ಟವಾಗಿಲ್ಲ. ಮುಖ್ಯಮಂತ್ರಿಯವರ ಹೇಳಿಕೆಯನ್ನೇ ಮಹಾರಾಷ್ಟ್ರದವರು ಮುಂದೆ ಹಕ್ಕು ರೂಪದಲ್ಲಿ ಮಂಡನೆಗೆ ಮುಂದಾದರೂ ಅಚ್ಚರಿ ಇಲ್ಲ.
ನೀರು ನೀಡಿಕೆ ಅತ್ಯಂತ ಸೂಕ್ಷ್ಮ ವಿಷಯ. ಈ ಬಗ್ಗೆ ಹಲವು ಮಗ್ಗಲುಗಳ ಯೋಚನೆ ಮಾಡದೆ ಹೇಳಿಕೆ ನೀಡಿದರೆ ಮುಂದೆ ಕಂಟಕವಾಗುತ್ತದೆ ಎಂಬುದಕ್ಕೆ ಅನೇಕ ಉದಾಹರಣೆಗಳಿವೆ. ಕೃಷ್ಣಾ ನದಿ ನೀರು ಹಂಚಿಕೆ ವಿಚಾರ, ಆಲಮಟ್ಟಿ ಜಲಾಶಯ ಎತ್ತರ ವಿಚಾರದಲ್ಲಿ ಅನುಭವಿಸಿಯಾಗಿದೆ. ಈ ಹಿಂದೆ ನೀರಾವರಿ ಸಚಿವರಾಗಿದ್ದ ಕೆ.ಎನ್. ನಾಗೇಗೌಡ, ಆಲಮಟ್ಟಿ ಜಲಾಶಯ ಎತ್ತರ ನಿಟ್ಟಿನಲ್ಲಿ ನೀಡಿದ ಹೇಳಿಕೆ ಬಳಸಿಕೊಂಡು ಆಂಧ್ರಪ್ರದೇಶ ಸರಕಾರ ತನ್ನ ರೈತರಿಂದ ಸುಪ್ರೀಂ ಕೋರ್ಟ್ ಮೊರೆ ಹೋಗುವಂತೆ ಮಾಡಿ, ಅಳವಡಿಸಿದ್ದ ಕ್ರಸ್ಟ್ ಗೇಟ್‌ಗಳನ್ನೇ ಕತ್ತರಿಸುವಂತೆ ಮಾಡಿತ್ತು
-ಅಮರೇಗೌಡ ಗೋನವಾರ