ನಟಿ ಮಾನಸ ಜೋಶಿ ಮತ್ತೆ ಸುದ್ದಿಯಲ್ಲಿದ್ದಾರೆ. “ಕಿರಗೂರಿನ ಗಯ್ಯಾಳಿಗಳು’ ಹಾಗೂ “ಯಶೋಗಾಥೆ’ ಸಿನಿಮಾಗಳ ಮೂಲಕ ಗುರುತಿಸಿಕೊಂಡಿದ್ದ ಮಾನಸ ಜೋಶಿ, ಒಂದು ಗ್ಯಾಪ್ ಬಳಿಕ ಇದೀಗ ಹೊಸ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು, ಮಾನಸ ಜೋಶಿ, ಈಗ “ಅಮೃತ್ ಆಪಾರ್ಟ್‌ಮೆಂಟ್ಸ್’ ಎಂಬ ಹೊಸ ಚಿತ್ರದಲ್ಲಿ ನಟಿಸಿದ್ದಾರೆ. ವಿಶೇಷವೆಂದರೆ, ಆ ಚಿತ್ರದಲ್ಲಿ ಅವರು ಎಸಿಪಿ ರತ್ನಪ್ರಭ ಪಾತ್ರ ನಿರ್ವಹಿಸುತ್ತಿದ್ದಾರೆ.
ಅಂದಹಾಗೆ, ಇದೇ ಮೊದಲ ಬಾರಿಗೆ ಅವರು ಪೊಲೀಸ್ ಅಧಿಕಾರಿ ಪಾತ್ರ ನಿರ್ವಹಿಸುತ್ತಿದ್ದಾರೆ. ಒಳ್ಳೆಯ ಹೈಟು, ಪರ್ಸನಾಲಿಟಿ ಇರುವ ಕಾರಣಕ್ಕೆ ಎಸಿಪಿ ರತ್ನಪ್ರಭ ಪಾತ್ರ ಅವರ ಪಾಲಾಗಿದೆ. ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದಿದ್ದು, ಸದ್ಯಕ್ಕೆ ಬಿಡುಗಡೆಯ ತಯಾರಿಯಲ್ಲಿದೆ ಚಿತ್ರತಂಡ. ಈ ಚಿತ್ರವನ್ನು ಗುರುರಾಜ್ ಕುಲಕರ್ಣಿ ನಿರ್ದೇಶನ ಮಾಡುತ್ತಿದ್ದು, ನಿರ್ಮಾಣದ ಜವಾಬ್ದಾರಿಯನ್ನೂ ಅವರೇ ವಹಿಸಿಕೊಂಡಿದ್ದಾರೆ.
ಈ ಚಿತ್ರದ ಕಥೆ ಮತ್ತು ಪಾತ್ರ ಕೇಳಿದ ಮಾನಸ ಜೋಶಿ ಅವರಿಗೆ, ಇದರಲ್ಲೇನೋ ವಿಶೇಷವಿದೆ ಅಂದುಕೊಂಡು ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. “ಅಮೃತ್ ಅಪಾರ್ಟ್‌ಮೆಂಟ್ಸ್’ ಕುರಿತು ಹೇಳುವ ಮಾನಸ ಜೋಶಿ, “ಚಿತ್ರದ ಕಥೆ ಮತ್ತು ಪಾತ್ರ ಗಟ್ಟಿಯಾಗಿದೆ. ನಾನಿಲ್ಲಿ ಎಸಿಪಿ ರತ್ನಪ್ರಭ ಅವರ ಪಾತ್ರ ಮಾಡಿದ್ದಾರೆ. ಅದೊಂದು ರೀತಿಯ ಪಕ್ಕಾ ತನಿಖಾಧಿಕಾರಿಯಾಗಿ ಅದರಲ್ಲೂ ರಗಡ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದೇನೆ.
ನಾನು ಮೊದಲಿನಿಂದಲೂ ಸಿನಿಮಾ ಆಯ್ಕೆ ವಿಚಾರದಲ್ಲಿ ತುಂಬಾ ಎಚ್ಚರ ವಹಿಸುತ್ತೇನೆ. ಕಥೆ ಹೇಗಿದೆ, ಪಾತ್ರವನ್ನು ಹೇಗೆ ಕಟ್ಟಿದ್ದಾರೆ ಎಂಬುದನ್ನು ಗಮನಿಸಿ, ಅದು ನನಗೆ ಸೂಕ್ತವಾಗಿದೆಯೋ ಇಲ್ಲವೋ ಎಂಬುದನ್ನು ಅರಿತು, ಆಯ್ಕೆ ಮಾಡಿಕೊಳ್ಳುತ್ತೇನೆ. ನನಗೆ ಈವರೆಗೆ ಸಿಕ್ಕಿರುವ ಪಾತ್ರಗಳೂ ಹಾಗೇ ಇವೆ. ಇದೇ ಮೊದಲ ಸಲ ನಾನು ಎಸಿಪಿ ಪಾತ್ರ ನಿರ್ವಹಿಸಿದ್ದೇನೆ. ಅದರಲ್ಲೂ ಯೂನಿಫಾರಂ ಧರಿಸಿ, ನಟನೆ ಮಾಡುವ ಥ್ರಿಲ್ ಮಜ ಕೊಡುತ್ತದೆ. ನಾನು ಆ ಪಾತ್ರವನ್ನು ತುಂಬಾ ಎಂಜಾಯ್ ಮಾಡಿದ್ದೇನೆ. ಇಂಥದ್ದೊಂದು ಅವಕಾಶ ಕೊಟ್ಟ ತಂಡಕ್ಕೆ ಥ್ಯಾಂಕ್ಸ್ ಹೇಳ್ತೀನಿ’ ಎಂಬುದು ಮಾನಸ ಜೋಶಿ ಅವರ ಮಾತು.
ಅಂದಹಾಗೆ, ಇದೊಂದು ಗಂಡ-ಹೆಂಡತಿ ನಡುವಿನ ಕಥೆ. ಒಂದು ಮಿಸ್ಟ್ರಿ ಸ್ಟೋರಿ ಇಲ್ಲಿದೆ. ಒಂದು ಅಪಾರ್ಟ್‌ಮೆಂಟ್‌ನಲ್ಲಿ ನಡೆಯುವ ಘಟನೆ ಹೇಗೆಲ್ಲಾ ತಿರುವು ಪಡೆದುಕೊಳ್ಳುತ್ತೆ, ಅದರಿಂದ ಯಾರೆಲ್ಲಾ ಸಮಸ್ಯೆ ಎದುರಿಸುತ್ತಾರೆ. ಅಸಲಿಗೆ ಅಲ್ಲಿ ನಡೆಯುವ ಘಟನೆ ಎಂಥದ್ದು ಎಂಬುದಕ್ಕೆ ಸಿನಿಮಾ ಬರುವವರೆಗೆ ಕಾಯಬೇಕು. ಚಿತ್ರಕ್ಕೆ ಅರ್ಜುನ್ ಅಜಿತ್ ಛಾಯಾಗ್ರಹಣವಿದೆ. ಎಸ್.ಡಿ.ಅರವಿಂದ್ ಸಂಗೀತವಿದ್ದು, ಕೆ.ಕಲ್ಯಾಣ್, ವಿ.ಮನೋಹರ್, ಡಾ.ಬಿ.ಆರ್.ಪೋಲೀಸ್ ಪಾಟೀಲ್ ಗೀತೆ ರಚಿಸಿದ್ದಾರೆ.