ಚಿಕ್ಕಮಗಳೂರು: ಮೊದಲ ಬಾರಿ ಕೋವಿಡ್ 19 ಸೋಂಕು ದೃಢಪಟ್ಟು, ಬಳಿಕ ಆರು ಬಾರಿ ಮರುಪರೀಕ್ಷೆ ನಡೆಸಿದಾಗಲೂ ನೆಗೆಟಿವ್ ಎಂದು ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಫಾಲ್ಸ್ ಪಾಸಿಟಿವ್’ ಎಂದು ಘೋಷಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಹಾಸನ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಆತಂಕ ಮೂಡಿಸಿದ್ದ ಮೂಡಿಗೆರೆ ತಾಲೂಕು ವೈದ್ಯರೊ ಬ್ಬರ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, 6 ಬಾರಿ ನೆಗೆಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಕೋವಿಡ್-19 ಆಸ್ಪತ್ರೆಯಿಂದ ಅವರನ್ನು ಬಿಡುಗಡೆ ಮಾಡಲಾಗಿದೆ.
ರಾಜ್ಯ ಸರ್ಕಾರದ ನಿರ್ದೇಶನದಂತೆ ಕೋವಿಡ್ 19 ವಾರಿಯರ್ಗೆ ಸಾಮೂಹಿಕ ಪರೀಕ್ಷೆ ನಡೆಸಿದ ಸಂದರ್ಭ ಮೂಡಿಗೆರೆ ತಾಲೂಕಿನ ಸರ್ಕಾರಿ ವೈದ್ಯರ ಗಂಟಲದ್ರವ ಮತ್ತು ರಕ್ತದ ಮಾದರಿ ಪರೀಕ್ಷೆಯಲ್ಲಿ ಸೋಂಕಿನ ಲಕ್ಷಣ ಕಂಡುಬಂದು ಜಿಲ್ಲೆಯಲ್ಲಿ ಮೊದಲ ಕೋವಿಡ್ 19 ಪ್ರಕರಣ ದಾಖಲಾಗಿತ್ತು. ಅನಂತರ ವೈದ್ಯರನ್ನು ನಗರದ ಜಿಲ್ಲಾಸ್ಪತ್ರೆಯಲ್ಲಿ ತೆರೆಯಲಾಗಿರುವ ಕೋವಿಡ್-19 ವಿಶೇಷ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
ವೈದ್ಯರಲ್ಲಿ ಯಾವುದೇ ಸೋಂಕಿನ ಲಕ್ಷಣಗಳು ಕಂಡು ಬರದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಜಿಲ್ಲಾಡಳಿತ ಮರು ಪರೀಕ್ಷೆಗೆ ಒಳಪಡಿಸಿತ್ತು. ಮರು ಪರೀಕ್ಷೆಯಲ್ಲಿ ನೆಗೆಟಿವ್ ಅಂಶ ಕಂಡುಬಂ ದ ಹಿನ್ನೆಲೆಯಲ್ಲಿ ಇದೊಂದು ಸಂದೇಹಾಸ್ಪದ ಪ್ರಕರಣವೆಂದು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ ಹಾಸನ ಹಾಗೂ ಶಿವಮೊಗ್ಗ ಪ್ರಯೋಗಾಲಯಕ್ಕೆ ಗಂಟಲದ್ರವ ಹಾಗೂ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದು,
ಈ ಎಲ್ಲಾ ವರದಿಗಳು ನೆಗೆಟಿವ್ ಬಂದಿದೆ. ಅನಂತರ ಗೊಂದಲಕ್ಕೆ ಸಿಲುಕಿದ ಜಿಲ್ಲಾಡಳಿತ ಮೊದಲು ಸಂಗ್ರಹಿಸಿದ್ದ ವೈದ್ಯರ ಗಂಟಲದ್ರವ ಹಾಗೂ ರಕ್ತದ ಮಾದರಿಯನ್ನು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ರವಾನಿಸಿ ಪರೀಕ್ಷೆಗೆ ಒಳಪಡಿಸಿದ ನಂತರವೂ ನೆಗೆಟಿವ್ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಫಾಲ್ಸ್ ಪಾಸಿಟಿವ್ ಪ್ರಕರಣವೆಂದು ಘೋಷಿಸಲಾಗಿದೆ. ವೈದ್ಯರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ ಸಾವಿರಕ್ಕೂ ಅಧಿಕ ಕ್ವಾರಂಟೈನ್‌ನಲ್ಲಿರಿಸಿದ್ದ ಜನರನ್ನು ಬಿಡುಗಡೆಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್ ತಿಳಿಸಿದ್ದಾರೆ.
ವೈದ್ಯರ ಕೋವಿಡ್ 19 ಸೋಂಕು ಪ್ರಕರಣದಿಂದ ಕಂಗೆಟ್ಟಿದ್ದ ಮಲೆನಾಡಿನ ಜನರು ಸದ್ಯ ವರದಿ ನೆಗೆಟಿವ್ ಬಂದಿದ್ದು ನಿಟ್ಟುಸಿರು ಬಿಡುವಂತಾಗಿದೆ.
ವೈದ್ಯರಲ್ಲಿ ಯಾವುದೇ ಗುಣಲಕ್ಷಣ ಗಳು ಕಂಡು ಬರದ ಹಿನ್ನೆಲೆಯಲ್ಲಿ ಮರು ಪರೀಕ್ಷೆಗೊಳಪಡಿಸಲಾಗಿತ್ತು. ವರದಿಯಲ್ಲಿ ನೆಗೆಟಿವ್ ಅಂಶ ಕಂಡು ಬಂದ ಹಿನ್ನೆಲೆಯಲ್ಲಿ ಆರು ಬಾರಿ ಮರು ಪರೀಕ್ಷೆ ನಡೆಸಿದ್ದು, ಎಲ್ಲದರಲ್ಲೂ ನೆಗೆಟಿವ್ ಎಂದು ಕಂಡು ಬಂದ ಹಿನ್ನೆಲೆಯಲ್ಲಿ ಫಾಲ್ಸ್ ಪಾಸಿಟಿವ್’ ಪ್ರಕರಣ ವೆಂದು ಪರಿಗಣಿಸಲಾಗಿದೆ. ಸಾಮಾನ್ಯವಾಗಿ 10 ಸಾವಿರ ಪ್ರಕರಣಗಳಲ್ಲಿ ಇಂತಹ ಒಂ ದೊಂದು ಪ್ರಕರಣಗಳು ಕಂಡು ಬರುತ್ತವೆ.
-ಡಾ| ಬಗಾದಿ ಗೌತಮ್, ಜಿಲ್ಲಾಧಿಕಾರಿ