Advertisement
ಕಡಬ: ಜೀವನೋಪಾಯಕ್ಕಾಗಿ ತಂದೆಗಿದ್ದದ್ದು ಪುಟ್ಟ ಕ್ಯಾಂಟೀನ್. ಅದೇ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತ, ವಿದ್ಯಾಭ್ಯಾಸ ಪೂರೈಸಿ ಸೈನಿಕನಾಗಬೇಕು ಎಂಬ ತಮ್ಮ ಆಕಾಂಕ್ಷೆ ಯನ್ನು ಈಡೇರಿಸಿಕೊಂಡವರು ಹವಾಲ್ದಾರ್ ಹರಿಪ್ರಸಾದ್ ಕೆ. ಭೂಸೇನೆಯ ವಾಯುರಕ್ಷಣಾ ವಿಭಾಗದ ಆಕಾಶ್ ಕ್ಷಿಪಣಿ ರೆಜಿಮೆಂಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹರಿಪ್ರಸಾದ್, ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಕೊಡೆಂಕಿರಿ ಮನೆಯವರು. ಸೇನೆಯಲ್ಲಿ ಕಳೆದ 16 ವರ್ಷಗಳಿಂದ ಸಾರ್ಥಕ ಸೇವೆ ಸಲ್ಲಿಸಿದ್ದಾರೆ.
ಹರಿಪ್ರಸಾದ್ ಅವರು ಪ್ರಾಥಮಿಕ ಶಿಕ್ಷಣವನ್ನು ಕೊಳ್ತಿಗೆಯ ಪೆರ್ಲಂಪಾಡಿ ಸರಕಾರಿ ಶಾಲೆಯಲ್ಲಿ ಹಾಗೂ ಪ್ರೌಢ ಶಿಕ್ಷಣವನ್ನು ಬೆಳ್ಳಾರೆಯ ಸರಕಾರಿ ಪ್ರೌಢಶಾಲೆಯಲ್ಲಿ ಪಡೆದು ಬಳಿಕ ಸುಳ್ಯದ ಕೆವಿಜಿ ಐಟಿಐನಲ್ಲಿ ವ್ಯಾಸಂಗ ಮಾಡಿದ್ದಾರೆ. ವಿದ್ಯಾರ್ಥಿಯಾಗಿದ್ದಾಗಲೇ ಕಬಡ್ಡಿ, ವಾಲಿಬಾಲ್, ಓಟ ಇತ್ಯಾದಿ ಕ್ರೀಡಾ ಚಟುವಟಿಕೆಗಳಲ್ಲಿ ಅವರು ಮುಂದಿದ್ದರು. ಈ ಹಿನ್ನೆಲೆಯಲ್ಲಿ ಪೆರ್ಲಂಪಾಡಿಯಲ್ಲಿ ಹರಿಪ್ರಸಾದ್ ಅವರ ತಂದೆಯ ಕ್ಯಾಂಟೀನ್‌ಗೆ ಮಧ್ಯಾಹ್ನ ಊಟಕ್ಕೆ ಬರುತ್ತಿದ್ದ ದೈಹಿಕ ಶಿಕ್ಷಣ ಶಿಕ್ಷಕ ಸುರೇಶ್ ಪಾಲ್ತಾಡಿ ಸೇನೆಗೆ ಸೇರುವಂತೆ ಪ್ರೇರೇಪಣೆ ನೀಡಿದ್ದರು. ಐಟಿಐ ಬಳಿಕ ಸುಳ್ಯದ ಗ್ಯಾರೇಜ್ ಒಂದರಲ್ಲಿ ಮೆಕ್ಯಾನಿಕ್ ಆಗಿದ್ದರೂ, ಸೇನೆಗೆ ಸೇರುವ ಉತ್ಸಾಹದಿಂದ 2002ರಲ್ಲಿ ಮಂಗಳೂರಿನ ಕದ್ರಿಯಲ್ಲಿ ನಡೆದ ಸೇನಾ ನೇಮಕಾತಿ ರ್ಯಾಲಿಯಲ್ಲಿ ಭಾಗಿಯಾಗಿ ಆಯ್ಕೆಯಾಗಿದ್ದರು. ಸೇನೆಗೆ ಸೇರುವಲ್ಲಿ ಹೆತ್ತವರ, ಸೋದರರ ಪ್ರೋತ್ಸಾಹವೂ ಇತ್ತು. ಇದು ದೇಶಸೇವೆಗೆ ಅವಕಾಶ ಕಲ್ಪಿಸಿದೆ. ಇಲ್ಲದೇ ಹೋಗಿದ್ದರೆ ಇಂದು ನಾನು ಯಾವುದೋ ಗ್ಯಾರೇಜ್‌ನಲ್ಲಿ ಮೆಕ್ಯಾನಿಕ್ ಆಗಿರುತ್ತಿದ್ದೆ ಎನ್ನುತ್ತಾರೆ.
ಸೇನೆಯ ಕ್ರೀಡಾ ತಂಡದೊಂದಿಗೆ ಕ್ರೀಡಾಳುವಾಗಿ. ಕುಟುಂಬ
ಬೆಳಿಯಪ್ಪ ಗೌಡ ಮತ್ತು ತಾರಾವತಿ ಹರಿಪ್ರಸಾದ್ ಅವರ ಹೆತ್ತವರು. ಶಿಕ್ಷಕಿ ವನಿತಾ ಅವರನ್ನು 2012ರಲ್ಲಿ ವರಿಸಿದ್ದಾರೆ. ಹರಿಪ್ರಸಾದ್ ದಂಪತಿ ಪುತ್ರ ಅಲೋಕ್ ಜೊತೆ ಅಮೃತಸರದಲ್ಲಿ ವಾಸ್ತವ್ಯದಲ್ಲಿದ್ದಾರೆ. ಪುತ್ರ ಅಲೋಕ್ ಜಲಂಧರ್‌ನ ಆರ್ಮಿ ಪಬ್ಲಿಕ್ ಸ್ಕೂಲ್‌ನಲ್ಲಿ ಯುಕೆಜಿಯಲ್ಲಿ ಕಲಿಯುತ್ತಿದ್ದಾನೆ. ಅನಾರೋಗ್ಯ ಮತ್ತು ವೃದ್ಧಾಪ್ಯದ ಕಾರಣದಿಂದಾಗಿ ಕ್ಯಾಂಟೀನ್ ಮುಚ್ಚಿರುವ ತಂದೆ-ತಾಯಿ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದಾರೆ. ಅಣ್ಣ ಗುರುಪ್ರಸಾದ್ ವಿದೇಶದಲ್ಲಿ ಉದ್ಯೋಗಿಯಾಗಿದ್ದು, ತಮ್ಮ ಜಯರಾಮ ಊರಿನಲ್ಲಿ ಸಹಕಾರಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಪತ್ನಿ ಮತ್ತು ಪುತ್ರನೊಂದಿಗೆ.
Related Articles
2002ರಲ್ಲಿ ಸೇನೆಗೆ ಸೇರ್ಪಡೆಗೊಂಡು ಮಹಾರಾಷ್ಟ್ರದ ನಾಸಿಕ್‌ನಲ್ಲಿ ತರಬೇತಿ ಮುಗಿಸಿದ ಬಳಿಕ ಗುಜರಾತ್‌ನ ವಡೋದರ, ಸೂರತ್, ಪಂಜಾಬ್‌ನ ಭಟಿಂಡ, ಜಲಂಧರ್ ಮುಂತಾದೆಡೆ ಹರಿಪ್ರಸಾದ್ ಸೇವೆ ಸಲ್ಲಿಸಿದ್ದಾರೆ. 2 ವರ್ಷ ರಾಷ್ಟ್ರೀಯ ರೈಫಲ್ಸ್‌ನ ವಿಭಾಗದಲ್ಲಿ ಜಮ್ಮು-ಕಾಶ್ಮೀರದಲ್ಲಿ ಸೇವೆ ಸಲ್ಲಿಸಿದ ಅನುಭವ ರೋಚಕ ಎನ್ನುತ್ತಾರೆ. 2014ರಲ್ಲಿ ಅವರಿಗೆ ಪದೋನ್ನತಿಯಾಗಿದ್ದು, ಆಕಾಶ್ ಕ್ಷಿಪಣಿ ರೆಜಿಮೆಂಟ್‌ನಲ್ಲಿ ಅಮೃತಸರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Advertisement
ಯುವಕರು ಸೇನೆಗೆ ಸೇರಲು ಮನಸ್ಸು ಮಾಡಬೇಕುದೇಶಕ್ಕಾಗಿ ಸೇವೆ ಮಾಡುವ ತುಡಿತ ಪ್ರತಿಯೊಬ್ಬ ಯುವಕರಲ್ಲಿರಬೇಕು. ಸೇನೆಯಲ್ಲಿ ಕೆಲಸ ಮಾಡುವುದು ಕೇವಲ ಒಂದು ಉದ್ಯೋಗವಲ್ಲ. ಅದೊಂದು ದೇಶ ಸೇವೆಯ ಸ್ಮರಣೀಯ ಅನುಭವ. ಈ ನಿಟ್ಟಿನಲ್ಲಿ ಸೇನೆಗೆ ಸೇರಲು ಪ್ರೇರಣೆ ನೀಡಲು ಕಾರ್ಯಕ್ರಮಗಳು ನಡೆಯಬೇಕು. ನಾನು ಊರಿಗೆ ಬಂದಾಗ ಭಾಗವಹಿಸುವ ಕ್ರೀಡಾಕೂಟಗಳಲ್ಲಿ ಯುವಕರಿಗೆ ಸೇನೆಗೆ ಸೇರಲು ಪ್ರೇರಣೆ ನೀಡುವ ಕೆಲಸ ಮಾಡುತ್ತಿದ್ದೇನೆ.
– ಹರಿಪ್ರಸಾದ್ ಕೆ. ಸೈನಿಕರ ಸೇವೆ ಮಹತ್ವದ್ದು
ಇಂದು ಇಡೀ ದೇಶದ ಜನರು ನೆಮ್ಮದಿಯಾಗಿ ಜೀವಿಸುತ್ತಿದ್ದರೆ ಅದರಲ್ಲಿ ನಮ್ಮ ದೇಶದ ಸೈನಿಕರ ಪಾಲು ಅತ್ಯಂತ ಮಹತ್ವದ್ದು. ಅಂತಹ ಸೈನಿಕರಲ್ಲಿ ಒಬ್ಬರಾಗಿ ನನ್ನ ಪತಿ ದೇಶ ಸೇವೆ ಮಾಡುತ್ತಿರುವ ಕುರಿತು ನಮಗೆ ತುಂಬಾ ಹೆಮ್ಮೆ ಇದೆ.
– ವನಿತಾ ಹರಿಪ್ರಸಾದ್, ಪತ್ನಿ ನಾಗರಾಜ್ ಎನ್.ಕೆ.