ತೆಕ್ಕಟ್ಟೆ: ಮುಂಬಯಿಂದ ಆಗಮಿಸಿ ಕೊಲ್ಲೂರಿನಲ್ಲಿ ಕ್ವಾರಂಟೈನ್‌ನಲ್ಲಿ ಇದ್ದು ಅವಧಿ ಮುಗಿದ ಬಳಿಕ ಮನೆಗೆ ಬಂದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಅವರು ತೆಕ್ಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅವರ ನಿವಾಸ ಸೇರಿದಂತೆ ಒಟ್ಟು ಆರು ಮನೆಗಳಿಗೆ ಜೂ.3 ರಂದು ಸೀಲ್‌ಡೌನ್ ಮಾಡಲಾಗಿದೆ. ಕ್ವಾರಂಟೈನ್ ಮುಗಿಸಿ ಬರುವ ಸಮಯದಲ್ಲಿ ಗಂಟಲು ದ್ರವ ಪರೀಕ್ಷೆಯ ವರದಿ ಬಂದಿರಲಿಲ್ಲ ಮನೆಗೆ ಬಂದ ಎರಡು ದಿನಗಳಲ್ಲಿ ನಂತರ ವರದಿ ಬಂದಿದ್ದು ಅದರಲ್ಲಿ ಸೋಂಕು ದೃಢಪಟ್ಟಿದೆ ಇದರಿಂದ ವ್ಯಕ್ತಿ ವಾಸವಾಗಿದ್ದ ಮನೆ ಸಹಿತ ಸೀಲ್ ಡೌನ್ ಮಾಡಿದ್ದು ವ್ಯಕ್ತಿಯನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂದರ್ಭದಲ್ಲಿ ಕುಂಭಾಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಶೋಭಾ, ತೆಕ್ಕಟ್ಟೆ ಗ್ರಾಮ ಪಂಚಾಯತ್ ಅಧ್ಯಕ್ಷ ಶೇಖರ್ ಕಾಂಚನ್, ಕೋಟ ಪೊಲೀಸ್ ಸಿಬಂದಿಗಳಾದ ಮಂಜುನಾಥ , ರಾಜು, ಕಾರ್ಯದರ್ಶಿ ಚಂದ್ರ, ಮಂಜುನಾಥ ಕೊಮೆ , ಆಶಾ ಕಾರ್ಯಕರ್ತೆಯರಾದ ರತ್ನಾ ಕಂದರ್ ಕೊಮೆ, ಸುಹಾಸಿನಿ ಶೆಟ್ಟಿ ಮಲ್ಯಾಡಿ, ಸಂತೋಷ್ ತೋಟದಬೆಟ್ಟು , ಚಂದ್ರ ದೇವಾಡಿಗ ಮೇಲ್ಗುಡ್ಡೆಮನೆ ಮತ್ತಿತರರು ಹಾಜರಿದ್ದರು.
ಗ್ರಾಮಸ್ಥರಲ್ಲಿ ಆತಂಕ : ಮುಂಬಯಿಂದ ಆಗಮಿಸಿ ಕೊಲ್ಲೂರಿನಲ್ಲಿ ಕ್ವಾರಂಟೈನ್‌ನಲ್ಲಿ ಇದ್ದು ಅವಧಿ ಮುಗಿದ ಬಳಿಕ ಮನೆಗೆ ಬಂದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟ ಸುದ್ದಿ ವ್ಯಾಪಕವಾಗಿ ಹರಡುತ್ತಿದ್ದಂತೆ ತೋಟದ ಬೆಟ್ಟು ಪರಿಸರದ ಜನರಲ್ಲಿ ಆತಂಕ ಎದುರಾಗಿದೆ. ಕ್ವಾರಂಟೈನ್ ಮುಗಿಸಿ ಬರುವ ಸಮಯದಲ್ಲಿ ಗಂಟಲು ದ್ರವ ಪರೀಕ್ಷೆಯ ವರದಿ ಬಂದಿರಲಿಲ್ಲ ಈ ಸಂದರ್ಭದಲ್ಲಿ ಸೋಂಕಿತ ವ್ಯಕ್ತಿ ತೆಕ್ಕಟ್ಟೆ ಪರಿಸರದಲ್ಲಿ ಕ್ಷೌರದಂಗಡಿ ಹಾಗೂ ಇನ್ನಿತರ ಕಡೆಗಳಲ್ಲಿ ಸುತ್ತಾಡಿದ್ದಾರೆ ಎಂದು ಹೇಳಲಾಗಿದೆ.
ಕ್ವಾರಂಟೈನ್‌ನಲ್ಲಿರುವಾಗಲೇ ಗಂಟಲು ದ್ರವ ಪರೀಕ್ಷೆಯ ವರದಿಯನ್ನು ಪರೀಕ್ಷಿಸಿದ ಬಳಿಕ ಮನೆಗೆ ಕಳುಹಿಸುವ ಬದಲು ವರದಿಗೆ ಮುನ್ನ ಸೋಂಕಿತ ವ್ಯಕ್ತಿಯನ್ನು ಮನೆಗೆ ಕಳುಹಿಸಿರುವ ಜಿಲ್ಲಾಡಳಿತದ ಅವೈಜ್ಞಾನಿಕ ನಿರ್ಣಯದ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ /ಚಿತ್ರ: ಟಿ.ಲೋಕೇಶ್ ಆಚಾರ್ಯ ತೆಕ್ಕಟ್ಟೆ