Advertisement

Thekkatte: ಭತ್ತದ ಕಟಾವು ಆರಂಭ; ಎಲ್ಲೆಡೆ ಯಂತ್ರಗಳದೇ ಸದ್ದು!

02:49 PM Oct 21, 2024 | Team Udayavani |

ತೆಕ್ಕಟ್ಟೆ: ಕರಾವಳಿಯಲ್ಲಿ ಭತ್ತದ ಬೆಳೆ ಪೈರು ಕಟಾವಿಗೆ ಸಿದ್ಧಗೊಂಡಿದ್ದು, ಅಕಾಲಿಕ ಮಳೆಯ ಆತಂಕದ ನಡುವೆಯೂ ಕಟಾವು ಆರಂಭಗೊಂಡಿದೆ. ತೆಕ್ಕಟ್ಟೆ -ತೋಟದಬೆಟ್ಟು, ಕೊರ ವಡಿ, ಹರಪನಕೆರೆ, ಮಲ್ಯಾಡಿ, ಉಳ್ತೂರು, ಬೇಳೂರು, ಕುಂಭಾಶಿ ಸೇರಿದಂತೆ ಸುತ್ತಮುತ್ತಲಿನ ಕೃಷಿಕರು ಯಂತ್ರದ ಸಹಾಯದಿಂದ ಕಟಾವು ಕಾರ್ಯವನ್ನು ಚುರುಕುಗೊಳಿಸಿದ್ದಾರೆ.

Advertisement

ಈ ಭಾಗದಲ್ಲಿ ಸಾಕಷ್ಟು ಹೊಲ ಗದ್ದೆಗಳು ಇರುವುದರಿಂದ ಹೊರ ಜಿಲ್ಲೆಗಳಿಂದ ಬಂದಿರುವ ಕಟಾವು ಯಂತ್ರಗಳು ಅಲ್ಲಲ್ಲಿ ಬೀಡು ಬಿಟ್ಟಿವೆ. ಮಧ್ಯವರ್ತಿಗಳ ಮಾರ್ಗದರ್ಶನದಂತೆ ಕೃಷಿ ಭೂಮಿಗಳಲ್ಲಿ ಯಂತ್ರಗಳ ಸದ್ದು ಪ್ರಾರಂಭಗೊಂಡಿದೆ.

ಪ್ರತೀ ಗಂಟೆಗೆ 2,200 ರೂ. ಬೆಲೆ ನಿಗದಿ
ಈಗಾಗಲೇ ತಮಿಳುನಾಡು, ಮೈಸೂರು ಭಾಗದಿಂದ ಕರ್ತರ್‌, ಕ್ಲಾಸ್‌ ಹಾಗೂ ಏಸ್‌ ಕಂಪೆನಿಗಳ ಕಟಾವು ಯಂತ್ರಗಳು ಬಂದಿವೆ. ಸ್ಪರ್ಧಾತ್ಮಕ ದರದಲ್ಲಿ ಕಟಾವು ಕಾರ್ಯವನ್ನು ಚುರುಕುಗೊಳಿಸಿದೆ. ಕರ್ತರ್‌ ಕಟಾವು ಯಂತ್ರಗಳ ಬಳಕೆಯಿಂದ ಒಣಹುಲ್ಲುಗಳು ಯಂತ್ರದ ಮಧ್ಯಭಾಗದಲ್ಲಿ ಕಟಾವಾಗುವುದರಿಂದ ಉದ್ದನೆಯ ಹುಲ್ಲುಗಳು ಹಾಳಾಗದೇ ಕೃಷಿಕರಿಗೆ ಬಳಕೆಗೆ ಯೋಗ್ಯವಾಗಿದೆ. ಅನಂತರ ಬೇಲರ್‌ ಯಂತ್ರಗಳ ಸಹಾಯದಿಂದ ಒಣಹುಲ್ಲುಗಳನ್ನು ಹೊರೆ ಕಟ್ಟುವ ಮೂಲಕ ಸಂರಕ್ಷಿಸಿಡಬಹುದಾಗಿದೆ.

ತೆನೆಗಳು ಉದುರುವ ಸಾಧ್ಯತೆ
ಈ ವರ್ಷ ಉತ್ತಮ ಭತ್ತದ ಫಸಲು ಇದೆ. ಅಕಾಲಿಕ ಮಳೆಯಿಂದಾಗಿ ಗದ್ದೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ತೆನೆಗಳು ಉದುರುವ ಸಾಧ್ಯತೆ ಹಿನ್ನೆಲೆಯಲ್ಲಿ ಭತ್ತ ಕಟಾವು ಕಾರ್ಯ ಚುರುಕುಗೊಳಿಸಿದ್ದೇವೆ.
-ಶೇಖರ್‌ ಕಾಂಚನ್‌ ಕೊಮೆ, ಪ್ರಗತಿಪರ ಕೃಷಿಕರು, ತೆಕ್ಕಟ್ಟೆ

ಗಂಟೆಗೆ ಒಂದು ಎಕ್ರೆ ಕಟಾವು ಸಾಮರ್ಥ್ಯ
ಕರ್ತರ್‌ ಕಟಾವು ಯಂತ್ರವು ಗಂಟೆಗೆ ಒಂದು ಎಕ್ರೆ ಜಾಗದ ಪೈರನ್ನು ಕಟಾವು ಮಾಡುವ ಸಾಮರ್ಥ್ಯ ಹೊಂದಿದೆ. ದಿನಕ್ಕೆ ಸುಮಾರು 8 ಗಂಟೆಗಳ ಕಾಲ ಕಟಾವು ಮಾಡಬೇಕಾದ ಅನಿವಾರ್ಯತೆ ಇದೆ. ಅಲ್ಲದೆ ಯಂತ್ರಗಳು ಹಾಗೂ ಕಾರ್ಮಿಕರ ನಿರ್ವಹಣೆ ವೆಚ್ಚ ಹೆಚ್ಚಾಗಿರುವುದರಿಂದ ಅಷ್ಟೇನೂ ಲಾಭ ತರುವಂತದಲ್ಲ .
-ಶಶಿಕುಮಾರ್‌, ಮ್ಯಾನೇಜರ್‌, ಕರ್ತರ್‌ ಕಟಾವು ಯಂತ್ರ, ಮೈಸೂರು

Advertisement

-ಟಿ. ಲೋಕೇಶ್‌ ಆಚಾರ್ಯ ತೆಕ್ಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next