Advertisement

Thekkatte: ನವರಾತ್ರಿಗೆ ಮತ್ತೆ ಹೊಸತು ಬರುತಿದೆ!

01:20 PM Oct 04, 2024 | Team Udayavani |

ತೆಕ್ಕಟ್ಟೆ: ನಿಸರ್ಗದೊಂದಿಗೆ ಬೆರೆತಿರುವ ಗ್ರಾಮೀಣ ಕೃಷಿಕರು ಶ್ರದ್ಧಾಭಕ್ತಿಯಿಂದ ಆಚರಿಸಿಕೊಂಡು ಬರುತ್ತಿರುವ ಹೊಸತು ಹಬ್ಬ (ಕದಿರು ಕಟ್ಟುವ ಹಬ್ಬ)ವನ್ನು ನವರಾತ್ರಿಯ ಎರಡನೇ ದಿನವಾದ ಗುರುವಾರ ಹೆಚ್ಚಿನ ಕಡೆ ಆಚರಿಸಲಾಯಿತು. ನವರಾತ್ರಿಯ ಬೇರೆ ಬೇರೆ ದಿನಗಳಲ್ಲಿ ಇದರ ಆಚರಣೆ ನಡೆಯುತ್ತದೆ. ತಾವು ಬೆಳೆದ ಭತ್ತದ ಪೈರಿನ ಹೊಸ ಫ‌ಲವನ್ನು ಗ್ರಾಮಸ್ಥರು ಒಂದಾಗಿ ದೇವರಿಗೆ ಸಮರ್ಪಿಸಿ ಅಲ್ಲಿಂದ ಎಲ್ಲರೂ ತಮ್ಮ ಮನೆಗಳಿಗೆ ಕದಿರು ಒಯ್ಯುವ ಸಂಪ್ರದಾಯ ಒಂದಾದರೆ, ಕೆಲವು ಕೃಷಿಕರು ನೇರವಾಗಿ ಮನೆಗೆ ಹೊಸ ಪೈರನ್ನು ತೆಗೆದುಕೊಂಡು ಹೋಗಿ ಅಲ್ಲೇ ಪೂಜೆ ಮಾಡಿ ಕಟ್ಟುವುದು ಇನ್ನೊಂದು ವಿಧಾನ.

Advertisement

ಮನೆಗಳಲ್ಲಿ ಆಚರಣೆ ಹೇಗೆ?
ಹೊಸತು ಹಬ್ಬ (ಕದಿರು ಹಬ್ಬ)ದಂದು ಲಕ್ಷ್ಮೀ ಮನೆಗೆ ಪ್ರವೇಶಿಸುತ್ತಿದ್ದಾಳೆ ಎನ್ನುವ ಭಕ್ತಿ ಭಾವದಿಂದ ಇಡೀ ಮನೆಯನ್ನು ಸ್ವತ್ಛಗೊಳಿಸಲಾಗುತ್ತದೆ. ಮನೆಯ ಪ್ರಧಾನ ದ್ವಾರ ಸೇರಿದಂತೆ ಹೊಸ್ತಿಲುಗಳಿಗೆ ಶೇಡಿಯಿಂದ ಅಲಂಕಾರ ಮಾಡಲಾಗುತ್ತದೆ.
ಸಂಪ್ರದಾಯದಂತೆ ಕೃಷಿಕರು ತಮ್ಮದೇ ಗದ್ದೆಯಿಂದ ತಮ್ಮ ಮನೆಗೆ ತೆನೆ ಕೊಂಡೊಯ್ಯಬಾರದು ಎಂಬ ನಿಯಮವಿದೆ. ಹೀಗಾಗಿ ಹೊಸ್ತು ಹಬ್ಬ ಆಚರಿಸುವ ಮುನ್ನಾ ದಿನ ರಾತ್ರಿ ಇಲ್ಲವೇ ಅದೇ ದಿನ ಮುಂಜಾನೆ ವೇಳೆ ಯಾರಿಗೂ ತಿಳಿಯದಂತೆ ಬೇರೆಯವರ ಕೃಷಿ ಭೂಮಿಯಿಂದ ತೆನೆಯನ್ನು ತೆಗೆಯಲಾಗುತ್ತದೆ!

ಹಾಗೆ ಗದ್ದೆಯಿಂದ ತಂದ ತೆನೆಯನ್ನು ತುಳಸಿಕಟ್ಟೆಯ ಮುಂದೆ ಇರಿಸಿ, ವಿಶೇಷ ಅಲಂಕಾರಗಳೊಂದಿಗೆ ಪೂಜಿಸಲಾಗುತ್ತದೆ. ಪೂಜೆಗೊಂಡ ಭತ್ತದ ತೆನೆಯನ್ನು ಮನೆಯ ಹಿರಿಯರು ತಲೆಯಲ್ಲಿ ಹೊತ್ತು ಮನೆಯೊಳಗೆ ಪ್ರವೇಶಿಸುತ್ತಾರೆ. ಈ ಹಂತದಲ್ಲಿ ಮನೆಯೊಡತಿ ಯಜಮಾನನ ಪಾದ ತೊಳೆದು, ಆರತಿ ಮಾಡುತ್ತಾರೆ. ನಂತರ ಕದಿರನ್ನು ಮನೆಯ ಪ್ರಧಾನ ದ್ವಾರ ಮತ್ತು ಎಲ್ಲ ಕೃಷಿ ಪರಿಕರಗಳಿಗೆ ಕಟ್ಟಲಾಗುತ್ತದೆ.

ಕದಿರು ಕಟ್ಟುವುದು ಹೇಗೆ?
ಭತ್ತದ ತೆನೆಯನ್ನು ಮಾವು, ಹಲಸು ಮತ್ತು ಬಿದಿರಿನ ಎಲೆಗಳನ್ನು ಸೇರಿಸಿ ತೆಂಗಿನ ನಾರಿನಿಂದ ಮಾಡಿದ ಹಗ್ಗದಿಂದ ಕಟ್ಟಲಾ ಗುತ್ತದೆ. ಪೈರಿನಿಂದ ಭತ್ತ ಬಿದ್ದರೂ ಈ ಹೊರಾವರಣ ರಕ್ಷಾ ಕವಚವಾಗಿರುತ್ತದೆ. ಅದರ ಜತೆಗೆ ಈ ಎಲ್ಲ ವಸ್ತುಗಳ ಪರಸ್ಪರ ಜೋಡಣೆಯೂ ವಿಶೇಷವಾಗಿದೆ.ಮನೆಯ ಮೇಜು, ಕುರ್ಚಿ, ಕಂಪ್ಯೂಟರ್‌, ವಾಹನಗಳಿಗೆ, ತಿಜೋರಿ, ಬಾವಿ ಸೇರಿದಂತೆ ಎಲ್ಲ ಪರಿಕರಗಳಿಗೆ ಕದಿರು ಕಟ್ಟುವ ಕ್ರಮವಿದೆ. ಈ ಮೂಲಕ ಹೊಸತನಕ್ಕೆ ನಾಂದಿಯಾಗಲಿ ಎಂಬ ಆಶಯವಿದೆ.

Advertisement

ಮುಂದೆಯೂ ಉಳಿಯಬೇಕು
ಸಂಸ್ಕೃತಿಯ ರಕ್ಷಣೆ, ಪರಿಸರ ಜಾಗೃತಿ, ಮನೆ ಮನಗಳ ಸ್ವತ್ಛತೆ, ಸಂಬಂಧಗಳನ್ನು ಬೆಸೆಯುವುದು, ಎಲ್ಲದದರಲ್ಲೂ ಹೊಸತನ್ನು ಕಾಣುವ ವಿಶೇಷ ಆಶಯ ಈ ಗ್ರಾಮೀಣ ಕೃಷಿ ಆಚರಣೆಯಲ್ಲಿದೆ. ಈ ಆಚರಣೆಗಳು ಮುಂದಿನ ತಲೆಮಾರುಗಳಿಗೂ ಉಳಿಯಬೇಕು.
– ಪಾಂಡುರಂಗ ದೇವಾಡಿಗ ತೆಕ್ಕಟ್ಟೆ, ಕೃಷಿಕರು

ಹೊಸ ಅಕ್ಕಿ ಊಟ ವಿಶೇಷ
ಹೊಸತು ಹಬ್ಬ ಆಚರಣೆಯಂದು ಒಂಬತ್ತು ಬಗೆಯ ವಿಶೇಷ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಅದಕ್ಕೆ ಹೊಸ ಅಕ್ಕಿಯನ್ನು ಬೆರೆಸಿದಾಗ ಅದು ಪರಿಪೂರ್ಣವಾಗುತ್ತದೆ. ಹೊಸ ಅಕ್ಕಿಯಿಂದ ತಯಾರಾದ ಅನ್ನ ಊಟ ಮಾಡುವ ಮೊದಲು ಕಿರಿಯರು ಹಿರಿಯರ ಆಶೀರ್ವಾದ ಪಡೆಯಬೇಕು.

-ಟಿ.ಲೋಕೇಶ್‌ ಆಚಾರ್ಯ ತೆಕ್ಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next