ತೆಕ್ಕಟ್ಟೆ: ಕಳೆದೆರಡು ದಿನಗಳಿಂದಲೂ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕುಂದಾಪುರ ತಾಲೂಕಿನ ಬೇಳೂರು ಗ್ರಾ.ಪಂ. ವ್ಯಾಪ್ತಿಯ ದೇಲಟ್ಟು ಬೈಲಾಡಿ, ತೆಂಕಬೆಟ್ಟು, ಗುಳ್ಳಾಡಿ, ಮೊಗೆಬೆಟ್ಟು ತಗ್ಗು ಪ್ರದೇಶಗಳಲ್ಲಿ ನೀರಿನ ಪ್ರಮಾಣ ಏರಿಕೆಯಾಗಿ ನೂರಾರು ಎಕರೆ ಕೃಷಿಭೂಮಿಗಳು ಸೇರಿದಂತೆ ತಗ್ಗುಪ್ರದೇಶದಲ್ಲಿನ ಮನೆಗಳು ಜಲಾವೃತವಾಗಿದೆ.
ಅಗ್ನಿಶಾಮಕ ದಳದ ಸಿಬಂದಿ, ತೆಕ್ಕಟ್ಟೆ ವಲಯದ ಬೇಳೂರು ವಿಪತ್ತು ನಿರ್ವಹಣಾ ಘಟಕದ ಶೌರ್ಯಪಡೆಯ ಸದಸ್ಯರು ಹಾಗೂ ಸ್ಥಳೀಯರ ಸಹಕಾರದಿಂದ ದೋಣಿ ಮೂಲಕ ಪರಿಸರದ ಸುಮಾರು 8 ಕುಟುಂಬದ ಸುಮಾರು 25 ಮಂದಿ ನೆರೆ ಪೀಡಿತ ನಿರಾಶ್ರಿತರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ ಘಟನೆ ಜು.16ರಂದು ಸಂಭವಿಸಿದೆ.
ಘಟನಾ ಸ್ಥಳಕ್ಕೆ ತಹಶೀಲ್ದಾರ್ ಭೇಟಿ: ನೆರೆ ಪೀಡಿತ ಬೇಳೂರು ಗ್ರಾ.ಪಂ. ವ್ಯಾಪ್ತಿಯ ದೇಲಟ್ಟು ಪರಿಸರಕ್ಕೆ ಕುಂದಾಪುರ ತಹಶೀಲ್ದಾರ್ ಶೋಭಾ ಲಕ್ಷ್ಮೀ, ಕಂದಾಯ ನಿರೀಕ್ಷಕ ದಿನೇಶ್ ಹುದ್ದಾರ್, ಬೇಳೂರು ಗ್ರಾ.ಪಂ. ಅಧ್ಯಕ್ಷ ಜಯಶೀಲ ಶೆಟ್ಟಿ, ಗ್ರಾ.ಪಂ. ಉಪಾಧ್ಯಕ್ಷೆ ಉಷಾ ಕೊಠಾರಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾ.ಪಂ. ಮಾಜಿ ಉಪಾಧ್ಯಕ್ಷೆ ಪ್ರಭಾವತಿ ಶೆಟ್ಟಿ, ಪಿಡಿಒ ಸುನಿಲ್, ಗ್ರಾಮ ಆಡಳಿತಾಧಿಕಾರಿ ರಾಜ್ ಸಾಹೇಬ್, ಶೌರ್ಯಪಡೆಯ ಸದಸ್ಯರಾದ ಸುಕುಮಾರ್ ಶೆಟ್ಟಿ ದೇಲಟ್ಟು, ನರಸಿಂಹ, ಪ್ರಸಾದ್ ಕುಲಾಲ್, ಸ್ಥಳೀಯ ಯುವ ಸಂಘಟಕರಾದ ದಿನೇಶ್ ಶೆಟ್ಟಿ ದೇಲಟ್ಟು, ಮಹೇಶ್ ಶೆಟ್ಟಿ ದೇಲಟ್ಟು, ಪ್ರಶಾಂತ್ ಶೆಟ್ಟಿ, ಗ್ರಾ.ಪಂ. ಸಿಬಂದಿಗಳಾದ ಮನೀಶ್, ವೀರೇಂದ್ರ ಹಾಗೂ ಕುಂದಾಪುರ ಅಗ್ನಿಶಾಮಕ ದಳದ ಠಾಣಾಧಿಕಾರಿ ವಿ.ಸುಂದರ್, ಬಾಲಕೃಷ್ಣ, ಬಸವರಾಜ್ , ಸಚಿನ್ ಎನ್.ಆರ್., ದಿನೇಶ್, ಅಭಿಷೇಕ್ ಹಾಗೂ ಗ್ರಾಮಸ್ಥರು ಹಾಜರಿದ್ದರು.