ತೆಕ್ಕಟ್ಟೆ: ಕುಂದಾಪುರ – ಸುರತ್ಕಲ್ ಚತುಷ್ಫಥ ಕಾಮಗಾರಿಯ ಸಂದರ್ಭದಲ್ಲಿ ಕರಾವಳಿ ಜಿಲ್ಲೆಗಳ ರಾ.ಹೆಃ 66 ಬಳಿಯಲ್ಲಿರುವ ಹಳೆಯ ಕಟ್ಟಡಗಳು ಮೇಲ್ನೋಟಕ್ಕೆ ತೆರವಾದಂತೆ ಕಂಡರೂ ಕೂಡ ಕೆಲವು ಕಡೆಗಳಲ್ಲಿ ಅನಧಿಕೃತ ಹಳೆಯ ಕಟ್ಟಡಗಳೇ ಮರು ಜೀವವನ್ನು ಪಡೆದುಕೊಂಡಿರುವುದು ಒಂದೆಡೆಯಾದರೆ ಹೆದ್ದಾರಿ ಇಕ್ಕೆಲದಲ್ಲಿಯೇ ಅಪಾಯಕ್ಕೆ ಆಹ್ವಾನಿಸುತ್ತಿರುವ ವಿದ್ಯುತ್ ಕಂಬಗಳು ಸಮರ್ಪಕವಾಗಿ ಸ್ಥಳಾಂತರವಾಗದೆ ಇರುವುದು ಕೂಡ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಸಂಬಂಧ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಾರ್ವಜನಿಕರಿಗೆ ಉತ್ತರಿಸಬೇಕಾದ ಅನಿವಾರ್ಯ ಇದೆ.
ಕತ್ತಲ ಹೆದ್ದಾರಿಯಲ್ಲಿ ಸಂಕಷ್ಟದ ಪಯಣ
ತಾಲೂಕಿನ ಗ್ರಾಮೀಣ ಪರಿಮಿತಿ ಎನ್ನುವ ಕಾರಣಕ್ಕಾಗಿ ಕುಂದಾಪುರ – ಸುರತ್ಕಲ್ ಚತುಷ್ಫಥ ಕಾಮಗಾರಿಯ ಸಂದರ್ಭದಲ್ಲಿ ಹೆದ್ದಾರಿ ಹಾದು ಹೋಗುವ ಮಾರ್ಗದಲ್ಲಿರುವ ಗ್ರಾಮಗಳಾದ ತೆಕ್ಕಟ್ಟೆ , ಕನ್ನುಕೆರೆ, ಕೊರವಡಿ ಹಾಗೂ ಮಣೂರು ಸೇರಿದಂತೆ ಕೆಲವು ಕಡೆಗಳಲ್ಲಿ ಮಾತ್ರ ರಾ.ಹೆದ್ದಾರಿಗೆ ಮೂಲಭೂತವಾಗಿ ಬೇಕಾಗಿರುವ ಸಮರ್ಪಕ ಪ್ರಖರ ದಾರಿದೀಪಗಳನ್ನು ಅಳವಡಿಸದೆ ಕಳೆದ ಹಲವು ವರ್ಷಗಳಿಂದಲೂ ನಿರ್ಲಕ್ಷ್ಯ ಧೋರಣೆ ತಳೆದಿದ್ದಾರೆ. ಪರಿಣಾಮ ರಾತ್ರಿ ಸಂಚರಿಸುವ ನೂರಾರು ವಾಹನಗಳು ಹಾಗೂ ಪಾದಚಾರಿಗಳು ಅಪಾಯದ ನಡುವೆ ಕತ್ತಲ ಹೆದ್ದಾರಿಯಲ್ಲಿ ಸಂಕಷ್ಟದ ಪಯಣ ಮಾಡಬೇಕಾದ ಪರಿಸ್ಥಿತಿ ಇದೆ.
ಪಾರ್ಕಿಂಗ್
ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನ ಎದುರುನಲ್ಲಿ ರಾತ್ರಿ ವೇಳೆಯಲ್ಲಿ ಘನವಾಹನಗಳನ್ನು ಹೆದ್ದಾರಿಯ ಬದಿಯಲ್ಲಿ ಯಾವುದೇ ಸಿಗ್ನಲ್ಗಳನ್ನು ಹಾಕದೆ ಅವೈಜ್ಞಾನಿಕವಾಗಿ ಎಲ್ಲೆಂದರಲ್ಲಿ ನಿಲ್ಲಿಸುವುದರಿಂದ ಅಮಾಯಕರಿಗೆ ಅವಘಡಗಳು ಎದುರಾಗುತ್ತಿವೆ.