Advertisement
ತೆಕ್ಕಟ್ಟೆ: ಕುಂದಾಪುರ ಮತ್ತು ಕೋಟೇಶ್ವರವನ್ನು ಹೊರತುಪಡಿಸಿ ಸುತ್ತಮುತ್ತಲಿನ ಹಳ್ಳಿಗಳಾದ ಬೇಳೂರು, ಕೆದೂರು, ಉಳೂ¤ರು, ಬೀಜಾಡಿ, ಮಣೂರು ಕುಂಭಾಸಿ ಪರಿಸರದಲ್ಲಿ ಶಾಲೆಗಳಿಲ್ಲದೇ ಇರುವುದನ್ನು ಮನಗಂಡು 1893ರಲ್ಲಿ ತೆಕ್ಕಟ್ಟೆ ಕುವೆಂಪು ಶತಮಾನೋತ್ಸವ ಸರಕಾರಿ ಮಾದರಿ ಶಾಲೆ ಸ್ಥಾಪನೆಯಾಯಿತು. ಶತಮಾನೋತ್ತರ ಬೆಳ್ಳಿ ಹಬ್ಬ ಪೂರೈಸಿರುವ ಈ ಶಾಲೆಯು ಗುಣಾತ್ಮಕ ಶಿಕ್ಷಣಕ್ಕಾಗಿ ಇಲಾಖೆಯಿಂದ “ಎ’ ಗ್ರೇಡ್ ಪಡೆದು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆಶಾಕಿರಣವಾಗುವ ಜತೆಗೆ 2002ರಲ್ಲಿ ಉತ್ತಮ ಶಾಲಾ ರಾಜ್ಯ ಪ್ರಶಸ್ತಿ ಪಡೆದ ಶಿಕ್ಷಣ ಸಂಸ್ಥೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ರಾ.ಹೆ. 66ರ ಸಮೀಪದ ಸುಮಾರು 1.07 ಎಕ್ರೆ ವಿಸ್ತೀರ್ಣದಲ್ಲಿರುವ ಈ ಶಿಕ್ಷಣ ಸಂಸ್ಥೆಯಲ್ಲಿ 25 ಕೊಠಡಿಗಳು, ಶೌಚಾಲಯಗಳು, ಕುಡಿಯಲು ನೀರಿನ ವ್ಯವಸ್ಥೆ, ವಾಚನಾಲಯ, ಬಾವಿ, ಶಾಲಾ ಬಸ್ ಸೌಲಭ್ಯ ಇದೆ. ಒಂದರಿಂದ ಮೂರನೇ ತರಗತಿ ಹಾಗೂ ಆರು ಮತ್ತು ಏಳನೇ ತರಗತಿಯಲ್ಲಿ ಆಂಗ್ಲ ಮಾಧ್ಯಮ, ಒಂದರಿಂದ ಮೂರನೇ ತರಗತಿಯವರೆಗೆ ನಲಿಕಲಿ ವ್ಯವಸ್ಥೆ ಇದೆ. 2014ರಲ್ಲಿ ಕೆ.ಎಸ್.ಕ್ಯೂ.ಎ.ಸಿ. ನಡೆಸಿದ ಗುಣಮಟ್ಟ ಮೌಲ್ಯಮಾಪನದಲ್ಲಿ “ಎ’ ಗ್ರೇಡ್ ಪಡೆದ ಉಡುಪಿ ಜಿಲ್ಲೆಯ ಎರಡೇ ಶಾಲೆ ಗಳಲ್ಲಿ ಇದೂ ಒಂದು. 2018-19ರಲ್ಲಿ ಕರ್ನಾಟಕ ಸರಕಾರದಿಂದ ಪಾರಂಪರಿಕ ಶಾಲಾ ಪಟ್ಟ ಕೂಡ ದೊರಕಿದೆ. ಶಾಲಾ ಆವರಣದಲ್ಲಿ ಭಾರತ ಸರಕಾರ ಮತ್ತು ಕರ್ನಾಟಕ ಸರಕಾರಗಳ ಜಂಟಿ ಆಶ್ರಯದಲ್ಲಿ ವಿಶ್ವಬ್ಯಾಂಕ್ ನೆರವಿನೊಂದಿಗೆ ಎರಡು ಕೋಟಿ ಅರವತ್ತು ಲಕ್ಷ ರೂ. ವೆಚ್ಚದಲ್ಲಿ ನ್ಯಾಶನಲ್ ಸೈಕ್ಲೋನ್ ಶೆಲ್ಟರ್ ನಿರ್ಮಾಣ ಮಾಡಲಾಗಿದೆ. ಇದರಲ್ಲಿ ಶೌಚಾಲಯಗಳು, ಅಡಿಗೆ ಮನೆ, ಉಗ್ರಾಣ ಕೋಣೆ, ಜನರೇಟರ್ ಸೌಲಭ್ಯವಿದೆ. ವಿಶೇಷತೆಗಳು
2017-18ನೇ ಶೈಕ್ಷಣಿಕ ವರ್ಷದಿಂದ 1ನೇ ತರಗತಿಗೆ ಆಂಗ್ಲ ಮಾಧ್ಯಮ ವಿಭಾಗ ಆರಂಭಗೊಳಿಸಲಾಗಿದ್ದು, ಕುಂದಾಪುರ ತಾಲೂಕಿನಲ್ಲಿಯೇ ಅತೀ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಯೆಂಬ ಹೆಗ್ಗಳಿಕೆ ಇದರದ್ದು. ಆಕರ್ಷಕ ಚಿಲ್ಡ್ರನ್ ಪಾರ್ಕ್, ಕಂಪ್ಯೂಟರ್ ಹಾಗೂ ಚಿತ್ರಕಲಾ ತರಬೇತಿ ಶಿಕ್ಷಣ ವ್ಯವಸ್ಥೆ, ವಿಜ್ಞಾನ ಕಲಿಕೆಗೆ ಸುಸಜ್ಜಿತ ಪ್ರತ್ಯೇಕ ಪ್ರಯೋಗಾಲಯ, ಗುಣಮಟ್ಟದ ಶಿಕ್ಷಣಕ್ಕಾಗಿ ಬೋಧನ ಕಲಿಕಾ ಸಾಮಗ್ರಿಗಳ ಬಳಕೆ, ಸಹ ಪಠ್ಯ ಚಟುವಟಿಕೆಯೊಂದಿಗೆ ಸ್ಕೌಟ್ಸ್ , ಗೈಡ್ಸ್, ಕಬ್ಸ್, ಬುಲ್ ಬುಲ್, ಸೇವಾದಳ, ಯೋಗ ಶಿಕ್ಷಣ ತರಬೇತಿ, ಪ್ರತಿ ತರಗತಿಗೂ ರೇಡಿಯೋ ಬ್ರಾಡ್ ಕಾಸ್ಟಿಂಗ್ ವ್ಯವಸ್ಥೆ, ಹೆಚ್ಚಿನ ಕಲಿಕೆಗಾಗಿ ಎಲ್‌ಸಿಡಿ ಪ್ರಾಜೆಕ್ಟರ್‌ನ ಅಳವಡಿಕೆ, ಎಜ್ಯುಸ್ಯಾಟ್ ಬಳಕೆ, ಕ್ರೀಡಾ ಚಟುವಟಿಕೆ ವಿಶೇಷ ಆದ್ಯತೆ, ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಬೆಳೆಸಲು ಮಾಸಿಕ ಹಸ್ತಪತ್ರಿಕೆಯ ಬಿಡುಗಡೆ ಮಾಡಲಾಗುತ್ತಿದೆ.
Related Articles
Advertisement
125ನೇ ವರ್ಷಕ್ಕೆ ನಮ್ಮ ಶಾಲೆಗೆ ಪಾರಂಪರಿಕ ಪಟ್ಟ ಬಂದಿರು ವುದು ಹೆಮ್ಮೆಯ ವಿಷಯ. ಉತ್ತಮ ಶಾಲಾ ರಾಜ್ಯ ಪ್ರಶಸ್ತಿ ಪುರಸ್ಕೃತ ಪ್ರಶಸ್ತಿ ಪಡೆದ ಶಾಲೆಯಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಅಧ್ಯಾಪಕ ವೃಂದ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಶ್ರಮಿಸುತ್ತಿದೆ.-ಲಲಿತಾ ಸಖರಾಮ್, ಮುಖ್ಯ ಶಿಕ್ಷಕರು ನಾನು ಇಲ್ಲಿ ವ್ಯಾಸಂಗ ಮಾಡುತ್ತಿರುವಾಗ 8ನೇ ತರಗತಿ ಇಲ್ಲಿಯೇ ಇತ್ತು. ಗ್ರಾಮೀಣ ಭಾಗದ ಸುಮಾರು 900ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ನಾವು ರಾಜಕೀಯ ಹಾಗೂ ಸಾಮಾಜಿಕ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಇಲ್ಲಿನ ಶಿಕ್ಷಣವೇ ಪ್ರೇರಣೆ.
-ಮಲ್ಯಾಡಿ ಶಿವರಾಮ ಶೆಟ್ಟಿ ,
ಮಾಜಿ ಗ್ರಾ.ಪಂ. ಸದಸ್ಯರು
(ಹಳೆ ವಿದ್ಯಾರ್ಥಿ) - ಟಿ. ಲೋಕೇಶ್ ಆಚಾರ್ಯ