Advertisement

ತೆಕ್ಕಟ್ಟೆ : ರಾ.ಹೆ.66 ರಿಂದ ಹರಿವ ಕೊಳಚೆ ನೀರು ಕೃಷಿ ಭೂಮಿಗೆ

11:38 PM Jun 12, 2019 | Team Udayavani |

ತೆಕ್ಕಟ್ಟೆ: ಮುಂಗಾರು ಮಳೆ ಆರಂಭವಾಗಿದ್ದು ತೆಕ್ಕಟ್ಟೆ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿನ ರಾ.ಹೆ.66ರ ಇಕ್ಕೆಲಗಳಲ್ಲಿರುವ ತೋಡುಗಳಲ್ಲಿ ಸಂಪೂರ್ಣ ಹೂಳು ತುಂಬಿಕೊಂಡಿರುವ ಪರಿಣಾಮ ಪ್ರಮುಖ ಪೇಟೆಯಲ್ಲಿ ಕೃತಕ ನೆರೆ ಸೃಷ್ಟಿಯಾಗುವ ಸಾಧ್ಯತೆ ಇದೆ. ಇದರಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಗ್ರಾ.ಪಂ. ಸರ್ವ ಸನ್ನದ್ಧವಾಗಬೇಕಾದ ಅನಿವಾರ್ಯತೆ ಇದೆ.

Advertisement

ಕೃಷಿ ಭೂಮಿಯನ್ನು ಆವರಿಸುವ ಮಳೆ ನೀರು
ಗ್ರಾಮೀಣ ಭಾಗದಲ್ಲಿ ರಾ.ಹೆ.66 ಅನಾದಿ ಕಾಲದಿಂದಲೂ ಮಳೆ ನೀರು ಹರಿದು ಹೋಗುತ್ತಿತು.¤ ಆದರೆ ಚತುಷ್ಪಥ ಕಾಮಗಾರಿಯ ಸಂದರ್ಭ ಒಳ ಚರಂಡಿಗಳನ್ನು ಸ್ಥಳಾಂತರಿಸಿದ ಪರಿಣಾಮವಾಗಿ ತೆಕ್ಕಟ್ಟೆ ಪ್ರಮುಖ ಭಾಗದಿಂದ ಬರುವ ನೀರು ಕೊಮೆ ಸಂಪರ್ಕ ರಸ್ತೆಯ ಬದಿಯಲ್ಲಿರುವ ಕೃಷಿ ಭೂಮಿಯನ್ನು ಹಾಗೂ ಮಲ್ಯಾಡಿ ರಸ್ತೆಯಲ್ಲಿ ಹೊಸದಾಗಿ ನಿರ್ಮಿಸಿದ ಒಳ ಚರಂಡಿ ಮೂಲಕ ನೇರವಾಗಿ ಕೃಷಿಭೂಮಿಯನ್ನು ಆವರಿಸುವುದರಿಂದ ಕೃಷಿ ಚಟುವಟಿಕೆಗಳಿಗೆ ತೀವ್ರ ತೊಂದರೆ ಯಾಗುವ ಸಾಧ್ಯತೆ ಗಳಿದೆ ಎಂದು ಸ್ಥಳೀಯ ಕೃಷಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೃತಕ ನೆರೆಯ ಭೀತಿ
ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪುರಾಣಿಕ್‌ ಕಾಂಪ್ಲೆಕ್ಸ್‌ ನ ಎದುರು ಕೆಲವೆಡೆಗಳಲ್ಲಿ ಚರಂಡಿ ಇದ್ದರೂ ಅದರಲ್ಲಿ ಹೂಳು ತುಂಬಿದ್ದು ಕಸಕಡ್ಡಿಯ ರಾಶಿಯೇ ಇದೆ. ಇದನ್ನು ತೆರವು ಮಾಡದ ಹಿನ್ನೆಲೆಯಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗದೆ ರಾ.ಹೆ.66 ಬದಿಯಲ್ಲಿಯೇ ನಿಲ್ಲುತ್ತಿದೆ. ಪ್ರತಿವರ್ಷದಂತೆ ಈ ಬಾರಿಯೂ ಕೂಡಾ ಕೃತಕ ನೆರೆ ಸೃಷ್ಟಿಯಾಗುವ ಭೀತಿ ಇದೆ.

ಘನ ವಾಹನಗಳ ನಿಲುಗಡೆ
ರಾ.ಹೆ.66 ರ ಬಳಿ ಇರುವ ಹೋಟೆಲ್‌ಗ‌ಳಿಗೆ ರಾತ್ರಿ ವೇಳೆ ಸಂಚರಿಸುವ ಘನ ವಾಹನಗಳು ಕಾಲೇಜಿನ ರಸ್ತೆ ಸಮೀಪದಲ್ಲಿ ಸಾಲುಗಟ್ಟಿ ನಿಲ್ಲುವ ಪರಿಣಾಮ ವಾಹನಗಳ ಸಂಚಾರದಿಂದ ಪಾದಚಾರಿಗಳು ನಡೆದು ಹೋಗುವ ಮಾರ್ಗಗಳು ಮಳೆ ಬಂದಾಗ ರಾಡಿ ಏಳುತ್ತಿರುವುದಲ್ಲದೆ ಹೊಂಡಗಳು ಸೃಷ್ಟಿಯಾಗಿ ಅದರಲ್ಲಿ ಮಳೆ ನೀರು ಶೇಖರಣೆಯಾಗುವುದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವ ಸ್ಥಿತಿ ಇದೆ. ಈ ಬಗ್ಗೆ ಸ್ಥಳೀಯಾಡಳಿತ ಕ್ರಮ ಜರುಗಿಸಬೇಕೆಂಬ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಕೆಲವೆಡೆ ಪೂರ್ಣ
ಈಗಾಗಲೇ ಕೆಲವು ಕಡೆಗಳಲ್ಲಿ ಒಳ ಚರಂಡಿ ಸ್ವಚ್ಚತೆ ಮಾಡುವ ಕಾರ್ಯ ಪೂರ್ಣಗೊಂಡಿದೆ. ಮಳೆಗಾಲದಲ್ಲಿ ಎದುರಾಗುವ ಒಳಚರಂಡಿ ಸಮಸ್ಯೆಗಳ ಬಗ್ಗೆ ಆಯಾ ಗ್ರಾ.ಪಂ.ವಾರ್ಡ್‌ಗೆ ಸಂಬಂಧಿಸಿದ ಗ್ರಾ.ಪಂ.ಸದಸ್ಯರಿಗೆ ಮಾಹಿತಿ ನೀಡಲಾಗಿದೆ.
-ರಾಜೇಶ್‌ ಕೆ.ಸಿ., ಪಿಡಿಒ, ತೆಕ್ಕಟ್ಟೆ ಗ್ರಾ.ಪಂ.

Advertisement

ಎಲ್ಲೆಲ್ಲಿ ಒಳಚರಂಡಿ ವ್ಯವಸ್ಥೆ ಅನಿವಾರ್ಯ
– ತೆಕ್ಕಟ್ಟೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪದಿಂದ ಕೊಮೆ ರಸ್ತೆಯ ವರೆಗೆ ಒಳಚರಂಡಿ ಬೇಕು
– ತೆಕ್ಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿನಿಂದ ಮಲ್ಯಾಡಿ ರಸ್ತೆಯ ವರೆಗೆ ಒಳಚರಂಡಿ ವ್ಯವಸ್ಥೆ ಅಗತ್ಯ
– ತೆಕ್ಕಟ್ಟೆ ಎಕ್ಸ್‌ಪ್ರೆಸ್‌ ಬಸ್‌ ತಂಗುದಾಣದಿಂದ ಕಂಚುಗಾರುಬೆಟ್ಟು ರಸ್ತೆಯ ವರೆಗೆ ಒಳಚರಂಡಿ ವ್ಯವಸ್ಥೆ ಅಗತ್ಯ
– ಕನ್ನುಕೆರೆ ಶ್ರೀ ರಾಘವೇಂದ್ರ ಸ್ವಾಮಿ ಮಠದ ಸಮೀಪದಿಂದ ಪೆಟ್ರೋಲ್‌ ಬಂಕ್‌ ವರೆಗೆ ಒಳಚರಂಡಿ ಅನಿವಾರ್ಯ

- ಲೋಕೇಶ್‌ ಆಚಾರ್ಯ ತೆಕ್ಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next