Advertisement

ಮಂಡ್ಯ ವ್ಯಕ್ತಿ ಸಂಪರ್ಕ: ಎಲ್ಲ 18 ವರದಿ ನೆಗೆಟಿವ್‌ ಉಡುಪಿ ಜಿಲ್ಲಾಡಳಿತ ನಿರಾಳ!

08:12 PM May 01, 2020 | sudhir |

ತೆಕ್ಕಟ್ಟೆ : ಮಂಡ್ಯ ವ್ಯಕ್ತಿಯ ಸಂಪರ್ಕ ಹೊಂದಿದ ತೆಕ್ಕಟ್ಟೆ ಪೆಟ್ರೋಲ್‌ ಬಂಕ್‌ ಮತ್ತು ಗುಂಡ್ಮಿ ಟೋಲ್‌ಗೇಟ್‌ ಸಿಬಂದಿ ಗಂಟಲು ದ್ರವದ ಮಾದರಿ ವರದಿ ಬಂದಿದ್ದು ಎಲ್ಲ 18 ಜನರ ವರದಿ ನೆಗೆಟಿವ್‌ ಆಗಿರುವುದರಿಂದ ಸದ್ಯ ಜಿಲ್ಲಾಡಳಿತ ನಿಟ್ಟುಸಿರು ಬಿಡುವಂತಾಗಿದೆ.

Advertisement

ಕಿತ್ತಳೆ ವಲಯದಿಂದ ಹಸುರು ವಲಯಕ್ಕೆ ಉಡುಪಿ ಜಿಲ್ಲೆ ಬರುವ ಸಂದರ್ಭ ಮಂಡ್ಯ ಮೂಲದ ವ್ಯಕ್ತಿ ಲಾರಿಯಲ್ಲಿ ಮುಂಬಯಿನಿಂದ ಮಂಡ್ಯಕ್ಕೆ ತೆರಳುವಾಗ ತೆಕ್ಕಟ್ಟೆ ಪೆಟ್ರೋಲ್‌ ಬಂಕ್‌ ಮತ್ತು ಟೋಲ್‌ಗೇಟ್‌ ಸಂಪರ್ಕಕ್ಕೆ ಬಂದಿರುವುದು ಬೆಳಕಿಗೆ ಬಂದು ಜಿಲ್ಲಾಡಳಿತಕ್ಕೆ ಒಂದಿಷ್ಟು ತಲೆನೋವು ಆಗಿತ್ತು. ಅವರೆಲ್ಲರನ್ನೂ ಆಸ್ಪತ್ರೆ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು.

ಶುಕ್ರವಾರ ಎಲ್ಲರ ವರದಿಗಳೂ ನೆಗೆಟಿವ್‌ ಬಂದಿವೆ. ಇವರೆಲ್ಲರಿಗೆ 14 ದಿನಗಳ ಸಾಂಸ್ಥಿಕ ಕ್ವಾರಂಟೈನ್‌ ಮುಂದುವರಿಯಲಿದೆ. ಇನ್ನು 12 ದಿನಗಳ ಬಳಿಕ ಮತ್ತೆ ಮಾದರಿ ಸಂಗ್ರಹಿಸಲಾಗುವುದು. ಬಳಿಕವೇ ಹೋಮ್‌ ಕ್ವಾರಂಟೈನ್‌ಗೆ ಒಳಪಡಿಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ನಿರ್ಲಕ್ಷ ಸಲ್ಲದು
ವರದಿ ನೆಗೆಟಿವ್‌ ಬಂದಿರುವುದರಿಂದ ತೆಕ್ಕಟ್ಟೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಆದರೆ ಲಾಕ್‌ಡೌನ್‌ ಅನ್ನು ಉಲ್ಲಂಘಿಸಿ ಸಾಮಾಜಿಕ ಅಂತರ, ಮಾಸ್ಕ್ ಧರಿಸುವ ಬಗ್ಗೆ ನಿರ್ಲಕ್ಷ ವಹಿಸದೆ ಜಾಗೃತರಾಗಿ ಕೋವಿಡ್ ವಿರುದ್ಧ ಸಾಮೂಹಿಕವಾಗಿ ಸಮರ ಸಾರಬೇಕಿದೆ. ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ಕೂಡ ಬಹಳ ಮುಖ್ಯ. ಒಟ್ಟಿನಲ್ಲಿ ನಾಲ್ಕು ದಿನಗಳಿಂದಲೂ ಜನರಲ್ಲಿ ಕಾಡುತ್ತಿದ್ದ ಆತಂಕ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ.

ಈಗಾಗಲೇ ಉಡುಪಿ ಜಿಲ್ಲೆಯಲ್ಲಿ ಮೂವರು ಸೋಂಕಿತರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇವರಿಗೆ ಮತ್ತೆ ಜ್ವರ ಲಕ್ಷಣ ಬಂದಿದೆ ಎಂಬ ಸುಳ್ಳು ಸುದ್ದಿ ಹರಡುತ್ತಿದೆ. ಇದು ಸತ್ಯಕ್ಕೆ ದೂರ. ಇವರೆಲ್ಲರೂ ಆರೋಗ್ಯದಲ್ಲಿದ್ದಾರೆ ಎಂದೂ ಡಾ| ಸೂಡ ಸ್ಪಷ್ಟಪಡಿಸಿದ್ದಾರೆ.

Advertisement

ಶುಕ್ರವಾರ 18 ಜನರ ಮಾದರಿಗಳನ್ನು ಸಂಗ್ರಹಿಸಲಾಗಿದೆ. 47 ವರದಿಗಳು ಕೈಸೇರಿದ್ದು ಎಲ್ಲವೂ ನೆಗೆಟಿವ್‌ ಆಗಿದೆ. ಇನ್ನೂ 47 ವರದಿಗಳು ಬರಬೇಕಾಗಿದೆ.

70 ಜನರು ಹೆಸರು ನೋಂದಾಯಿಸಿದ್ದು 36 ಮಂದಿ 28 ದಿನಗಳ ಮತ್ತು 71 ಮಂದಿ 14 ದಿನಗಳ ಕ್ವಾರಂಟೈನ್‌ ಮುಗಿಸಿದ್ದಾರೆ. ಸದ್ಯ 489 ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ. ಆಸ್ಪತ್ರೆ ಕ್ವಾರಂಟೈನ್‌ನಲ್ಲಿ 37 ಮಂದಿ ಇದ್ದು ನಾಲ್ವರು ಬಿಡುಗಡೆಗೊಂಡಿದ್ದಾರೆ. ಐಸೊಲೇಶನ್‌ ವಾರ್ಡ್‌ ಮೂವರು ಸೇರಿದ್ದು ಆರು ಮಂದಿ ಬಿಡುಗಡೆಗೊಂಡಿದ್ದಾರೆ. 48 ಮಂದಿ ವಾರ್ಡ್‌ನಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next