ತೆಕ್ಕಟ್ಟೆ: ಧಾರಾಕಾರವಾಗಿ ಸುರಿದ ಭಾರೀ ಮಳೆಗೆ ಮೊಳಹಳ್ಳಿ ಗ್ರಾ. ಪಂ. ವ್ಯಾಪ್ತಿಯ ಕಂಬಳಗದ್ದೆ ಮನೆ ನಿವಾಸಿ ದೈಹಿಕ ಶಿಕ್ಷಣ ಶಿಕ್ಷಕ ಪ್ರದೀಪ್ ಕುಮಾರ್ ಶೆಟ್ಟಿ ಅವರ ಮನೆಗೆ ನೀರು ನುಗ್ಗಿ ಮನೆ ಸಂಪೂರ್ಣ ನೆಲಸಮವಾದ ಘಟನೆ ಜು.31ರ ಬುಧವಾರ ರಾತ್ರಿ ಸಂಭವಿಸಿದೆ.
ಇಲ್ಲಿನ ಕಂಬಳಗದ್ದೆ ಮನೆ ಸಮೀಪದಲ್ಲಿಯೇ ಹಾದು ಹೋಗುವ ಜಾವಳಿ ಹೊಳೆಯಲ್ಲಿ ನೀರಿನ ಒಳಹರಿವು ಹೆಚ್ಚಾಗಿ ಏಕಾಏಕಿ ನೀರಿನ ಪ್ರಮಾಣ ಏರಿಕೆಯಾದ ಪರಿಣಾಮ ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕ ಪ್ರದೀಪ್ ಕುಮಾರ್ ಶೆಟ್ಟಿ, ಗೀತಾ ಶೆಟ್ಟಿ, ರತ್ನಾವತಿ ಶೆಟ್ಟಿ ಅವರ ಮನೆ ಸಂಪೂರ್ಣ ಜಲಾವೃತಗೊಂಡ ಪರಿಣಾಮ ಮನೆಗಳು ಕುಸಿದು ಹೋಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಮಳೆಯ ತೀವ್ರತೆಯನ್ನು ಅರಿತ ಗ್ರಾಮಸ್ಥರು ರಾತ್ರಿಯೇ ಮುಂಜಾಗ್ರತಾ ಕ್ರಮವಾಗಿ ನೆರೆ ಪೀಡಿತರನ್ನು ಹಾಗೂ ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದರು.
ಈ ಹಿನ್ನೆಲೆಯಲ್ಲಿ ಆ.1 ರಂದು ಘಟನಾ ಸ್ಥಳಕ್ಕೆ ಉಡುಪಿ ಜಿಲ್ಲಾಧಿಕಾರಿ ಡಾ| ವಿದ್ಯಾಕುಮಾರಿ ಪರಿಶೀಲಿಸಿ, ತುರ್ತು ಕ್ರಮಕ್ಕೆ ಆದೇಶಿಸಿದ್ದಾರೆ.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾಧಿಕಾರಿ ಡಾ| ವಿದ್ಯಾಕುಮಾರಿ ಉದಯವಾಣಿ ಜತೆ ಮಾತನಾಡಿ, ಮಳೆಯಿಂದ ಸಂಪೂರ್ಣ ಹಾನಿಯಾದ ಮೂರು ಮನೆಯವರಿಗೆ ಹೊಸದಾಗಿ ಮನೆ ನಿರ್ಮಾಣಕ್ಕೆ ಪೂರ್ಣ ಪರಿಹಾರ ಮೊತ್ತ ನೀಡಲಾಗುವುದು ಎಂದರು.
ಜೀವ ಉಳಿಸುವುದೇ ಮೊದಲ ಆದ್ಯತೆ. ಈ ನಿಟ್ಟಿನಲ್ಲಿ ಗ್ರಾಮದಲ್ಲಿ ಗುಡ್ಡ ಕುಸಿತಗಳಿರುವ ಪ್ರದೇಶದ ನಿವಾಸಿಗಳನ್ನು ಸ್ಥಳಾಂತರಿಸುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಹೊಳೆಯಲ್ಲಿ ಅಪಾರ ಪ್ರಮಾಣದ ಹೂಳುಗಳಿರುವ ಪರಿಣಾಮ ಇಂತಹ ನೆರೆ ಸೃಷ್ಟಿಯಾಗುತ್ತಿದ್ದು, ಹೊಳೆಯಲ್ಲಿ ನೀರು ಕಡಿಮೆಯಾದ ಮೇಲೆ ಹೂಳು ತೆಗೆಯುವ ಬಗ್ಗೆ ಗ್ರಾ.ಪಂ.ಗೆ ಅನುಮೋದನೆ ನೀಡುತ್ತೇವೆ. ಅಲ್ಲದೇ ಗ್ರಾಮಸ್ಥರು ಒಂದಾಗಿ ನರೇಗಾದಲ್ಲಿ ಕೂಡಾ ಹೊಳೆ ಹೂಳು ತೆಗೆಯುವ ಅವಕಾಶವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ, ಕುಂದಾಪುರ ಕಾಂಗ್ರೆಸ್ ಮುಖಂಡ ಎಂ.ದಿನೇಶ್ ಹೆಗ್ಡೆ ಮೊಳಹಳ್ಳಿ, ಕುಂದಾಪುರ ಎಸಿ ಮಹೇಶ್ಚಂದ್ರ, ತಹಶೀಲ್ದಾರ್ ಶೋಭಾ ಲಕ್ಷ್ಮೀ, ಮೊಳಹಳ್ಳಿ ಗ್ರಾಮ ಪಂಚಾಯತ್ ಇದರ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ ದ್ಯಾವಲಬೆಟ್ಟು, ಮಾಜಿ ಗ್ರಾ.ಪಂ. ಅಧ್ಯಕ್ಷ ಉದಯ ಕುಲಾಲ್, ಉಪಾಧ್ಯಕ್ಷೆ ಚೈತ್ರಾ ವಿ. ಅಡಪ ಗ್ರಾ.ಪಂ. ಸದಸ್ಯರಾದ ಮನೋಜ್ ಕುಮಾರ್ ಶೆಟ್ಟಿ, ಜಯಂತಿ ಶೆಟ್ಟಿ, ಮಾಜಿ ಅಧ್ಯಕ್ಷ ದೀನಪಾಲ್ ಶೆಟ್ಟಿ , ವಾಣಿ ಶೆಟ್ಟಿ, ವಾರಾಹಿ ಎಂಜಿನಿಯರ್ ಅಶೋಕ್, ವಿಶ್ವನಾಥ ಶೆಟ್ಟಿ, ಕಂದಾಯ ನಿರೀಕ್ಷಕ ದಿನೇಶ್ ಹುದ್ದಾರ್, ಪಿಡಿಒ ಭಾವನಾ, ಗ್ರಾಮ ಆಡಳಿತಾಧಿಕಾರಿ ವಿಶ್ವನಾಥ ಕುಲಾಲ್ ಹಾಗೂ ನೂರಾರು ಮಂದಿ ಗ್ರಾಮಸ್ಥರು ಉಪಸ್ಥಿತರಿದ್ದರು.
—————–
ಧಾರಾಕಾರವಾಗಿ ಸುರಿದ ಮಳೆಯ ಪರಿಣಾಮ ಮೊಳಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೊಳಹಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘದ ಕಟ್ಟಡ ಭಾಗಶಃ ಹಾನಿಯಾಗಿದೆ.
ಕಂಬಳಗದ್ದೆ ಮನೆ ಗೀತಾ ಶೆಟ್ಟಿ ಅವರ ಮನೆಯ ದನ ಕೊಟ್ಟಿಗೆ ಭಾಗಶಃ ಹಾನಿಯಾಗಿದೆ. ಇಲ್ಲಿನ ಪ್ರಫುಲ್ಲಾ, ಸತೀಶ್ ಮೊಗವೀರ, ಶಿಕ್ಷಕಿ ಶೋಭಾ ಶೆಟ್ಟಿ, ವೇಣುಗೋಪಾಲ ಶೆಟ್ಟಿ , ಅಭಿಷೇಕ್ ಶೆಟ್ಟಿ ಸಾಗಿನಮನೆ, ಮಂಜುನಾಥ ಬಾಯರಿ, ಉಪ್ಪೂರರಮನೆ ಗೋವಿಂದ ಶೆಟ್ಟಿ ಅವರ ಮನೆಗಳಿಗೆ ನೀರು ನುಗ್ಗಿದೆ.
ಕೊಂಗೇರಿಯ ಎಂಬಲ್ಲಿ ಹರಿಯುವ ನೀರಿನ ತೋಡಿನ ದಂಡೆ ಒಡೆದು ಹೋದ ಪರಿಣಾಮ ಸುಧಾಕರ ಶೆಟ್ಟಿ ಅವರ ಮನೆಗೆ ನೀರು ನುಗ್ಗಿದೆ. ಸ್ಥಳೀಯರ ಸಹಕಾರದಿಂದ ತುರ್ತು ಜೆಸಿಬಿ ಯಂತ್ರ ಬಳಸಿ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗಿದೆ. ಮಳೆಯ ಪರಿಣಾಮ ಕಟ್ಟೆಮನೆ, ಬೆಳಗೋಡು , ಹುಲ್ಕಲ್‌ಕೆರೆ ಸಮೀಪದಲ್ಲಿ ರಸ್ತೆಗಳ ಮೇಲೆ ಭಾರೀ ಪ್ರಮಾಣದ ನೀರು ಹರಿದು ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.