Advertisement

ಒಂದೇ ಶೋರೂಂನಲ್ಲಿ ಮೂರು ಬಾರಿ ಕಳ್ಳತನ

01:09 PM Jul 24, 2022 | Team Udayavani |

ಚಿಂಚೋಳಿ: ಪಟ್ಟಣದ ಚಂದಾಪುರ ನಗರಕ್ಕೆ ಹೊಂದಿಕೊಂಡ ಬಸವ ಟೈರ್‌ ಶೋರೂಂನ ಶಟರ್‌ ಮುರಿದು ಟೈರ್‌, ಟ್ಯೂಬ್‌ ಕಳ್ಳತನ ಮಾಡಿದ ಘಟನೆ ಶನಿವಾರ ಮಧ್ಯರಾತ್ರಿ ನಡೆದಿದೆ.

Advertisement

ಕಳೆದ ಆರು ತಿಂಗಳಲ್ಲಿ ಇದೇ ಶೋ ರೂಂನಲ್ಲಿ ನಡೆದ ಮೂರನೇ ಕಳ್ಳತನ ಇದಾಗಿದೆ. ಪಟ್ಟಣದ ಚಿಂಚೋಳಿ- ತಾಂಡೂರ ಹೆದ್ದಾರಿ ಪಕ್ಕದಲ್ಲಿರುವ ಬಸವ ಟೈರ್‌ ಮತ್ತು ಟ್ಯೂಬ್‌ ಶೂರೂಂಗೆ ನುಗ್ಗಿದ ಏಳೆಂಟು ಕಳ್ಳರು ಕಾವಲುಗಾರ ಮಾರುತಿ ಎನ್ನುವರ ತಲೆ, ಕುತ್ತಿಗೆಗೆ ಹೊಡೆದು ಹಿಂದಿಯಲ್ಲಿ ಕೀಲಿ ಕೊಡುವಂತೆ ಬೆದರಿಸಿದ್ದಾರೆ.

ಆನಂತರ ಕಾವಲುಗಾರರನ್ನು ಕೋಣೆಯೊಂದರಲ್ಲಿ ಕೂಡಿ ಹಾಕಿ, ಉಳಿದವರು ಶೋರೂಂನಲ್ಲಿನ ಟೈರ್‌ಗಳನ್ನು ಲಾರಿಯೊಳಗೆ ತುಂಬಿ ಕೊಂಡು ತಾಂಡೂರಿನತ್ತ ಹೋಗಿದ್ದಾರೆ. ಕಳ್ಳರು ಕಪ್ಪು ಬಣ್ಣದ ರೇನ್‌ಕೋಟ್‌, ಮುಖಕ್ಕೆ ಬಟ್ಟೆ ಸುತ್ತಿಕೊಂಡಿದ್ದರು. ಕಳ್ಳರು ಹಿಂದಿ, ತಮಿಳು, ಮರಾಠಿ ಭಾಷೆಯಲ್ಲಿ ಮಾತನಾಡುತ್ತಿದ್ದರು ಎಂದು ಕಾವಲುಗಾರ ಮಾರುತಿ ತಿಳಿಸಿದ್ದಾನೆ.

ಅಂದಾಜು 20ಲಕ್ಷ ರೂ. ಮೌಲ್ಯದ 60 ಟೈರ್‌ ಕಳ್ಳತನವಾಗಿದ್ದು, ಸಿಸಿ ಕ್ಯಾಮೆರಾಗಳನ್ನು ಒಡೆದು ಹಾಕಿದ್ದಾರೆ. ಕಳ್ಳರು ಸ್ಟೋರೇಜ್‌ ಡಿವಿಆರ್‌ ಉಪಕರಣ ತೆಗೆದುಕೊಂಡು ಹೋಗಲು ಯತ್ನಿಸಿದ್ದಾರೆ ಎಂದು ಬಸವ ಟೈರ್‌ ಶೋ ರೂಂ ಮಾಲೀಕರು ತಿಳಿಸಿದ್ದಾರೆ.

ಕಳೆದ ಆರು ತಿಂಗಳ ಹಿಂದೆ ಇದೇ ಶೋ ರೂಂಗೆ ನುಗ್ಗಿದ್ದ ಕಳ್ಳರು 3ಲಕ್ಷ ರೂ. ಮೌಲ್ಯದ ಬೆಲೆ ಬಾಳುವ ಟೈರ್‌ಗಳನ್ನು ಕಳ್ಳತನ ಮಾಡಿದ್ದರು. ಆನಂತರ ಮತ್ತೂಮ್ಮೆ ಕಳ್ಳತನಕ್ಕೆ ಯತ್ನ ನಡೆದಿತ್ತು. ಇದೇ ಶೋರೂಂಗೆ ಮೂರನೇ ಸಲವೂ ನುಗ್ಗಿ ಕಳ್ಳತನ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Advertisement

ಬಸವ ಟೈರ್‌ ಅಂಗಡಿ ಮಾಲೀಕ ಸಚಿನ್‌ ಸುಂಕದ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಸಿಪಿಐ ಮಹಾಂತೇಶ ಪಾಟೀಲ, ಪಿಎಸ್‌ಐ ಮಂಜುನಾಥರೆಡ್ಡಿ ಪ್ರಕರಣ ದಾಖಲಿಸಿಕೊಂಡು ಕಳ್ಳರ ಶೋಧ ಕಾರ್ಯ ನಡೆಸಿದ್ದಾರೆ. ಸಿಸಿ ಕ್ಯಾಮೆರಾದಲ್ಲಿ ಕಳ್ಳತನ ಮಾಡಿದವರು ಸೆರೆಯಾಗಿದ್ದಾರೆ. ಕಳ್ಳರನ್ನು ಗುರುತಿಸುವ ಕಾರ್ಯ ನಡೆದಿದೆ ಎಂದು ಸಿಪಿಐ ಮಹಾಂತೇಶ ಪಾಟೀಲ ತಿಳಿಸಿದ್ದಾರೆ.

ಪೊಲೀಸ್‌ ಠಾಣೆ ಎದುರು ವ್ಯಾಪಾರಸ್ಥರ ಪ್ರತಿಭಟನೆ

ಕಳ್ಳತನ ವಿಷಯ ತಿಳಿಯುತ್ತಿದ್ದಂತೆಯೇ ವರ್ತಕರು, ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ಮುಚ್ಚಿ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಪಟ್ಟಣದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ರಾತ್ರಿ ವೇಳೆ ಅಂಗಡಿಗಳಲ್ಲಿ ಕಳ್ಳತನವಾಗುತ್ತಿವೆ. ಒಂದೇ ಅಂಗಡಿಯಲ್ಲಿ ಮೂರು ಸಲ ಕಳ್ಳತನ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪೊಲೀಸರು ರಾತ್ರಿ ಗಸ್ತು ಬಿಗಿಗೊಳಿಸಬೇಕು. ಮತ್ತೆ ಇಂತಹ ಘಟನೆಗಳು ನಡೆಯದಂತೆ ಎಚ್ಚರವಹಿಸಬೇಕು ಎಂದು ಒತ್ತಾಯಿಸಿದರು.

ವರ್ತಕರ ಸಂಘದ ಅಧ್ಯಕ್ಷ ಅಜೀತ್‌ ಪಾಟೀಲ, ಉಮಾ ಪಾಟೀಲ ಸಿಪಿಐ ಮಹಾಂತೇಶ ಪಾಟೀಲರಿಗೆ ಮನವಿ ಪತ್ರ ಸಲ್ಲಿಸಿದರು. ವರ್ತಕರಾದ ಎಸ್‌.ಎನ್‌. ದಂಡಿಕುಮಾರ, ನರೇಂದ್ರ ನಿರಾಳೆ, ಶ್ರೀಕಾಂತ ಸುಂಕದ, ಮಹಾಂತೇಶ ಮಜ್ಜಗಿ, ರಮೇಶ ಬೇಕರಿ, ಸೋಮನಾಥ ಹುಲಿ, ನಾಗರಾಜ ಕಲಬುರಗಿ, ನಾಗರಾಜ ಸೀಳಿನ, ಮಲ್ಲಿಕಾರ್ಜುನ ಕೋರಿ, ಕೇಶ್ವಾರ ಮಲ್ಲಿಕಾರ್ಜುನ, ಶಿವಕುಮಾರ ಪಲ್ಲೇದ, ಸುರೇಶ ತಂಬಾಕೆ, ಲೋಕೇಶ, ಸಂತೋಷ ಕೆ.ಕೆ., ಆನಂದ ಹಿತ್ತಲ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next