ಬೆಂಗಳೂರು: ಐಷಾರಾಮಿ ಜೀವನ ನಡೆಸುವುದಕ್ಕಾಗಿ ಹಣ ಹಾಗೂ ಚಿನ್ನಾಭರಣದ ಜತೆಗೆ ವಿದೇಶಕ್ಕೆ ಹೋಗಿ ನೆಲೆಸಬೇಕು ಎಂಬ ದುರುದ್ದೇಶದಿಂದ ಯೂಟ್ಯೂಬ್ ನೋಡಿ ಮನೆಗಳ ಕಿಟಕಿ ಸರಳುಗಳ ಕತ್ತರಿಸಿ ಒಳನುಸುಳಿ ಕಳವು ಮಾಡುತ್ತಿದ್ದ ಇಬ್ಬರನ್ನು ಸಂಜಯ್ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹೈದರಾಬಾದ್ ಮೂಲದ ವಿನೋದ್‌ಕುಮಾರ್ (34) ಹಾಗೂ ಪಶ್ಚಿಮ ಬಂಗಾಳದ ರೋಹಿತ್ ಮಂಡಲ್ (28) ಬಂಧಿತರು. ಆರೋಪಿಗಳಿಂದ 79.64 ಲಕ್ಷ ರೂ. ಮೌಲ್ಯದ 792 ಗ್ರಾಂ ಚಿನ್ನಾಭರಣ, 3 ಲ್ಯಾಪ್‌ಟಾಪ್, 10 ಮೊಬೈಲ್, 6 ಐ-ಪ್ಯಾಡ್‌ಗಳು, 30 ದುಬಾರಿ ಬೆಲೆಯ ವಾಚ್‌ಗಳು, 2 ಕೆನಾನ್ ಕ್ಯಾಮರಾ, ಏಳು ಗಾಗಲ್ಸ್‌ಗಳು, ಒಂದು ಪ್ಲೇ ಸ್ಟೇಷನ್, 2 ದ್ವಿಚಕ್ರ ವಾಹನಗಳು ಹಾಗೂ 2 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳ ಬಂಧನದಿಂದ ಒಟ್ಟಾರೆ 22 ಪ್ರಕರಣಗಳು ಪತ್ತೆಯಾಗಿವೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್‌ಪಂತ್ ತಿಳಿಸಿದರು.
ಜಾಮೀನಿನ ಮೇಲೆ ಹೊರಬಂದು ಕೃತ್ಯ: ಹೈದರಾಬಾದ್ ಮೂಲದ ವಿನೋದ್‌ಕುಮಾರ್ 2015ರಲ್ಲಿ 6 ಮನೆಗಳವು ಹಾಗೂ ದ್ವಿಚಕ್ರ ವಾಹನ ಕಳವು ಪ್ರಕರಣದಲ್ಲಿ ಜೈಲು ಸೇರಿದ್ದ. ಜೈಲಿನಿಂದ ಹೊರಬಂದ ಬಳಿಕ ಪೋಷಕರು ಈತನನ್ನು ಮನೆಗೆ ಸೇರಿಸಲಿಲ್ಲ. ಹಾಗಾಗಿ, 2016ರಲ್ಲಿ ಕೋಲ್ಕತ್ತಾಗೆ ಹೋಗಿ ಚಾಲಕನ ವೃತ್ತಿ ಮಾಡುತ್ತಿದ್ದ. ಆ ವೇಳೆ ಬಾಂಗ್ಲಾಮೂಲದ ಯುವತಿಯೊಬ್ಬಳು ಈತನಿಗೆ ಪರಿಚಯವಾಗಿ ಅವಳ ಮೂಲಕ ರೋಹಿತ್ ಮಂಡಲ್ ಪರಿಚಯವಾಗಿದ್ದ. 2019ರಲ್ಲಿ ಮೂವರು ಬಾಂಗ್ಲಾದೇಶಕ್ಕೆ ಹೋಗಿ ತಮ್ಮ ಹೆಸರುಗಳನ್ನು ಬದಲಾಯಿಸಿಕೊಂಡು ಒಂದು ವರ್ಷ ನೆಲೆಸಿದ್ದರು. ಅಲ್ಲಿಯೇ ಢಾಕಾದಲ್ಲಿ ಪರಿಚಿತಳಾಗಿದ್ದ ಯುವತಿಯನ್ನು ವಿನೋದ್ ವಿವಾಹವಾಗಿದ್ದ. ಆದರೆ, ಅಲ್ಲಿ ಯಾವುದೇ ಕೆಲಸವಿಲ್ಲದೇ ಜೀವನ ಮಾಡುವುದು ಕಷ್ಟವಾಗಿದ್ದರಿಂದ ವಾಪಸ್ ಭಾರತಕ್ಕೆ ಬಂದು ಪಶ್ಚಿಮ ಬಂಗಾಳದಲ್ಲಿ ನೆಲೆಸಿದ್ದರು. ಕೆಲವು ದಿನಗಳ ಬಳಿಕ ವಿನೋದ್ ತನ್ನ ಪತ್ನಿಯೊಂದಿಗೆ ಬೆಂಗಳೂರಿಗೆ ಬಂದಿದ್ದನು.
ಯೂಟ್ಯೂಬ್ ನೋಡಿ ಕಳ್ಳತನ ಕಲಿತ: ಯೂಟ್ಯೂಬ್ ನೋಡಿ ಮನೆಗಳ ಕಿಟಕಿಯ ಸರಳುಗಳನ್ನು ಕತ್ತರಿಸಿ ಮನೆ ಗಳವು ಮಾಡುವ ವಿಧಾನವನ್ನು ವಿನೋದ್ ಕಲಿತಿದ್ದ. ಅದಕ್ಕಾಗಿ ಬೇಕಾಗುವ ಎಲ್ಲ ಪರಿಕರಗಳು ಹಾಗೂ ಒಂದು ಬೈಕ್ ಖರೀದಿಸಿ ಅದರ ಜತೆಗೆ ಮತ್ತೂಂದು ಬೈಕ್ ಕಳವು ಮಾಡಿದ್ದಾನೆ. ಹಗಲಿನಲ್ಲಿ ಖರೀದಿಸಿದ್ದ ಬೈಕ್‌ನಲ್ಲಿ ಸುತ್ತಾಡಿ ಬೀಗ ಹಾಕಿರುವ ಮನೆಗಳನ್ನು ಗುರು ತಿಸಿ ರಾತ್ರಿ ವೇಳೆ ಕದ್ದ ಬೈಕ್‌ನಲ್ಲಿ ಬಂದು ಮನೆಗಳ್ಳತನ ಮಾಡುವ ವೃತ್ತಿಯನ್ನು ಅಳವಡಿಸಿಕೊಂಡಿದ್ದ. ಪತ್ನಿ ಗರ್ಭಿಣಿಯಾದ ಬಳಿಕ ಆಕೆಯನ್ನು ಪಶ್ಚಿಮ ಬಾಂಗ್ಲಾದಲ್ಲಿ ಬಿಟ್ಟುಬಂದು ರೋಹಿತ್ ಮಂಡಲ್ ನನ್ನು ಬೆಂಗಳೂರಿಗೆ ಕರೆತಂದಿದ್ದ. ಹಗಲಿನಲ್ಲಿ ಬೀಗ ಹಾಕಿರುವ ಮನೆಗಳನ್ನು ಗುರುತಿಸುತ್ತಿದ್ದ ವಿನೋದ್, ಆ ಮನೆಯ ಲೋಕೇಷನ್ ಅನ್ನು ಮಂಡಲ್‌ಗೆ ಕಳುಹಿಸುತ್ತಿದ್ದ.
ರಾತ್ರಿ ವೇಳೆ ಆ ಸ್ಥಳಕ್ಕೆ ಹೋಗಿ ಮನೆಗಳವು ಮಾಡುತ್ತಿದ್ದ ಎಂದು ವಿವರಿಸಿದರು. ಕಳ್ಳತನ ಮಾಡಿದ್ದರಲ್ಲಿ ಕೆಲವು ಆಭರಣಗಳನ್ನು ತನ್ನ ಪತ್ನಿಗೆ ತೆಗೆದಿಟ್ಟು ಉಳಿದಿದ್ದನ್ನು ಮಾರಾಟ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದ. ಅಂತಾರಾಷ್ಟ್ರೀಯ ಕಂಪನಿ ವಸ್ತುಗಳನ್ನು ಖರೀದಿಸಿ ಭೋಗದ ಜೀವನ ನಡೆಸುತ್ತಿದ್ದ. ಮಾರ್ಚ್‌ನಲ್ಲಿ ಸಂಜಯ್‌ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.