ಸಾಗರ: ತಾಲೂಕಿನ ಎಸ್.ಎಸ್. ಭೋಗ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮರಾಠಿ ಮತ್ತು ಹೊಸಗದ್ದೆ ಇನ್ನಿತರ ಗ್ರಾಮಗಳಿಗೆ ಅಳವಡಿಸಲಾಗಿದ್ದ ವಿದ್ಯುತ್ ತಂತಿಗಳನ್ನು ವಿದ್ಯುತ್ ಕಂಬಗಳಿಂದಲೇ ಕಳ್ಳತನ ಮಾಡಿದ ವಿಲಕ್ಷಣ ಘಟನೆ ಭಾನುವಾರ ಬೆಳಕಿಗೆ ಬಂದಿದೆ.
ಮರಾಠಿ ಮತ್ತು ಹೊಸಗದ್ದೆ ಗ್ರಾಮಗಳಿಗೆ ಇಕ್ಕಿಬೀಳು ಗ್ರಾಮದಲ್ಲಿ ಟ್ರಾನ್ಸ್‌ಫಾರ್ಮರ್ ಅಳವಡಿಸಿ ಕಂಬದ ಮೂಲಕ ತಂತಿ ಎಳೆಯಲಾಗಿದೆ. ತಂತಿ ಕಳ್ಳರು ಇಕ್ಕಿಬೀಳು ಗ್ರಾಮದ ಟ್ರಾನ್ಸ್‌ಫಾರ್ಮರ್‌ನಲ್ಲಿ ವಿದ್ಯುತ್ ಹರಿಯುವುದನ್ನು ನಿಲ್ಲಿಸಿ, ಚಾರ್ಜರ್ ಆಫ್ ಮಾಡಿ ಸುಮಾರು ಒಂದು ಸಾವಿರ ಮೀಟರ್‌ನಷ್ಟು ವಿದ್ಯುತ್ ತಂತಿಯನ್ನು ಕದ್ದೊಯ್ದಿರುವುದು ಅಚ್ಚರಿಯ ಘಟನೆಯಾಗಿದೆ.
ಎಸ್.ಎಸ್. ಭೋಗ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮರಾಠಿ, ಹೊಸಗದ್ದೆ ಇನ್ನಿತರ ಗ್ರಾಮಗಳಿಗೆ ನಾಗರಿಕ ಸೌಲಭ್ಯ ಸಿಗುವುದೇ ಮರೀಚಿಕೆಯಾಗಿದೆ. ಗ್ರಾಮಸ್ಥರು ಕಾಡಿಬೇಡಿ ವಿದ್ಯುತ್ ಸಂಪರ್ಕವನ್ನು ಪಡೆದಿದ್ದರು. ಅದೂ ಗುಡ್ಡದ ಮೇಲೆ ಕಂಬ ನೆಟ್ಟು ತಂತಿಯನ್ನು ಎಳೆಯಲಾಗಿತ್ತು. ಅಂತಹ ತಂತಿಯನ್ನು ಕಳ್ಳತನ ಮಾಡಿರುವುದರಿಂದ ಈಗ ಗ್ರಾಮಗಳಿಗೆ ವಿದ್ಯುತ್ ಇಲ್ಲದಂತೆ ಆಗಿದೆ.
ಈ ಭಾಗದಲ್ಲಿ ಮೆಸ್ಕಾಂ ಸಿಬ್ಬಂದಿಗಳು ಬರುತ್ತಾರೆ ಎಂದು ಕಾಯದೆ ಗ್ರಾಮಸ್ಥರೇ ಮಳೆಗಾಲಕ್ಕೂ ಮುನ್ನ ಲೈನ್‌ಗೆ ತಾಗಿರುವ ಗಿಡಮರಗಳನ್ನು ಕಟಾವು ಮಾಡುವುದು, ಕಂಬಗಳನ್ನು ಗಟ್ಟಿಗೊಳಿಸುವ ಕೆಲಸ ಮಾಡಿಕೊಂಡು ಬಂದಿದ್ದಾರೆ. ತಂತಿ ಕಳ್ಳತನವಾಗಿ ಗ್ರಾಮಕ್ಕೆ ವಿದ್ಯುತ್ ಕಡಿತವಾಗಿರುವ ಬಗ್ಗೆ ಗ್ರಾಮಸ್ಥರು ಮೆಸ್ಕಾಂನ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ, ಸಹಾಯಕ ಅಭಿಯಂತರರಿಗೆ ದೂರು ನೀಡಿದ್ದಾರೆ. ಆದರೆ ಮೆಸ್ಕಾಂ ಅಧಿಕಾರಿಗಳು ತಂತಿ ಕಳ್ಳತನದ ಬಗ್ಗೆ ಪೊಲೀಸರಿಗೆ ದೂರು ನೀಡಲು ಹಿಂದೇಟು ಹಾಕುತ್ತಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.
ತಕ್ಷಣ ಹೊಸ ತಂತಿ ಎಳೆದು ಗ್ರಾಮಕ್ಕೆ ವಿದ್ಯುತ್ ಸೌಲಭ್ಯ ಕಲ್ಪಿಸಬೇಕು. ತಂತಿ ಕಳ್ಳರನ್ನು ಬಂಧಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.