ಕಾರವಾರ: ನೌಕಾನೆಲೆ ಅಧೀನದಲ್ಲಿರುವ ಅಂಜುದೀವ್ ನಡುಗಡ್ಡೆಯ ಅತೀ ಪ್ರಾಚೀನ ಚರ್ಚ್‌ನಲ್ಲಿ ಕೆಲ ಕಲಾಕೃತಿಗಳು ಕಳವಾಗಿವೆ ಎಂದು ಕಾಣಕೋಣ ನಾಗರಿಕರೊಬ್ಬರು ಗೋವಾ ಪೊಲೀಸರಿಗೆ ದೂರು ನೀಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈ ಅಂಜುದೀವ್ ದ್ವೀಪವನ್ನು ಭಾರತೀಯ ನೌಕಾನೆಲೆಗೆ ವಹಿಸಿಕೊಟ್ಟ ಎರಡೂವರೆ ದಶಕಗಳ ನಂತರ ಅಲ್ಲಿದ್ದಅಮೂಲ್ಯ ಪೋರ್ಚುಗೀಸ್ ಕಲಾಕೃತಿಗಳನ್ನು ಕಳುವುಮಾಡಲಾಗಿದೆ ಎಂದು ಗೋವಾ ರಾಜ್ಯದ ಕಾಣಕೋಣ ನಗರ ಪೊಲೀಸ್ ಠಾಣೆಯಲ್ಲಿ ನಾಗರಿಕ ನೆಟಿವಿದಾಡೆ ಡಿ’ಸಾ ಎಂಬುವವರು ದೂರು ನೀಡಿದ್ದಾರೆ. ಈ ದೂರಿನ ನಂತರ ಕಾಣಕೋಣ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಅಲ್ಲಿನ ಸಹಾಯಕ ಆಯುಕ್ತರಿಗೆ ಪತ್ರ
ಬರೆದು ತನಿಖೆಗೆ ಅಂಜುದೀವ್ ದ್ವೀಪಕ್ಕೆ ತೆರಳಲು ಅನುಮತಿ ಕೋರಿದ್ದರು. ಸಹಾಯಕ ಆಯುಕ್ತರು ಈ ಅರ್ಜಿಯನ್ನು ದಕ್ಷಿಣ ಗೋವಾದ ಕಲೆಕ್ಟರ್ ಗೆ ವರ್ಗಾಯಿಸಿದ್ದರು. ಈ ಬಗ್ಗೆ ತಕ್ಷಣ ವರದಿ ಸಲ್ಲಿಸುವಂತೆ ಕಾಣಕೋಣದ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಸಹಾಯಕ ಆಯುಕ್ತರಿಗೆ ಅಲ್ಲಿನ ಜಿಲ್ಲಾಧಿಕಾರಿಗಳು ಮತ್ತೆ ಪತ್ರ ಬರೆದಿದ್ದಾರೆ. ಈ ದೂರಿನಿಂದ ಕಾಣಕೋಣದ ಪೊಲೀಸರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಅಂಜುದೀವ್ ನಡುಗಡ್ಡೆ (ದ್ವೀಪ) 25 ವರ್ಷಗಳ ಹಿಂದೆಯೇ ಗೋವಾ ಸರ್ಕಾರ ದೇಶದ ರಕ್ಷಣಾ ಇಲಾಖೆಗೆ ನೀಡಿದೆ. ಅಂಜುದೀವ್ ಐಲ್ಯಾಂಡ್‌ನ್ನು “ನೋಟಿಫೈಡ್’ ಏರಿಯಾ ಎಂದು ಗುರುತಿಸಿದೆ. ಈ ದ್ವೀಪದ ಮೇಲೆ ಗೋವಾ ಸರಕಾರಕ್ಕೆ ಈಗ ಯಾವ ಹಕ್ಕೂ ಉಳಿದಿಲ್ಲ. ಅಲ್ಲದೇ ಕಾಣಕೋಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ದ್ವೀಪ ಈಗ ಬರುತ್ತಿಲ್ಲ. ನೌಕಾನೆಲೆಯಲ್ಲಿ ಏನಾದರೂ ಅಪರಾಧದ ಘಟನೆಗಳು ಜರುಗಿದರೆ, ಅಲ್ಲಿನ ನೇವೀ ಪೊಲೀಸರೇ ತನಿಖೆ ನಡೆಸಿ, ಪ್ರಕರಣವನ್ನು ಕಾರವಾರ ಗ್ರಾಮೀಣ ಠಾಣೆಗೆ ವರ್ಗಾಯಿಸುತ್ತಾರೆ. ಅಂಜುದೀವ್ ಹಾಗೂ ನೇವಿಯಲ್ಲಿನ ಘಟನೆಗಳಿಗೆ ಗೋವಾ ಪೊಲೀಸರ ಯಾವ ಪಾತ್ರವೂ ಇರುವುದಿಲ್ಲ. ತಮ್ಮ ವ್ಯಾಪ್ತಿಯಲ್ಲೇ ಬಾರದ ಪ್ರದೇಶವೊಂದರಲ್ಲಿ ನಡೆದಿದೆ ಎಂದು ಆರೋಪಿಸಲಾದ ಕಳವು ಪ್ರಕರಣದಲ್ಲಿ ಕರ್ನಾಟಕ ರಾಜ್ಯದ ಪೊಲೀಸರ ವ್ಯಾಪ್ತಿಯನ್ನು ಧಿಕ್ಕರಿಸಿ, ತನಿಖೆಗೆ ಇಳಿಯುವ ಗೋವಾ ಪೊಲೀಸರ ಪ್ರಯತ್ನ ಭಾರಿ ಕಾನೂನು ಸಮಸ್ಯೆಗೆ ಕಾರಣವಾಗಲಿದೆ.
ಅದಕ್ಕೂ ಮುನ್ನ ಭಾರಿ ಭದ್ರತಾ ಪ್ರದೇಶದಲ್ಲಿ ಈ ಕಲಾಕೃತಿಗಳ ಕಳವಾಗಿದೆ ಎಂದು ಈ ದೂರುದಾರ ವ್ಯಕ್ತಿಗೆ ತಿಳಿದದ್ದು ಹೇಗೆ ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ. ಇತ್ತೀಚಿನ ದಿನಗಳಲ್ಲಿ ಈ ದೂರುದಾರರು ಅಂಜುದೀವ್‌ಗೆ ಹೋಗಿದ್ದರೆ? ಅಲ್ಲಿಗೆ ಹೋಗಿರದಿದ್ದರೆ ಇಂತಹ ದೂರನ್ನು ನೀಡಿದ್ದು ಹೇಗೆ? ಈ ಕಲಾಕೃತಿಗಳು ಕಾಣೆಯಾಗಿದ್ದು ಯಾವಾಗ? ಅಂಜುದೀವ್ ಭಾರಿ ಭದ್ರತಾ ಪ್ರದೇಶವಾಗಿದ್ದು ಅಲ್ಲಿ ಸಾರ್ವಜನಿಕರಿಗೆ ಪ್ರವೇಶವಿಲ್ಲ.
ಹೀಗಾಗಿ ಇಲ್ಲಿನ ಕಲಾಕೃತಿಗಳ ಕಳ್ಳತನ ಮಾಡಿದ್ದು ಯಾರು ಎಂಬ ನೂರಾರು ಪ್ರಶ್ನೆಗಳು ಉದ್ಭವವಾಗಿವೆ. ಸುಮಾರು 300 ರಿಂದ 400 ವರ್ಷಗಳ ಹಿಂದಿನ ಕಲಾಕೃತಿಗಳ (ಪೋರ್ಚುಗೀಸರು ತಂದಿರಿಸಿದ್ದು) ಮೌಲ್ಯ ಹಲವು ಲಕ್ಷ ಬೆಲೆ ಬಾಳಬಹುದು. 2004ರ ನಂತರ ಅಂದರೆ ಸುಮಾರು 15 ವರ್ಷಗಳವರೆಗೆ ಅಂಜುದೀವ್‌ಗೆ ಯಾರನ್ನು ಬಿಟ್ಟಿಲ್ಲ ಎಂದು ಭಾರತೀಯ ನೌಕಾಪಡೆ ಹೇಳಿಕೊಂಡಿದೆ. 2004 ರಲ್ಲಿ ನಡೆದ “ಕಾರವಾರ ಚಲೋ’ ಪ್ರಕರಣದ ನಂತರ ಅಂಜುದೀವ್‌ಗೆ ಪ್ರವೇಶಿಸುವ ವ್ಯಕ್ತಿಗಳನ್ನು ಉತ್ತರಕನ್ನಡ ಜಿಲ್ಲಾಡಳಿತ ಜಲಮಾರ್ಗ ಅಥವಾ ರಸ್ತೆ ಮಾರ್ಗವಾಗಿ ಪ್ರವೇಶಿಸದಂತೆ ನಿರ್ಬಂಧ ಹೇರಿದೆ. 15 ವರ್ಷ ಯಾರೂ ಸಾರ್ವಜನಿಕರು ಪ್ರವೇಶಿಸದ ಪ್ರದೇಶದಲ್ಲಿ ಕಳ್ಳತನವಾಗಿದೆ ಎಂದು ದೂರನ್ನು ಯಾವ ಆಧಾರದಲ್ಲಿ ನೀಡಲಾಗಿದೆ ಎಂಬುದು ತರ್ಕಕ್ಕೆ ನಿಲುಕದ ವಿಷಯವಾಗಿದೆ.
ಏತನ್ಮಧ್ಯೆ ಗೋವಾ ವಿಧಾನಸಭೆ ಉಪಸ್ಪೀಕರ್ ಇಸದೋರ್ ಫರ್ನಾಂಡಿಸ್ ಗೋವಾ ಸರಕಾರದ ಮುಖ್ಯ ಕಾರ್ಯದರ್ಶಿಯನ್ನು ಭೇಟಿಯಾಗಿ ಗೋವಾದ ಕ್ರೈಸ್ತ ಸಮುದಾಯದವರನ್ನು ಬರುವ ಫೆ.2 ರಂದು ಅಂಜುದೀವ್ ನ ಲೇಡಿ ಬೊತ್ರಾಸ್ ಚರ್ಚ್‌ಗೆ ಪ್ರವೇಶ ದೊರಕಿಸುವಂತೆ ಕೋರಿದ್ದಾರೆ. ಈ ವಿಷಯವಾಗಿ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಪತ್ರ ಬರೆಯುವಂತೆ ಒತ್ತಾಯಿಸಿದ್ದಾರೆ.