ಕನಕಪುರ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ಕಳ್ಳತನವಾಗಿರುವ ಘಟನೆ ಹೇರಿಂದ್ಯಾಪನಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಕೋಡಿಹಳ್ಳಿ ಹೋಬ ಳಿಯ ಹೇರೀಂದ್ಯಾಪನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿದ್ದ 1.8 ಲಕ್ಷ ರೂ. ಕಳ್ಳತನವಾಗಿದೆ. ಸಂಘದ ಕಚೇರಿ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು ಬೀರುವಿನಲ್ಲಿಟ್ಟಿದ ಹಣವನ್ನು ಕದ್ದು ಪರಾರಿಯಾಗಿದ್ದಾರೆ.
ಗುರುವಾರ ಸಂಘದ ಕಾರ್ಯದರ್ಶಿಗೆ ಹೇರಿಂದ್ಯಾಪನಹಳ್ಳಿ ಗ್ರಾಮದ ನಿವಾಸಿ ಶಿವಕಮಾರ ಎಂಬುವರು ದೂರವಾಣಿ ಕರೆ ಮಾಡಿ 94,176-00 ಬೆಳೆಸಾಲ ಪಾವತಿ ಮಾಡುವುದಾಗಿ ಕಚೇರಿಗೆ ಬರುವಂತೆ ಹೇಳಿದ್ದರು. ಕಚೇರಿ ರಜೆ ಇದೆ ನಾಳೆ ಬನ್ನಿ ಎಂದು ಸಂಘದ ಕಾರ್ಯದರ್ಶಿ ಹಣ ಕಟ್ಟಿಸಿಕೊಳ್ಳಲು ನಿರಾಕರಿಸಿದರು ಬಿಡದೆ ರೈತ ಶಿವಕುಮಾರ್ ಬಲವಂತವಾಗಿ ಒತ್ತಡ ಹಾಕಿ ಕಾರ್ಯದರ್ಶಿಯನ್ನು ಕಚೇರಿಗೆ ಕರೆಸಿಕೊಂಡು ಹಣ ಕಟ್ಟಿದ್ದರು.
ಸಂಘಕ್ಕೆ ಪಾವತಿಸಿದ ಬೆಳೆಸಾಲದ ಹಣವನ್ನು ಕೋಡಿಹಳ್ಳಿ ಬಿಡಿಸಿಸಿ ಬ್ಯಾಂಕ್‌ಗೆ ಕಟ್ಟಬೇಕಿತ್ತು. ಆದರೆ ಅಂದು ಬ್ಯಾಂಕ್ ರಜೆ ಇದ್ದ ಕಾರಣ ಒಟ್ಟು 1.8 ಲಕ್ಷ ರೂ. ಹಣವನ್ನು ಕಚೇರಿಯ ಬೀರುವಿನಲ್ಲಿಡಲಾಗಿತ್ತು. ಆದರೆ ಬೆಳೆ ಸಾಲ ಪಾವತಿ ಮಾಡಿದ ಮರುದಿನವೇ ಅದು ಕಳ್ಳತನವಾಗಿದೆ ಎಂದು ಸಂಘದ ಕಾರ್ಯದರ್ಶಿ ಕೋಡಿಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ರಜಾ ಇದ್ದರೂ ಕೂಡ ಸಂಘಕ್ಕೆ ಹಣ ಕಟ್ಟಿದ ಮರುದಿನವೇ ಕಚೇರಿಯಲ್ಲಿ ಕಳ್ಳತನ ನಡೆದಿರುವುದು ಆನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಘಟನೆಯಲ್ಲಿ ಸ್ಥಳಿಯರ ಕೈವಾಡವಿದೆ ಎಂಬ ಶಂಕೆ ವ್ಯಕ್ತವಾಗಿದೆ ಮಾಹಿತಿ ತಿಳಿದ ಕೋಡಿಹಳ್ಳಿ ಪೊಲೀಸರು ಹಾಗೂ ಬೆರಳಚ್ಚು ಶ್ವಾನದಳ ತಜ್ಞರು ಸ್ಥಳ ಮಹಜರು ಮಾಡಿ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.