ಬೆಂಗಳೂರು: ವೃದ್ಧೆಯನ್ನು ಕೊಂದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ಎಚ್‌ಎಸ್‌ಆರ್ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಎಚ್‌ಎಸ್‌ಆರ್ ಲೇಔಟ್ ನಿವಾಸಿ ಜಯಶ್ರೀ (80) ಕೊಲೆಯಾದ ಮಹಿಳೆ. ಕೃತ್ಯ ಎಸಗಿದ ಬಳಿಕ ದುಷ್ಕರ್ಮಿಗಳು ಮಹಿಳೆಯ ಮೈಮೇಲಿದ್ದ ಚಿನ್ನಾಭರಣ, ಮನೆಯಲ್ಲಿದ್ದ ನಗದು ದೋಚಿ ಪರಾರಿ ಯಾಗಿದ್ದಾರೆ.
ಜಯಶ್ರೀ ಪತಿ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದು, ಅವರ ಪುತ್ರ ಕಮ್ಮನಹಳ್ಳಿಯಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದಾರೆ. ಪುತ್ರಿ ವಿದೇಶದಲ್ಲಿದ್ದಾರೆ. ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಜಯಶ್ರೀಗೆ ಸೇರಿದ ನಾಲ್ಕು ಮನೆಗಳಿದ್ದು, ಮೂರು ಮನೆಗಳನ್ನು ಬಾಡಿಗೆ ನೀಡಿ, ಒಂದು ಮನೆಯಲ್ಲಿ ಜಯಶ್ರೀ ಒಂಟಿಯಾಗಿ ವಾಸವಾಗಿದ್ದರು.
ಶುಕ್ರವಾರ ರಾತ್ರಿ 10 ಗಂಟೆಯಿಂದ ತಡರಾತ್ರಿ 12 ಗಂಟೆ ಅವಧಿಯಲ್ಲಿ ಮನೆಗೆ ನುಗ್ಗಿರುವ ಕಳ್ಳರು, ವೃದ್ಧೆಯನ್ನು ಕೊಂದು, ಮೈಮೇಲಿದ್ದ ಚಿನ್ನಾಭರಣ, ಬೀರುವಿನಲ್ಲಿದ್ದ ನಗದು, ಆಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ಬಾಡಿಗೆದಾರರೊಬ್ಬರು ಮಹಡಿ ಮೇಲಿರುವ ಮನೆಗೆ ಹೋಗುವಾಗ ಜಯಶ್ರೀ ಮನೆಯ ಬಾಗಿಲು ತೆರೆದಿದ್ದು, ವಿದ್ಯುತ್ ದೀಪ ಉರಿಯುತ್ತಿತ್ತು. ಅದನ್ನು ಗಮನಿಸಿ ಇಣುಕಿ ನೋಡಿದಾಗ ಮೃತದೇಹ ಪತ್ತೆಯಾಗಿದೆ. ಕೂಡಲೇ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿದಾಗ ಚಿನ್ನಾಭರಣ ದೋಚಿರುವುದು ಬೆಳಕಿಗೆ ಬಂದಿದೆ.
ಘಟನೆ ಸಂಬಂಧ ಆರೋಪಿಗಳ ಪತ್ತೆಗಾಗಿ ನಾಲ್ಕು ವಿಶೇಷ ತಂಡ ರಚಿಸಲಾಗಿದ್ದು, ಸ್ಥಳೀಯರ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು. ಘಟನೆ ಸಂಬಂಧ ಎಚ್‌ಎಸ್‌ಆರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.