ವಿಟ್ಲ: ಕಳ್ಳತನದಿಂದ ಕೋಟ್ಯಾಂತರ ರೂ. ನಷ್ಟ ಅನುಭವಿಸಿದ ಕರ್ಣಾಟಕ ಬ್ಯಾಂಕ್ ಅಡ್ಯನಡ್ಕ ಶಾಖೆಯಲ್ಲಿ ರಜಾ ದಿನವಾದ ಶನಿವಾರವೂ ಚಟುವಟಿಕೆ ಮುಂದುವರಿಸಿದೆ.
ಪೊಲೀಸ್ ಇಲಾಖೆಯ ವಿಶೇಷ ತಂಡ ಅಕ್ಕಪಕ್ಕದಲ್ಲಿರುವ ಎಲ್ಲ ಸಿಸಿ ಕೆಮರಾ ದೃಶ್ಯಾವಳಿಯನ್ನು ಸಂಗ್ರಹಿಸಿ ವಾಹನದ ನಿಖರತೆಯನ್ನು ಪಡೆಯುವ ನಿಟ್ಟಿನಲ್ಲಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದೆ. ಇಬ್ಬರನ್ನು ವಶಕ್ಕೆ ಪಡೆದು ಆರೋಪಿಗಳ ಮಾಹಿತಿಯನ್ನು ಸಂಗ್ರಹಿಸುವಲ್ಲಿ ಇಲಾಖೆ ಯಶಸ್ವಿಯಾಗಿದೆ.
ಸಾರಡ್ಕ ರಾಮ ಭಟ್ , ನೆಗಳಗುಳಿ ಶ್ರೀಪತಿ ಭಟ್ ಅವರ ವೈಯಕ್ತಿಕ ಲಾಕರ್‌ಗಳು ತೆರೆಯಲ್ಪಟ್ಟಿವೆ. ಬ್ಯಾಂಕ್‌ನ ಹಿಂಭಾಗದಲ್ಲಿರುವ ಕಿಟಕಿ ನೇರವಾಗಿ ಯಾರಿಗೂ ಕಾಣುವ ಹಾಗಿಲ್ಲ. ಹಳೆಯ ಆರೋಗ್ಯ ಕೇಂದ್ರದ ಕಟ್ಟಡದ ಬದಿಯಿಂದ ಅಡ್ಯನಡ್ಕ ಪೇಟೆಯಿಂದ ಉಳಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಕಾಲು ದಾರಿ ಇದ್ದು, ಈ ದಾರಿಯಲ್ಲಿ ಸಂಚರಿಸಿ ಬ್ಯಾಂಕ್ ನ ಸಮಗ್ರ ಮಾಹಿತಿಯನ್ನು ಕಳ್ಳರು ಮೊದಲೇ ಸಂಗ್ರಹಿಸಿರುವ ಸಾಧ್ಯತೆಗಳಿದೆ. ಭಾರೀ ಮೊತ್ತದ ಕಳ್ಳತನದ ಬಳಿಕ ಕಳ್ಳರು ನುಗ್ಗಿದ ಕಿಟಕಿಯನ್ನು ಸಂಪೂರ್ಣ ಬಂದ್ ಮಾಡಿ ಭದ್ರತೆಗೊಳಿಸಲಾಗಿದೆ.
ಹಳೆ ಕಪಾಟುಗಳನ್ನು ಹೊರಗೆ ಹಾಕಿ ನವೀಕರಿಸಲಾಗುತ್ತದೆ. ಸೋಮವಾರವೂ ಶಾಖೆ ಕಾರ್ಯ ನಿರ್ವಹಿಸುವುದು ಅನುಮಾನ ಎಂದು ಹೇಳಲಾಗುತ್ತಿದೆ.