Advertisement

ಸುಲಿಗೆ ವೇಳೆ ತಿರುಗಿಬಿದ್ದವರನ್ನೇ ಕೊಲ್ಲುತ್ತಿದ್ದ ದುಷ್ಟರು

12:27 PM May 27, 2023 | Team Udayavani |

ಬೆಂಗಳೂರು: ನಗರದಲ್ಲಿ ನಿರ್ಜನ ಪ್ರದೇಶಗಳಲ್ಲಿ ಒಂಟಿಯಾಗಿ ಐಷಾರಾಮಿ ಬೈಕ್‌ಗಳಲ್ಲಿ ಓಡಾಡುವವರನ್ನೇ ಟಾರ್ಗೆಟ್‌ ಮಾಡಿ ಮಾರಕಾಸ್ತ್ರ ತೋರಿಸಿ ಬೈಕ್‌ ದರೋಡೆ ಮಾಡುತ್ತಿದ್ದ ಇಬ್ಬರು ಕುಖ್ಯಾತ ಆರೋಪಿ ಗಳು ಭಾರತೀ ನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ಭಾರತೀನಗರದ ತಿಮ್ಮಯ್ಯ ರಸ್ತೆಯ ನಿವಾಸಿ ಮಹಮದ್‌ ಜಬಿ (23), ಯಾಸೀನ್‌ ಖಾನ್‌ (28) ಬಂಧಿತರು.

ಆರೋಪಿಗಳಿಂದ 17 ದ್ವಿಚಕ್ರವಾಹನ, 2 ಆಟೋ ರಿಕ್ಷಾ ಸೇರಿದಂತೆ 15 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಮಲಯಾಳಂ ಸಿನಿಮಾ ನಿರ್ದೇಶಕರೊಬ್ಬರ ಪುತ್ರನಿಗೆ 2018ರಲ್ಲಿ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಸಿಕ್ಕಿತ್ತು. ಆತ ತನ್ನ ಮೊದಲ ವೇತನದಲ್ಲಿ ಬಂದ ಹಣವನ್ನು ಉಪ್ಪಾರಪೇಟೆ ಠಾಣೆಯ ವ್ಯಾಪ್ತಿಯ ರಸ್ತೆಯೊಂದರಲ್ಲಿ ಕೈಯಲ್ಲಿ ಹಿಡಿದುಕೊಂಡು ಮೊಬೈಲ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ. ಇದನ್ನು ಗಮನಿಸಿದ ಮಹಮದ್‌ ಜಬಿ ಕೂಡಲೇ ಆತನ ಕೈಯಲ್ಲಿದ್ದ ಮೊಬೈಲ್‌ ಹಾಗೂ ಹಣ ಕಸಿದುಕೊಂಡು ಹೋಗಿದ್ದ. ಮಹಮದ್‌ ಜಬಿಯನ್ನು ಹಿಂಬಾಲಿಸಿಕೊಂಡು ಹೋಗಿ ಹಿಡಿಯಲು ಯತ್ನಿಸಿದ ನಿರ್ದೇಶಕನ ಪುತ್ರನ ಎದೆಗೆ ಚೂರಿಯಿಂದ ಇರಿದು ಕೊಲೆ ಮಾಡಿದ್ದ. ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಹೊರ ಬಂದು ಜೀವನ ನಿರ್ವಹಣೆಗಾಗಿ ದ್ವಿಚಕ್ರವಾಹನ ಕಳ್ಳತನಕ್ಕೆ ಇಳಿದಿದ್ದ. ಹಲವು ಬಾರಿ ಜೈಲಿಗೆ ಹೋದರೂ ಜಾಮೀನಿನ ಮೇಲೆ ಹೊರ ಬಂದು ಮತ್ತೆ ದ್ವಿಚಕ್ರವಾಹ ಕಳ್ಳತನ ನಡೆಸುತ್ತಿದ್ದ. ಮತ್ತೂಬ್ಬ ಆರೋಪಿ ಯಾಸೀನ್‌ ಖಾನ್‌ ಆತನಿಗೆ ಸಹಕಾರ ನೀಡುತ್ತಿದ್ದ.

ಸಿಕ್ಕಿ ಬಿದ್ದದ್ದು ಹೇಗೆ?: ಮೇ 21ರಂದು ಮುಂಜಾನೆ 5 ಗಂಟೆಗೆ ಸಂಷಾದ್‌ ಎಂಬುವವರು ಭಾರತೀನಗರದ ನೇತಾಜಿ ರಸ್ತೆಯಲ್ಲಿ ಬೈಕ್‌ನಲ್ಲಿ ಒಂಟಿಯಾಗಿ ಹೋಗುತ್ತಿದ್ದರು. ಅದೇ ರಸ್ತೆಯಲ್ಲಿ ಹೊಂಚು ಹಾಕಿ ಕುಳಿತಿದ್ದ ಆರೋಪಿಗಳು ಇವರ ಬೈಕ್‌ ಅಡ್ಡಗಟ್ಟಿದ್ದರು. ಬೈಕ್‌ ನಿಲುಗಡೆ ಮಾಡುತ್ತಿದ್ದಂತೆ ಚೂರಿ ತೋರಿಸಿ ಬೆದರಿಸಿ ಬೈಕ್‌ ಕಸಿದುಕೊಂಡು ಪರಾರಿಯಾಗಿದ್ದರು. ಸಂಷಾದ್‌ ಭಾರತೀನಗರ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಕೃತ್ಯ ನಡೆದ ಆಸು-ಪಾಸಿನಲ್ಲಿರುವ ಸಿಸಿ ಕ್ಯಾಮೆರಾ ಪರಿಶೀಲಿಸಿ ಆರೋಪಿ ಮಹಮದ್‌ ಜಬಿ ಮುಖ ಚಹರೆ ಪತ್ತೆ ಹಚ್ಚಿ ಆತನಿಗೆ ಎಲ್ಲೆಡೆ ಶೋಧ ನಡೆಸಿದ್ದರು.

ಅದೇ ಹೊತ್ತಿನಲ್ಲಿ ಭಾರತೀನಗರದ ತಿಮ್ಮಯ್ಯ ರಸ್ತೆ ಬಳಿ ಗಾಂಜಾ ಸೇವಿಸಿ ಸಾರ್ವಜನಿಕ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಜಗಳ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು. ಕೂಡಲೇ ಪೊಲೀಸರು ಗಲಾಟೆ ಮಾಡುತ್ತಿದ್ದ ವ್ಯಕ್ತಿಯನ್ನು ಠಾಣೆಗೆ ಕರೆತಂದಿದ್ದರು. ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಮಹಮದ್‌ ಜಬಿಗೂ ಈತನಿಗೂ ಹೋಲಿಕೆ ಕಂಡು ಬಂದಿತ್ತು. ಈ ಬಗ್ಗೆ ವಿಚಾರಣೆ ನಡೆಸಿದಾಗ ಬೈಕ್‌ ದರೋಡೆ ಮಾಡಿರುವುದನ್ನು ಮಹಮದ್‌ ಜಬಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

ಐಶಾರಾಮಿ ಬೈಕ್‌ಗಳು 30-40 ಸಾವಿರಕ್ಕೆ ಬಿಕರಿ : ಆರೋಪಿ ಮಹಮದ್‌ ಜಬಿ ಸಹಚರನ ಜತೆಗೆ ಸೇರಿ ಕಳ್ಳತನ ಮಾಡುವ ಅಥವಾ ದರೋಡೆ ಮಾಡಿದ ಡ್ನೂಕ್‌, ಬುಲೆಟ್‌, ಪಲ್ಸರ್‌ನಂತಹ ಐಷಾರಾಮಿ ಬೈಕ್‌ಗಳನ್ನು ಗ್ಯಾರೇಜ್‌ಗಳಲ್ಲಿ ಕೇವಲ 30 ರಿಂದ 40 ಸಾವಿರಕ್ಕೆ ಮಾರಾಟ ಮಾಡುತ್ತಿದ್ದ. ಬಂದ ಹಣವನ್ನು ಮಾದಕ ವಸ್ತು ಖರೀದಿ ಸೇರಿದಂತೆ ಇನ್ನಿತರ ದುಂದು ವೆಚ್ಚಕ್ಕೆ ವ್ಯಯಿಸುತ್ತಿದ್ದ. ಕದ್ದ ಬೈಕ್‌ಗಳಲ್ಲಿ ಓಡಾಡುವ ವೇಳೆ ಸಂಚಾರ ಪೊಲೀಸರು ಸಿಕ್ಕಿದರೆ ಆ ಬೈಕ್‌ಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗುತ್ತಿದ್ದರು. ಪೊಲೀಸರು ಕದ್ದ ಬೈಕ್‌ಗಳನ್ನು ಆರೋಪಿಗಳಿಂದ ಜಪ್ತಿ ಮಾಡಲು ಮುಂದಾದ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ.

ಇನ್ನು ಮಹಮದ್‌ ಜಬಿ ವಿರುದ್ಧ ಪುಲಕೇಶಿನಗರ, ಭಾರತೀನಗರ, ಎಚ್‌ಎಸ್‌ಆರ್‌ ಲೇಔಟ್‌, ಕಮರ್ಷಿಯಲ್‌ ಸ್ಟ್ರೀಟ್‌, ಕೆ.ಆರ್‌.ಪುರ, ಸದಾಶಿವನಗರ ಸೇರಿದಂತೆ 10ಕ್ಕೂ ಅಧಿಕ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next