Advertisement

ಬ್ರಹ್ಮಾವರ: ಚಿನ್ನಾಭರಣ, 2 ಕಾರು ಸಹಿತ 20 ಲಕ್ಷ ರೂ. ಮೌಲ್ಯದ ಸೊತ್ತು ವಶ; ಮೂವರ ಬಂಧನ

05:59 PM Aug 04, 2022 | Team Udayavani |

ಬ್ರಹ್ಮಾವರ: ಇಲ್ಲಿನ ಪೊಲೀಸ್‌ ವೃತ್ತ ನಿರೀಕ್ಷಕ ಅನಂತಪದ್ಮನಾಭ ಅವರ ನೇತೃತ್ವದ ತಂಡ ಮನೆಗಳಿಗೆ ಕನ್ನ ಹಾಕಿ ಕಳವುಗೈಯುತ್ತಿದ್ದ ಮೂವರು ಕುಖ್ಯಾತ ಅಂತಾರಾಜ್ಯ ಕಳ್ಳರನ್ನು ಬಂಧಿಸಿದೆ.

Advertisement

ಶಿವಪುರ ಕೆರೆಬೆಟ್ಟಿನ ದಿಲೀಪ್‌ ಶೆಟ್ಟಿ, ತಮಿಳನಾಡು ಕೊಯಮುತ್ತೂರಿನ ರಾಜನ್‌ ಮತ್ತು ಷಣ್ಮುಗಂ ಬಂಧಿತರು. ಹಾವಂಜೆ ಗ್ರಾಮದ ಶೇಡಿಗುಳಿ ಬಳಿ ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ ಸ್ಯಾಂಟ್ರೋ ಕಾರನ್ನು ನಿಲ್ಲಿಸಿ ಪರಿಶೀಲಿಸಿದಾಗ ಕಾರಿನಲ್ಲಿ ಮನೆಯ ಬಾಗಿಲು ಒಡೆಯುವ ಕಬ್ಬಿಣದ ರಾಡ್‌ ಹಾಗೂ ಬೆಳ್ಳಿಯ ಆಭರಣಗಳು ಪತ್ತೆಯಾಗಿತ್ತು.

ದಿಲೀಪ್‌ ಶೆಟ್ಟಿಯು ಕುಖ್ಯಾತ ಕಳ್ಳರಾದ ರಾಜನ್‌, ಕುಟ್ಟಿ ವಿಜಯನ್‌, ಸಜಿತ್‌ ವರ್ಗಿಸ್‌ ಅವರೊಂದಿಗೆ ಸ್ಯಾಂಟ್ರೋ ಹಾಗೂ ಆಮ್ನಿ ಕಾರನ್ನು ಬಳಸಿಕೊಂಡು ಬೆಂಗಳೂರಿನಿಂದ ಆಗಮಿಸಿ ಹಾಸನ, ದ.ಕ. ಮತ್ತು ಉಡುಪಿ ಭಾಗದಲ್ಲಿ ಮನೆಗಳಲ್ಲಿ ಕಳವು ನಡೆಸುತ್ತಿದ್ದ ಎನ್ನುವುದು ಆರೋಪಿಗಳ ವಿಚಾರಣೆಯಿಂದ ಬೆಳಕಿಗೆ ಬಂದಿದೆ.

ಚಿನ್ನಾಭರಣ ಅಡವಿರಿಸಿದ್ದರು :

ದಿಲೀಪ್‌ ಶೆಟ್ಟಿ ಮತ್ತು ರಾಜನ್‌ನನ್ನು ವಿಚಾರಿಸಿದಾಗ ಬ್ರಹ್ಮಾವರ ಠಾಣೆ ವ್ಯಾಪ್ತಿಯಲ್ಲಿ 2 ಮನೆಯಲ್ಲಿ ಕಳ್ಳತನ, ಕಾರ್ಕಳ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ 1 ಮನೆಯಲ್ಲಿ ಕಳ್ಳತನ ಹಾಗೂ ಅಜೆಕಾರು ಠಾಣೆ ವ್ಯಾಪ್ತಿಯಲ್ಲಿ 2 ಮನೆಯಲ್ಲಿ ಕಳ್ಳತನ ಪ್ರಕರಣಗಳ ಕುರಿತು ಬಾಯ್ಬಿಟ್ಟಿದ್ದಾರೆ. ಅವರು ವಿವಿಧ ಸೊತ್ತುಗಳು ಮತ್ತು ಚಿನ್ನಾಭರಣವನ್ನು ಕಳವು ಮಾಡಿದ್ದರು. ಇಲ್ಲಿ ಕಳವು ಮಾಡಿ ಅವರು ಬೆಂಗಳೂರು ಮತ್ತು ಕೊಯಮತ್ತೂರಿನಲ್ಲಿ ಚಿನ್ನಾಭರಣಗಳನ್ನು ಅಡವಿಡುತ್ತಿದ್ದರು. ಆ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

ಐದು ಪ್ರಕರಣ ಬೆಳಕಿಗೆ :

ದಿಲೀಪ್‌ ಶೆಟ್ಟಿ ಮತ್ತು ರಾಜನ್‌ ಕಡೆಯಿಂದ ಸುಮಾರು 13 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ, 20,000 ರೂ. ಮೌಲ್ಯದ ಬೆಳ್ಳಿ ಆಭರಣ, ಕೃತ್ಯಕ್ಕೆ ಬಳಸಿದ್ದ 5 ಲಕ್ಷ ರೂ. ಮೌಲ್ಯದ ಸ್ಯಾಂಟ್ರೋ ಕಾರು, 2 ಲಕ್ಷ ರೂ.ನ ಆಮ್ನಿ ಕಾರು ಸೇರಿದಂತೆ ಸುಮಾರು 20 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡು, 5 ಮನೆಗಳಲ್ಲಿನ ಕಳ್ಳತನ ಪ್ರಕರಣ ಭೇದಿಸಿದ್ದಾರೆ.

ಪೊಲೀಸ್‌ ತಂಡಕ್ಕೆ ಶ್ಲಾಘನೆ :

ಜಿಲ್ಲಾ ಪೊಲೀಸ್‌ ಅಧೀಕ್ಷಕ ವಿಷ್ಣುವರ್ಧನ್‌ ಎನ್‌., ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಎಸ್‌.ಟಿ. ಸಿದ್ದಲಿಂಗಪ್ಪ ಅವರ ಮಾರ್ಗದರ್ಶನದಂತೆ ಪೊಲೀಸ್‌ ಉಪಾ ಧೀಕ್ಷಕ ಸುಧಾಕರ ಎಸ್‌. ನಾಯ್ಕ ಅವರ ನಿರ್ದೇಶನದಂತೆ ನಡೆದ ಈ ಕಾರ್ಯಾಚರಣೆಯಲ್ಲಿ ಬ್ರಹ್ಮಾವರ ಪೊಲೀಸ್‌ ವೃತ್ತ ನಿರೀಕ್ಷಕ ಅನಂತ ಪದ್ಮನಾಭ, ಉಪನಿರೀಕ್ಷಕ ಗುರುನಾಥ ಬಿ. ಹಾದಿಮನಿ, ತನಿಖಾ ಪಿ.ಎಸ್‌.ಐ. ಮುಕ್ತಾ ಬಾಯಿ, ಕೋಟ ಠಾಣೆ ಪಿ.ಎಸ್‌.ಐ. ಮಧು ಬಿ.ಇ., ಬ್ರಹ್ಮಾವರ ಠಾಣೆ ಪ್ರೊಬೆಷನರಿ ಪಿ.ಎಸ್‌.ಐ. ಸುಬ್ರಮಣ್ಯ ದೇವಾಡಿಗ, ಬ್ರಹ್ಮಾವರ ಠಾಣೆ ಸಿಬಂದಿ ವೆಂಕಟರಮಣ ದೇವಾಡಿಗ, ಪ್ರವೀಣ ಶೆಟ್ಟಿಗಾರ್‌, ಮೊಹಮ್ಮದ್‌ ಅಜ್ಮಲ್‌, ರಾಘವೇಂದ್ರ ಕಾರ್ಕಡ, ಸಬಿತಾ, ಸುರೇಶ ಬಾಬು, ದಿಲೀಪ್‌, ಅಣ್ಣಪ್ಪ ಹಾಗೂ ಕೋಟ ಠಾಣೆ ಸಿಬಂದಿ ಪ್ರಸನ್ನ, ರಾಘವೇಂದ್ರ, ದುಂಡಪ್ಪ, ಗೋಪಾಲ ನಾಯ್ಕ ಮತ್ತು ಜಿಲ್ಲಾ ತಾಂತ್ರಿಕ ವಿಭಾಗದ ಸಿಬಂದಿ ದಿನೇಶ್‌ ಅವರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಅ ಧಿಕಾರಿ ಮತ್ತು ಸಿಬಂದಿ ಅವರನ್ನು ಜಿಲ್ಲಾ ಪೊಲೀಸ್‌ ಅ ಧೀಕ್ಷಕರು ಅಭಿನಂದಿಸಿದ್ದಾರೆ.

ಸಣ್ಣ ವಯಸ್ಸಿನಿಂದಲೇ ಕಳವು :

ರಾಜನ್‌ 19ನೇ ವಯಸ್ಸಿನಿಂದ ಕಳ್ಳತನ ಮಾಡುತ್ತಿದ್ದು, ಆತನ ವಿರುದ್ಧ ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಮನೆಗಳಲ್ಲಿನ ಕಳ್ಳತನ ಪ್ರಕರಣಗಳು ದಾಖಲಾಗಿವೆ. ಕರ್ನಾಟಕದ ಚಿಕ್ಕಮಗಳೂರು-1, ಕುಮಟಾ-1, ಸುರತ್ಕಲ್‌-4 ಮತ್ತು ಕೇರಳದ ತೃಶ್ಶೂರು-4, ಪಟ್ಟಂಬಿ-4, ತರೂರು-1, ತಮಿಳುನಾಡಿನ ನೀಲಗಿರಿಯಲ್ಲಿ 3 ಪ್ರಕರಣಗಳು ದಾಖಲಾಗಿವೆ. ಉಡುಪಿ ಜಿಲ್ಲೆ ಸೇರಿ ರಾಜನ್‌ ಮೇಲೆ 22 ಕೇಸು ದಾಖಲಾಗಿದ್ದು, ವಿವಿಧ ಠಾಣೆಗಳಲ್ಲಿ ಜಾಮೀನು ರಹಿತ ವಾರೆಂಟ್‌ ಜಾರಿಯಲ್ಲಿದೆ.

ಹನಿಟ್ರ್ಯಾಪ್‌ ಮಾಡುತ್ತಿದ್ದ! :

ದಿಲೀಪ್‌ ಶೆಟ್ಟಿ ವಿರುದ್ಧ ಈ ಹಿಂದೆ ಹಾಸನದ ಅರಸೀಕೆರೆ, ಬೆಂಗಳೂರಿನ ಆರ್‌.ಎಂ.ಸಿ. ಯಾರ್ಡ್‌, ನಂದಿನಿ ಲೇಜೌಟ್‌ ಮತ್ತು ಮಂಡ್ಯದ ನಾಗಮಂಗಲ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಸುಲಿಗೆ, ಅಬಕಾರಿ, ಹನಿಟ್ರ್ಯಾಪ್‌ ಪ್ರಕರಣ ಹಾಗೂ ಹೆಬ್ರಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿದ್ದು, ಈತನ ಮೇಲೂ ಜಾಮೀನು ರಹಿತ ವಾರೆಂಟ್‌ ಇದೆ.

Advertisement

Udayavani is now on Telegram. Click here to join our channel and stay updated with the latest news.

Next