ಬೆಂಗಳೂರು: ಪ್ರಯಾಣಿಕರ ಸೋಗಿನಲ್ಲಿ ಬಿಎಂಟಿಸಿ ಬಸ್‌ಗಳಲ್ಲಿ ಮೊಬೈಲ್ ಹಾಗೂ ಹಣ ಕಳವು ಮಾಡು ತ್ತಿದ್ದ ಕಳ್ಳರು ಹಾಗೂ ಕಳವು ಮಾಲುಗಳನ್ನು ಸ್ವೀಕರಿ ಸುತ್ತಿದ್ದ ಆರು ಮಂದಿಯನ್ನು ಸುದ್ದುಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸುಭಾಷ್‌ನಗರದ ಜಾಫರ್ ಸಿದ್ದಿಕ್(26), ಬೇಗೂರಿನ ಸೈಯದ್ ಅಖೀಲ್(40), ಹಳೇ ಗುಡ್ಡದ ಹಳ್ಳಿ ನಿವಾಸಿ ರೆಹಮಾನ್ ಶರೀಫ್(42), ಶಫೀಕ್ ಅಹಮ್ಮದ್(38) ಜೆ.ಜೆ.ನಗರ ನಿವಾಸಿ ಮುಸ್ತಾಕ್ ಅಹಮ್ಮದ್(45), ಇಮ್ರಾನ್ ಪಾಷಾ(34) ಬಂಧಿತರು.
ಆರೋಪಿಗಳಿಂದ 25 ಲಕ್ಷ ರೂ. ಮೌಲ್ಯದ 150 ಮೊಬೈಲ್‌ಗಳು, 25 ಸಾವಿರ ನಗದು, ಆಟೋ ರಿಕ್ಷಾ, ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ತಲೆ ಮರೆಸಿಕೊಂಡಿರುವ ಇತರೆ ಆರು ಮಂದಿ ಆರೋಪಿ ಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯಕ್ತ ಚಂದ್ರಶೇಖರ್ ಮಾಹಿತಿ ನೀಡಿದರು.
ಆರೋಪಿಗಳು ಇತ್ತೀಚೆಗೆ ಹೊಸೂರು ರಸ್ತೆ ಮೂಲಕ ಸೆಂಟ್‌ಜಾನ್ಸ್ ಕಡೆ ಹೋಗುವ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರ ಜೇಬಿನಲ್ಲಿದ್ದ 50 ಸಾವಿರ ರೂ. ನಗದು ಕಳವು ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ಸುದ್ದುಗುಂಟೆಪಾಳ್ಯ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರೋಪಿಗಳ ಪತ್ತೆಗಾಗಿ ಮೈಕೋಲೇಔಟ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಮತ್ತು ಸುದ್ದು ಗುಂಟೆ ಠಾಣೆ ಇನ್‌ಸ್ಪೆಕ್ಟರ್ ಮಾರುತಿ ಜಿ.ನಾಯಕ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿ ಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ವಿಚಾರಣೆ ವೇಳೆ ಆರೋಪಿಗಳು ಆರು ತಿಂಗಳಿ ನಿಂದ ನಗರದ ವಿವಿಧೆಡೆ ಸಂಚರಿಸುವ ಹೆಚ್ಚು ಜನ ಸಂದಣಿ ಇರುವ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾ ಣಿಕರ ಸೋಗಿನಲ್ಲಿ ಸಂಚರಿಸುತ್ತಿದ್ದರು. ಗಮನ ಬೇರೆಡೆ ಸೆಳೆದು ಸಾರ್ವಜನಿಕರ ಮೊಬೈಲ್‌ಗಳು ಮತ್ತು ಹಣ ಕಳವು ಮಾಡುತ್ತಿದ್ದರು ಎಂಬುದು ಗೊತ್ತಾಗಿದೆ. ಇದೇ ವೇಳೆ ಕಳವು ಮಾಡುತ್ತಿದ್ದ ಮೊಬೈಲ್‌ಗಳನ್ನು ವಿಲೇವಾರಿ ಮಾಡುತ್ತಿದ್ದ ಜಾಲ ವನ್ನು ಪತ್ತೆ ಹಚ್ಚಿರುವ ಪೊಲೀಸರು ಕಳವು ಮೊಬೈಲ್ ಗಳನ್ನು ಮಾರಾಟ ಮಾಡಲು ಸ್ವೀಕರಿಸುತ್ತಿದ್ದ ತಂಡ ವನ್ನು ಬಂಧಿಸಲಾಗಿದೆ ಎಂದು ಹೇಳಿದರು.
ಆರೋಪಿಗಳ ಪೈಕಿ ಜಾಫರ್ ಸಿದ್ದಿಕ್ ಮತ್ತು ಸೈಯದ್ ಅಖಿಲ್ ಹಾಗೂ ತಲೆಮರೆಸಿಕೊಂಡಿರುವ ಮೊಹಮ್ಮದ್ ಜವಾದ್ ಮೊಬೈಲ್ ಮತ್ತು ನಗದು ಕಳವು ಮಾಡುತ್ತಿದ್ದರೆ, ನಾಪತ್ತೆಯಾಗಿರುವ ಆಟೋ ಚಾಲಕರಾದ ಶಂಶೀರ್ ಪಾಷಾ ಮತ್ತು ಮುಜಾಹಿದ್ ಪಾಷಾ ಕಳವಿಗೆ ಸಹಾಯ ಮಾಡುತ್ತಿದ್ದರು. ಇನ್ನು ಇತರೆ ಆರೋಪಿಗಳು ಕಳವು ಮೊಬೈಲ್‌ಗಳನ್ನು ಸ್ವೀಕರಿಸುತ್ತಿದ್ದರು ಎಂದು ಪೊಲೀಸರು ಹೇಳಿದರು.