ಬೆಂಗಳೂರು: ಪಶ್ಚಿಮ ವಿಭಾಗ ಪೊಲೀಸರ ಕಾರ್ಯಾಚರಣೆಯಲ್ಲಿ ಮನೆ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಗೋವಿಂದರಾಜ ನಗರ ಪೊಲೀಸರು ಬಂಧಿಸಿದ್ದಾರೆ. ಕೆ.ಆರ್.ಪುರ ದೇವಸಂದ್ರದ ಮಸೀದಿ ರಸ್ತೆಯ ನಿವಾಸಿ ಇಮ್ರಾನ್ ಖಾನ್ (26) ಮತ್ತು ಗುರಪ್ಪನಪಾಳ್ಯ ನಿವಾಸಿ ಸಲ್ಮಾನ್ ಖಾನ್ (28) ಬಂಧಿತರು.
ಆರೋಪಿಗಳಿಂದ 5 ಲಕ್ಷ ರೂ. ಮೌಲ್ಯದ 100 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಇತ್ತೀಚೆಗೆ ಠಾಣೆ ವ್ಯಾಪ್ತಿಯಲ್ಲಿ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಮನೆ ಕಳವು ಮಾಡುತ್ತಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ಗೋವಿಂದರಾಜನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವರ ಹುಂಡಿ, ಪ್ರಯಾಣಿಕರ ಚಿನ್ನ ಕದ್ದವ ಸೆರೆ: ಮತ್ತೂಂದು ಪ್ರಕರಣದಲ್ಲಿ ದೇವಸ್ಥಾನದ ಹುಂಡಿಯನ್ನು ಕನ್ನ ಹಾಕಿದ್ದ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ಚಿನ್ನಾಭರಣ ಕಳವು ಮಾಡುತ್ತಿದ್ದ ಆರೋಪಿಯನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಗಂಗೋಂಡನಹಳ್ಳಿ ನಿವಾಸಿ ಸಿದ್ದಿಕ್ ಅಲಿಯಾಸ್ ಕುಣಿಗಲ್ ಸಿದ್ದಿಕ್ (36) ಬಂಧಿತ.
ಆರೋಪಿಯಿಂದ ಮೂರುವರೆ ಲಕ್ಷ ರೂ. ಮೌಲ್ಯದ 77 ಗ್ರಾಂ ಚಿನ್ನಾಭರಣ, 5 ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ. ಆರೋಪಿ 2022ರಲ್ಲಿ ಪ್ರಯಾಣಿಕರ ಸೋಗಿನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಸಿ, ಮಹಿಳಾ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಚಿನ್ನಾಭರಣ ದೋಚುತ್ತಿದ್ದ. ಅಲ್ಲದೆ, ದೇವಸ್ಥಾನಗಳ ಹುಂಡಿ ಕಳವು ಮಾಡುತ್ತಿದ್ದ ಎಂದು ಪೊಲೀಸಲು ಹೇಳಿದರು.
ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.