ಬೆಂಗಳೂರು: ಹಗಲಿನಲ್ಲಿ ಬೀಗ ಹಾಕಿದ ಮನೆಗಳನ್ನು ಗುರುತಿಸಿ ರಾತ್ರಿ ವೇಳೆ ಬೀಗ ಮುರಿದು ಕಳವು ಮಾಡುತ್ತಿದ್ದ ನೇಪಾಳ ಮೂಲದ ಇಬ್ಬರು ಸೆಕ್ಯೂರಿಟಿ ಗಾರ್ಡ್‌ಗಳನ್ನು ಸೋಲದೇವನ ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಿತ್ತಗನೂರು ನಿವಾಸಿಗಳಾದ ಮೋಹನ್ ಬಿ.ವಿಶ್ವಕರ್ಮ(29) ಮತ್ತು ಗೋರಖ್ ವಿಶ್ವಕರ್ಮ(38) ಬಂಧಿತರು.
ಆರೋಪಿಗಳಿಂದ 10.30 ಲಕ್ಷ ರೂ. ಮೌಲ್ಯದ 124 ಗ್ರಾಂ ಚಿನ್ನಾಭರಣ, 3 ಕೆ.ಜಿ. 200 ಗ್ರಾಂ ಬೆಳ್ಳಿ ವಸ್ತುಗಳು, 2 ಸಾವಿರ ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಹೆಸರಘಟ್ಟದ ದಾಸೇನಹಳ್ಳಿ ಕ್ರಾಸ್ ನಿವಾಸಿ ಅಮಿತ್ ಭೀಮಯ್ಯ ಎಂಬವರ ಮನೆಯಲ್ಲಿ ಕಳವು ಮಾಡಿದ್ದರು. ಅಮಿತ್ ಭೀಮಯ್ಯ, ಕಳೆದ ಜುಲೈನಲ್ಲಿ ಮನೆಗೆ ಬೀಗ ಹಾಕಿಕೊಂಡು ಊರಿಗೆ ತೆರಳಿದ್ದರು. ಕೆಲ ದಿನಗಳ ಬಳಿಕ ವಾಪಾಸ್ ಮನೆಗೆ ಬಂದು ನೋಡಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾ ಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.
ಮುಂಬೈ ಟು ಬೆಂಗಳೂರು: ಆರೋಪಿಗಳ ಪೈಕಿ ಮೋಹನ್ ಕೆಲ ವರ್ಷಗಳ ಹಿಂದೆ ನೇಪಾಳದಿಂದ ಮುಂಬೈಗೆ ಬಂದು ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿಯೇ ಮನೆ ಕಳವು ಮಾಡಿ ಜೈಲು ಸೇರಿದ್ದ. ನಂತರ ಜಾಮೀನು ಪಡೆದು ಐದು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡಿಕೊಂಡಿದ್ದ. ಗೋರಖ್ ಕೂಡ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ಈತ ವಿದ್ಯಾರಣ್ಯಪುರ ಠಾಣೆ ಪೊಲೀಸರು ಮನೆ ಕಳವು ಕೇಸ್‌ನಲ್ಲಿ ಬಂಧಿಸಿದ್ದರು. ಜಾಮೀನು ಪಡೆದುಕೊಂಡು ಬಂದು ಮತ್ತೆ ಕೃತ್ಯ ಎಸಗಿದ್ದಾನೆ. ಇಬ್ಬರು ಆರೋಪಿಗಳು ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ನಗರದ ವಿವಿಧೆಡೆ ಮನೆಗಳವು ಮಾಡುತ್ತಿದ್ದರು.
ಹಗಲಿನಲ್ಲಿ ಸುತ್ತಾಡಿ ಬೀಗ ಹಾಕಿದ ಮನೆಗಳನ್ನು ಗುರುತಿಸುತ್ತಿದ್ದರು. ರಾತ್ರಿ ವೇಳೆ ಆ ಮನೆಯ ಬೀಗ ಮುರಿದು ನಗದು, ಆಭರಣಗಳನ್ನು ಕಳ್ಳತನ ಮಾಡುತ್ತಿದ್ದರು. ಆರೋಪಿಗಳ ಬಂಧನದಿಂದ ನಗರದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಆರು ಮನೆ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದರು. ಸೋಲದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.