ಬೆಂಗಳೂರು: ಟೆಂಪೋ ಅಡ್ಡಗಟ್ಟಿ 57 ಲಕ್ಷ ರೂ. ಬೆಲೆ ಬಾಳುವ 1,282 ಟೈಟಾನ್ ವಾಚ್‌ಗಳನ್ನು ದರೋಡೆ ಮಾಡಿದ್ದ ಇಬ್ಬರನ್ನು ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜಮೀರ್ ಅಹಮದ್ (28) ಹಾಗೂ ಸೈಯದ್ ಶಾಹೀದ್ (26) ಬಂಧಿತರು. ಆರೋಪಿಗಳಿಂದ 57 ಲಕ್ಷ ರೂ. ಬೆಲೆಬಾಳುವ ಟೈಟಾನ್ ಕಂಪನಿಯ 23 ಬಾಕ್ಸ್ (ಒಟ್ಟು 1282) ವಾಚ್‌ಗಳನ್ನು ಜಪ್ತಿ ಮಾಡಲಾಗಿದೆ.
ಆರ್.ಆರ್.ನಗರದ ಜವರೇಗೌಡನಗರದಲ್ಲಿರುವ ಜೈದೀಪ್ ಎಂಟರ್ ಪ್ರೈಸಸ್ ಕೊರಿಯರ್ ಆಫೀಸ್‌ನ ವೇಹೌಸ್ ಮ್ಯಾನೇಜರ್ ಹನುಮೇಗೌಡ ಪ್ಲಿಪ್‌ಕಾರ್ಟ್ ಮೂಲಕ ವಾಚ್‌ಗಳನ್ನು ಶೋರೂಂಗೆ ಪೂರೈಸುತ್ತಿದ್ದರು. ಜ.15ರಂದು ಮಧ್ಯಾಹ್ನ 2 ಗಂಟೆಗೆ ಟೆಂಪೋದಲ್ಲಿ ಕೋಲಾರದ ಮಾಲೂರಿನ ಪ್ಲಿಪ್‌ಕಾರ್ಟ್ ಗೋದಾಮಿ ನಿಂದ 1,282 ವಾಚುಗಳನ್ನು ಜವರೇಗೌಡನದೊಡ್ಡಿ ಯಲ್ಲಿರುವ ಗೋದಾಮಿಗೆ ತಂದಿದ್ದರು. ಅದೇ ದಿನ ರಾತ್ರಿ 10 ಗಂಟೆಗೆ ಗೋದಾಮಿನಲ್ಲಿ ಕೆಲಸ ಮಾಡುವ ಜಾನ್ ಹಾಗೂ ಬಿಸಾಲ್ ಕಿಸಾನ್ ಸಿಗರೇಟ್ ತರಲೆಂದು ವಾಚ್ ಗಳನ್ನು ತುಂಬಿಡಲಾಗಿದ್ದ ಟೆಂಪೋ ತೆಗೆದುಕೊಂಡು ನಾಯಂಡಹಳ್ಳಿಗೆ ಹೋಗಿದ್ದರು.
ನಂತರ ರಾತ್ರಿ 10.30ಕ್ಕೆ ರಾಜರಾಜೇಶ್ವರಿನಗರ ಜವರೇಗೌಡನದೊಡ್ಡಿ ರಸ್ತೆಯ ಮಹಾರಾಜ ಬಾರ್ ಬಳಿ ಬರುತ್ತಿರುವಾಗ ಬಂಧಿತ ಆರೋಪಿಗಳ ದ್ವಿಚಕ್ರವಾಹನಕ್ಕೆ ಜಾನ್ ಚಲಾಯಿಸುತ್ತಿದ್ದ ಟೆಂಪೋ ತಾಗಿತ್ತು. ಇದರಿಂದ ಆಕ್ರೋಶಗೊಂಡ ಆರೋಪಿಗಳು ಟೆಂಪೋ ಅಡ್ಡಗಟ್ಟಿ ಜಾನ್ ಹಾಗೂ ಬಿಸಾಲ್‌ಗೆ ಹಲ್ಲೆ ನಡೆಸಿದ್ದರು. ಆತಂಕಗೊಂಡ ಇಬ್ಬರೂ ಟೆಂಪೋವನ್ನು ಅಲ್ಲೇ ಬಿಟ್ಟು ಓಡಿ ಹೋಗಿದ್ದರು. ಆ ವೇಳೆ ಆರೋಪಿಗಳು ಟೆಂಪೋ ವಾಹನದಲ್ಲಿದ್ದ ಮಾಲಿನ ಸಮೇತ ಹೊರಟು ಹೋಗಿ ಅದರಲ್ಲಿದ್ದ 57 ಲಕ್ಷ ರೂ. ಮೌಲ್ಯದ ವಾಚುಗಳನ್ನು ತಮ್ಮ ಮನೆಯಲ್ಲಿಟ್ಟು ಖಾಲಿ ಟೆಂಪೋವನ್ನು ಜವರೇಗೌಡನದೊಡ್ಡಿ ರಸ್ತೆಯ ಮಹಾರಾಜ ಬಾರ್ ಬಳಿ ಇಟ್ಟು ಪರಾರಿಯಾಗಿದ್ದರು.
ಇತ್ತ ಜಾನ್ ಈ ವಿಚಾರವನ್ನು ಮ್ಯಾನೇಜರ್ ಹನುಮೇಗೌಡನಿಗೆ ತಿಳಿಸಿದ್ದರು. ಅವರು ಸ್ಥಳಕ್ಕೆ ಬಂದು ನೋಡಿದಾಗ ಟೆಂಪೋದಲ್ಲಿದ್ದ ವಾಚುಗಳು ಕಳುವಾಗಿರುವುದು ಬೆಳಕಿಗೆ ಬಂದಿತ್ತು.
ಆರೋಪಿಗಳು ಸಿಕ್ಕಿ ಬಿದ್ದಿದ್ದು ಹೇಗೆ?: ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಟವರ್ ಲೊಕೇಶನ್ ಮೂಲಕ ಆರೋಪಿಗಳ ಸುಳಿವು ಪತ್ತೆಹಚ್ಚಿ ಬಂಧಿಸಿದ್ದರು. ವೃತ್ತಿಯಲ್ಲಿ ವ್ಯಾಪಾರಿಗಳಾಗಿದ್ದು, ಜ.15ರಂದು ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದಾಗ ಟೆಂಪೋವನ್ನು ಜಾನ್ ನಮ್ಮ ದ್ವಿಚಕ್ರವಾಹನಕ್ಕೆ ತಾಗಿಸಿದ್ದರು. ಬಳಿಕ ಟೆಂಪೋ ನಿಲುಗಡೆ ಮಾಡದೇ ಪರಾರಿಯಾಗಿದ್ದರು. ಇದರಿಂದ ಆಕ್ರೋಶಗೊಂಡ ಇಬ್ಬರಿಗೂ ಹಲ್ಲೆ ನಡೆಸಿದ್ದೆವು. ಆಗ ಇಬ್ಬರು ಅಲ್ಲಿಂದ ಓಡಿ ಹೋಗಿದ್ದರು. ಕುತೂಹಲಕ್ಕಾಗಿ ಟೆಂಪೋದ ಒಳಗೆ ಏನಿದೆ ಎಂದು ನೋಡಿದಾಗ ಬೆಲೆ ಬಾಳುವ ವಾಚುಗಳು ಕಂಡು ಬಂದವು. ಆ ವಾಚುಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.