ಬೆಂಗಳೂರು: ಗ್ರಾಹಕರ ಸೋಗಿನಲ್ಲಿ ಚಿನ್ನಾಭರಣ ಮಳಿಗೆಯಲ್ಲಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಇಬ್ಬರು ಮಹಿಳೆಯರನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ಕೃಷ್ಣವೇಣಿ(60) ಮತ್ತು ರತ್ನ ಪೆರುಮಾಳ್(45) ಬಂಧಿತರು. ಆರೋಪಿಗಳು ಏ.23ರಂದು ಬನಶಂಕರಿ 2ನೇ ಹಂತದ ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಎದುರಿನ ಜ್ಯುವೆಲ್ಲರಿ ಮಳಿಗೆಯೊಂದರಲ್ಲಿ ಮಾಲೀಕರ ಗಮನ ಬೇರೆಡೆ ಸೆಳೆದು 142 ಗ್ರಾಂ ತೂಕದ 6 ಜತೆ ಚಿನ್ನದ ಜುಮುಕಿ ಕದ್ದು ಪರಾರಿಯಾಗಿದ್ದರು. ಇಬ್ಬರು ಆರೋಪಿಗಳು ವೃತ್ತಿಪರ ಕಳ್ಳಿಯರಾಗಿದ್ದು, 10 ವರ್ಷದ ಹಿಂದೆ ಚಿಕ್ಕಪೇಟೆ, ನಂದಿನಿ ಲೇಔಟ್, ಮಲ್ಲೇಶ್ವರ, ಮಾಲೂರು ಪೊಲೀಸ್ ಠಾಣೆಗಳ ವ್ಯಾಪ್ತಿಯ ಜ್ಯುವೆಲ್ಲರಿ ಅಂಗಡಿಗಳಲ್ಲಿ ಗ್ರಾಹಕರ ಸೋಗಿನಲ್ಲಿ ಚಿನ್ನಾಭರಣ ಕದ್ದಿದ್ದರು. ಈ ಸಂಬಂಧ ಜೈಲು ಸೇರಿದ್ದರು. ಬಳಿಕ ಜಾಮೀನು ಪಡೆದು ಹೊರಬಂದು ತಮ್ಮ ಕಳ್ಳತನ ಚಾಳಿ ಮುಂದುವರೆಸಿದ್ದರು. ಕಳೆದ ಏಪ್ರಿಲ್‌ನಲ್ಲಿ ಬನಶಂಕರಿ ಠಾಣಾ ವ್ಯಾಪ್ತಿಯ ಜ್ಯುವೆಲ್ಲರಿ ಅಂಗಡಿಯಲ್ಲಿ ತಮ್ಮ ಕೈ ಚಳಕ ತೋರಿಸಿ ಪರಾರಿಯಾಗಿದ್ದರು. ಇದೀಗ 10 ವರ್ಷಗಳ ಬಳಿಕ ಮತ್ತೆ ಸಿಕ್ಕಿಬಿದ್ದಿದ್ದಾರೆ.
ಬೆರಳಚ್ಚು ಸುಳಿವು: ಇತ್ತೀಚೆಗೆ ಠಾಣೆ ವ್ಯಾಪ್ತಿಯಲ್ಲಿ ಕೃತ್ಯ ಎಸಗಿದ್ದರು. ಬಳಿಕ ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಆರೋಪಿಗಳ ಮುಖ ಚಹರೆ ಪತ್ತೆ ಹಚ್ಚಿ, ತಮಿಳುನಾಡಿಗೆ ತೆರಳಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳ ಬೆರಳಚ್ಚು ಸಂಗ್ರಹಿಸಿ ಹಿಂದಿನ ಕಳ್ಳತನ ಪ್ರಕರಣಗಳ ಆರೋಪಿಗಳ ಬೆರಳಚ್ಚುಗೆ ಹೋಲಿಸಿದಾಗ 10 ವರ್ಷದ ಹಿಂದೆ ಆರೋಪಿಗಳು ನಗರದಲ್ಲಿ ಬಂಧನಕ್ಕೆ ಒಳಗಾಗಿರುವುದು ಗೊತ್ತಾಗಿದೆ. ಆದರೆ, ಬೆರಳಚ್ಚು ಹೋಲಿಕೆ ಆದರೂ ಹೆಸರುಗಳು ಮಾತ್ರ ಬೇರೆ ಇತ್ತು. ಈ ಸಂಬಂಧ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳು, ಪೊಲೀಸರಿಗೆ ಸಿಕ್ಕಿಬಿದ್ದಾಗ ಅಸಲಿ ಹೆಸರು ಹೇಳದೆ ಬೇರೆ ಹೆಸರು ಹೇಳುತ್ತಿದ್ದರು. ಒಂದೊಂದು ಪೊಲೀಸ್ ಠಾಣೆಯಲ್ಲಿ ಒಂದೊಂದು ಹೆಸರು ಹೇಳಿರುವುದು ವಿಚಾರಣೆಯಿಂದ ತಿಳಿದು ಬಂದಿದೆ. ಕಲಾ, ರತ್ನ, ಸುಮಾ, ಮಾಲಾ ಸೇರಿ ಬೇರೆ ಬೇರೆ ಹೆಸರುಗಳನ್ನು ಹೇಳಿರುವುದು ಗೊತ್ತಾಗಿದೆ ಎಂದರು.
ಗಮನ ಬೇರೆಡೆ ಸೆಳೆದು ಕೃತ್ಯ:
ಚಿನ್ನಾಭರಣ ಮಳಿಗೆಗಳಿಗೆ ಗ್ರಾಹಕರ ಸೋಗಿನಲ್ಲಿ ತೆರಳುತ್ತಿದ್ದ ಆರೋಪಿಗಳು, ಹತ್ತಾರು ವಿನ್ಯಾಸದ ಒಡವೆಗಳನ್ನು ತೋರಿಸುವಂತೆ ಕೇಳುತ್ತಿದ್ದರು. ಅಂಗಡಿ ಸಿಬ್ಬಂದಿ ಚಿನ್ನಾಭರಣದ ಟ್ರೇಗಳನ್ನು ಟೇಬಲ್ ಮೇಲೆ ಇರಿಸಿದ ಬಳಿಕ ಒಂದೊಂದೇ ಒಡವೆಗಳನ್ನು ಆರೋಪಿಗಳು ಪರಿಶೀಲಿಸುವಂತೆ ನಾಟಕ ಮಾಡುತ್ತಿದ್ದರು. ಕೆಲ ಸಮಯದ ಬಳಿಕ ಬೇರೆ ವಿನ್ಯಾಸದ ಒಡವೆ ತೋರಿಸುವಂತೆ ಕೇಳಿ ಸಿಬ್ಬಂದಿ ಗಮನ ಬೇರೆಡೆ ಸೆಳೆದು ಚಿನ್ನಾಭರಣ ಎಗರಿಸುತ್ತಿದ್ದರು. ಅಸಲಿ ಆಭರಣವಿದ್ದ ಜಾಗಕ್ಕೆ ಕಡಿಮೆ ಗುಣಮಟ್ಟದ ಹಾಗೂ ಕಡಿಮೆ ತೂಕದ ಆಭರಣ ಇರಿಸುತ್ತಿದ್ದರು. ಬಳಿಕ ಈ ಒಡವೆಗಳು ಇಷ್ಟವಾಗಲಿಲ್ಲ ಎಂದು ಹೇಳಿ ಜಾಗ ಖಾಲಿ ಮಾಡುತ್ತಿದ್ದರು ಎಂಬುದು ವಿಚಾರಣೆಯಿಂದ ಗೊತ್ತಾಗಿದೆ.