ಬೆಂಗಳೂರು: ಸರ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಗೋವಿಂದರಾಜನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜೆ.ಪಿ.ನಗರ ನಿವಾಸಿಗಳಾದ ಏಳುಮಲೈ (25) ಹಾಗೂ ಶ್ರೀಧರ್ (26) ಬಂಧಿತರು.
ಆರೋಪಿಗಳಿಂದ 5.4 ಲಕ್ಷ ರೂ. ಮೌಲ್ಯದ 94.81 ಗ್ರಾಂ ಚಿನ್ನಾಭರಣ ಮತ್ತು ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಇತ್ತೀಚೆಗೆ ಠಾಣಾ ವ್ಯಾಪ್ತಿಯಲ್ಲಿ ಕೃತ್ಯ ಎಸಗಿದ್ದರು. ಇಬ್ಬರ ಬಂಧನದಿಂದ ಚಾಮರಾಜಪೇಟೆ, ಸುಬ್ರಹ್ಮಣ್ಯಪುರ, ವಿ.ವಿ.ಪುರಂ ಠಾಣೆಗಳಲ್ಲಿ ದಾಖಲಾಗಿದ್ದ 2 ಸರ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದರು.
ಆರೋಪಿಗಳ ಪೈಕಿ ಏಳುಮಲೈ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಸರ ಕಳವು ಪ್ರಕರಣಗಳು ದಾಖಲಾಗಿದ್ದು, ಜೈಲಿಗೆ ಹೋಗಿದ್ದ. ಇನ್ನು ಶ್ರೀಧರ್ ಕೂಡ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ. ಈ ವೇಳೆ ಇಬ್ಬರ ಪರಿಚಯವಾಗಿದೆ. ಅಲ್ಲಿಯೇ ಸರ ಕಳವು ಮಾಡಲು ಸಂಚು ರೂಪಿಸಿದ್ದರು. ಕೆಲ ದಿನಗಳ ಬಳಿಕ ಇಬ್ಬರು ಜೈಲಿನಿಂದ ಬಿಡುಗಡೆಯಾಗಿ, ಕೋರ್ಟ್‌ಗೆ ಹಾಜರಾಗಿ, ವಾಪಸ್ ಹೋಗುವಾಗ ವಿ.ವಿ.ಪುರಂ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಕಳವು ಮಾಡಿ, ಅದರಲ್ಲೇ ಚಾಮರಾಜಪೇಟೆ ಠಾಣೆ, ಸುಬ್ರಹ್ಮಣ್ಯನಗರ ಠಾಣೆ ವ್ಯಾಪ್ತಿಯಲ್ಲಿ ಸರ ಕದ್ದಿದ್ದರು. ಆ ನಂತರ ಗೋವಿಂದರಾಜನಗರ ಠಾಣೆ ವ್ಯಾಪ್ತಿಯಲ್ಲಿ ಕೃತ್ಯ ಎಸಗಿ ಸಿಕ್ಕಿಬ್ದಿದ್ದಾರೆ ಎಂದು ಪೊಲೀಸರು ಹೇಳಿದರು.
ಠಾಣಾಧಿಕಾರಿ ಶಿವಪ್ರಸಾದ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.