ಕುಂದಾಪುರ: ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಯ ಮೆಡಿಕಲ್, ಬಾರ್, ಅಂಗಡಿಗಳಲ್ಲಿ ಸೇರಿದಂತೆ ಒಟ್ಟು 7 ಕಡೆಗಳಲ್ಲಿ ನಡೆದ ಕಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿದ್ದ ಮೂವರು ಕಳ್ಳರನ್ನು ಗಂಗೊಳ್ಳಿ ಪೊಲೀಸರ ತಂಡ ಬಂಧಿಸಿದೆ.
ನಂತೂರಿನ ಅರ್ಷಿತ್ ಅವಿನಾಶ್ ದೋಡ್ರೆ (23), ಬೈಂದೂರಿನ ಪಡುವರಿಯ ರಿಝ್ವಾನ್ (24), ಯಡ್ತರೆಯ ಮಹಮ್ಮದ್ ಅರ್ಬಾಝ್ (23) ಬಂಧಿತರು.
ಆರೋಪಿಗಳನ್ನು ಮಾ. 29ರಂದು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಗಳಿಂದ ಒಟ್ಟು 36 ಸಾವಿರ ರೂ., ಕೃತ್ಯಕ್ಕೆ ಉಪಯೋಗಿಸಿದ ಪಲ್ಸರ್ ಬೈಕ್ ಹಾಗೂ 3 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಗಂಗೊಳ್ಳಿ ಠಾಣೆ ವ್ಯಾಪ್ತಿಯ ನಾಡಾ ಗುಡ್ಡೆಯಂಗಡಿಯ ಶಾನ್ ಮೆಡಿಕಲ್ ಶಾಪ್, ಬೈಂದೂರು ಠಾಣಾ ವ್ಯಾಪ್ತಿಯ ನಾಗೂರಿನ ಶ್ರೇಷ್ಠ ಮೆಡಿಕಲ್ ಶಾಪ್, ಕುಂದಾಪುರ ಠಾಣೆ ವ್ಯಾಪ್ತಿಯ ಖಾರ್ವಿಕೇರಿ ರಸ್ತೆಯ ಮಹಾಂಕಾಳಿ ಜನರಲ್ ಸ್ಟೋರ್, ಕೋಟ ಠಾಣೆ ವ್ಯಾಪ್ತಿಯ ಕೋಟ ಮೂರುಕೈಯ ವಿವೇಕ ಮೆಡಿಕಲ್ ಶಾಪ್, ಹಳ್ಳಾಡಿಯ ತಲ್ಲೂರು ಬಾರ್- ರೆಸ್ಟೋರೆಂಟ್, ಅಯ್ಯಂಗಾರ್ ಬೇಕರಿ, ಸ್ಯಾಬ್ರಕಟ್ಟೆಯ ನಂದಿಕೇಶ್ವರ ಹೊಟೇಲಿನಲ್ಲಿ ಅವರು ಕಳ್ಳತನ ನಡೆಸಿದ್ದರು.
ಗಂಗೊಳ್ಳಿ ಠಾಣೆಯ ಎಸ್‌ಐಗಳಾದ ಹರೀಶ್ ಆರ್., ಬಸವರಾಜ ಕನಶೆಟ್ಟಿ, ಸಿಬಂದಿ ಮೋಹನ, ನಾಗರಾಜ, ಚಂದ್ರಶೇಖರ, ಸಂದೀಪ್, ನಾಗರಾಜ, ದಿನೇಶ್ ಹಾಗೂ ನಿತಿನ್ ಅವರ ತಂಡ ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದೆ.