ಕಿನ್ನಿಗೋಳಿ: ಸಮೀಪದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಬುಧವಾರ ತಡರಾತ್ರಿ ಕಳ್ಳರು ನುಗ್ಗಿ ಬೆಳ್ಳಿಯ ಅಭರಣಗಳನ್ನು ಕಳವು ಮಾಡಿದ್ದಾರೆ.
ಬೆಳಗ್ಗೆ ದೇವಸ್ಥಾನದ ಅರ್ಚಕರು ಪೂಜೆಗೆಂದು ದೇವಸ್ಥಾನಕ್ಕೆ ಬರುವಾಗ ಪ್ರಕರಣ ಬೆಳಕಿಗೆ ಬಂದಿದೆ. ದೇವರ ಬೆಳ್ಳಿಯ ಪ್ರಭಾವಳಿ, ಶಂಖ ಚಕ್ರ ಗದಾ ಹಸ್ತ ಮತ್ತಿತರ ಬೆಳ್ಳಿಯ ಸುಮಾರು 4.50 ಲಕ್ಷ ರೂ. ಮೌಲ್ಯದ ಆಭರಣಗಳನ್ನು
ಕಳವು ಮಾಡಿದ್ದಾರೆ.
ದೇವಸ್ಥಾನಕ್ಕಿಂತ ಸ್ವಲ್ಪ ದೂರದ ಮನೆಯಲ್ಲಿ ವಾಸವಾಗಿರುವ ದೇವಸ್ಥಾನದ ಅರ್ಚಕ ಸಕಲೇಶಪುರ ಮೂಲದ ಲೋಕೇಶ್ ಅವರು ಗುರುವಾರ ಬೆಳಗ್ಗೆ ಪೂಜೆಗೆಂದು ಹೊರಡುವಾಗ ಅವರ ಮನೆಯ ಬಾಗಿಲಿಗೆ ಹೊರಗಿನಿಂದ ಚಿಲಕ ಹಾಕಿದ್ದು, ಹೊರಬರಲಾಗದ ಕಾರಣ ಸಮೀಪದಲ್ಲಿನ ಅಂಗಡಿ ಮಾಲಕ ಭಾಸ್ಕರ್ ಅವರಿಗೆ ಕರೆ ಮಾಡಿ ಚಿಲಕ ತೆಗೆಯಲು ಬರ ಹೇಳಿದ್ದಾರೆ. ಆಗಲೇ ಲೋಕೇಶ್ ಅವರಿಗೆ ಸಂಶಯ ಬಂದು ದೇವಸ್ಥಾನಕ್ಕೆ ಬರುವಾಗ ಪ್ರಕರಣ ಬೆಳಕಿಗೆ ಬಂದಿದೆ.
ಸುತ್ತು ಪೌಳಿಯ ಮುಂಭಾಗದ ಬಾಗಿಲಿಗೆ ಬೀಗ ಹಾಕಿದ್ದು, ಅದು ಯಥಾಸ್ಥಿತಿಯಲ್ಲಿದೆ. ಸುತ್ತು ಪೌಳಿಯ ಮೇಲಿನ ಮೂಲಕ ಬಂದು ದೇವರ ಗರ್ಭಗುಡಿಯ ಮುಂದಿನ ಎರಡೂ ಬಾಗಿಲಿನ ಚಿಲಕ ಮುರಿದು ಒಳಹೊಕ್ಕು ಕಳ್ಳತನ ನಡೆಸಿದ್ದಾರೆ. ಅನಂತರ ದೇವಸ್ಥಾನದ ಬಲ ಮತ್ತು ಎಡ ಬದಿಯ ಬಾಗಿಲು ತೆರೆದಿದ್ದು ಅದರ ಮೂಲಕ ಹೊರಹೋಗಿರುವ ಸಾಧ್ಯತೆ ಇದೆ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನ ದಳ ಬೇಟಿ ನೀಡಿದ್ದು, ಮಂಗಳೂರು ಕ್ರೈಮ್ ಡಿ.ಸಿ.ಪಿ. ಹನುಮಂತಯ್ಯ, ಮೂಲ್ಕಿ ಪೊಲೀಸ್ ನಿರೀಕ್ಷಕ ಅನಂತ ಪದ್ಮನಾಭ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.