ಗಂಗೊಳ್ಳಿ: ಇಲ್ಲಿನ ಫ್ಯಾನ್ಸಿ ಅಂಗಡಿಯಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಗಂಗೊಳ್ಳಿ ಪೊಲೀಸರು ಕ್ಷಿಪ್ರಗತಿಯಲ್ಲಿ ಬೇಧಿಸುವಲ್ಲಿ ಯಶಸ್ವಿಯಾಗಿದ್ದು, ಐವರು ಕಳ್ಳರನ್ನು ಬಂಧಿಸಿದ್ದಾರೆ.
ಗಂಗೊಳ್ಳಿ ಲೈಟ್‌ಹೌಸ್ ನಿವಾಸಿ ಸುಲೈಮಾನ್ ಯಾನೆ ನದೀಮ್ (27), ಫಿಶ್ ಮಾರ್ಕೇಟ್ ನಿವಾಸಿ ಮಹಮ್ಮದ್ ಅರೀಫ್ (18) ಮತ್ತು ಭಟ್ಕಳದ ನಿವಾಸಿ ಮಹಮ್ಮದ್ ರಯ್ನಾನ್ (18) ಬಂಧಿತರು. ಇನ್ನಿಬ್ಬರು ಅಪ್ರಾಪ್ತರಾಗಿದ್ದು, ಅವರನ್ನು ಬಾಲ ನ್ಯಾಯ ಮಂಡಳಿ ಮುಂದೆ ಹಾಜರುಪಡಿಸಲಾಗಿದೆ.
ಗಂಗೊಳ್ಳಿಯ ಜಾಮೀಯಾ ಕಾಂಪ್ಲೆಕ್ಸ್‌ನಲ್ಲಿರುವ ಬಟ್ಟೆ ಹಾಗೂ ಫ್ಯಾನ್ಸಿ ಅಂಗಡಿಯಲ್ಲಿ ಮಾ.31ರಂದು ಸಂಜೆ ಕೆಲಸಗಾರರು ಮಸೀದಿಗೆ ಪ್ರಾರ್ಥನೆಗೆ ಹೋದ ವೇಳೆ ನುಗ್ಗಿದ ಕಳ್ಳರು, ಅಂಗಡಿ ಕ್ಯಾಶ್ ಕೌಂಟರ್‌ನಲ್ಲಿಟ್ಟಿದ್ದ 90 ಸಾವಿರ ರೂ. ಹಾಗೂ ಸುಮಾರು 15 ಸಾವಿರ ರೂ. ಮೌಲ್ಯದ ಮೊಬೈಲ್‌ನ್ನು ಕಳವುಗೈದಿದ್ದರು.
ಬಂಧಿತರಿಂದ 52 ಸಾವಿರ ರೂ. ನಗದು, ಕಳವು ಮಾಡಿದ ಮೊಬೈಲ್, ಕೃತ್ಯಕ್ಕೆ ಬಳಸಿದ ಆಟೋ ರಿಕ್ಷಾ, ಬೈಕ್ ಹಾಗೂ ಆರೋಪಿಗಳು ಉಪಯೋಗಿಸುತ್ತಿರುವ ಮೂರು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಗಂಗೊಳ್ಳಿ ಎಸ್‌ಐಗಳಾದ ಹರೀಶ್ ಆರ್., ಬಸವರಾಜ್ ಕನಶೆಟ್ಟಿ ಹಾಗೂ ಸಿಬಂದಿಯಾದ ಮೋಹನ, ನಾಗರಾಜ, ಚಂದ್ರಶೇಖರ, ಸಂದೀಪ ಕುರಣಿ ಹಾಗೂ ಸತೀಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.