ಮಡಿಕೇರಿ: ನಾಡಿನ ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ನಿಗದಿಗಿಂತ ಒಂದು ನಿಮಿಷ ಮುಂಚಿತವಾಗಿ ಮಂಗಳವಾರ ತಡರಾತ್ರಿ ಕಳೆದು ಬುಧವಾರ ನಸುಕಿನ 1.26ರ ಸಮಯಕ್ಕೆ ಭಕ್ತರ ಹರ್ಷೋದ್ಘಾರದ ನಡುವೆ ಪವಿತ್ರ ಕಾವೇರಿ ತೀರ್ಥೋದ್ಭವವಾಯಿತು.
ಭಕ್ತರ ಜಯಘೋಷ, ವಿವಿಧ ಧಾರ್ಮಿಕ ವಿಧಿ ವಿಧಾನಗಳ ನಡುವೆ ಕುಂಡಿಕೆಯಲ್ಲಿ ತಾಯಿ ಕಾವೇರಿ ತೀರ್ಥರೂಪಿಣಿಯಾಗಿ ಕಾಣಿಸಿ ಕೊಂಡಳು.
ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು, ಶಾಸಕದ್ವಯರಾದ ಎ.ಎಸ್. ಪೊನ್ನಣ್ಣ, ಡಾ| ಮಂತರ್ ಗೌಡ, ಸಂಸದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿ.ಪಂ. ಸಿಇಒ ವರ್ಣಿತ್ ನೇಗಿ, ಎಸ್‌ಪಿ ಕೆ. ರಾಮರಾಜನ್ ತೀರ್ಥೋದ್ಭವದ ಪವಿತ್ರ ಕ್ಷಣಕ್ಕೆ ಸಾಕ್ಷಿಯಾದರು.
ಮಧ್ಯ ರಾತ್ರಿಯಲ್ಲಿ ತೀರ್ಥೋದ್ಭವವಾದರೂ ಜಿಲ್ಲೆಯ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ಶ್ರೀಭಗಂಡೇಶ್ವರನಿಗೆ ಪೂಜೆ ಸಲ್ಲಿಸಿ ದರು. ಅನಂತರ ಕಾಲ್ನಡಿಗೆಯ ಮೂಲಕ ಕಾವೇರಿ ಮಾತೆಯ ಸ್ಮರಣೆಯೊಂದಿಗೆ ತಲಕಾವೇರಿಗೆ ತೆರಳಿದರು. ಭಕ್ತರಿಗೆ ಅನ್ನಸಂತರ್ಪಣೆಯ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.