ಕಥೆಗಾರ ಯಂಡಮೂರಿ ವೀರೇಂದ್ರನಾಥ್ ಅವರೀಗ ಕನ್ನಡದಲ್ಲೊಂದು ಚಿತ್ರ ನಿರ್ದೇಶಿಸಿದ್ದಾರೆ. ಅವರ ನಿರ್ದೇಶನದ ಚಿತ್ರಕ್ಕೆ “ಕರಿಗಂಬಳಿಯಲ್ಲಿ ಮಿಡಿನಾಗ’ ಎಂದು ಹೆಸರಿಡಲಾಗಿದೆ. ಇದು ಅವರ ಕಾದಂಬರಿಯ ಹೆಸರಾಗಿದ್ದರೂ, ಈ ಚಿತ್ರದ ಕಥೆ ಬೇರೆಯದ್ದು. ಆದರೆ, ಚಿತ್ರಕ್ಕೇ ಮಾತ್ರ ಅವರ ಕಾದಂಬರಿಯ ಹೆಸರನ್ನೇ ಇಟ್ಟಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಜವಾಬ್ದಾರಿಯೂ ಅವರದೇ. ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದಿದ್ದು, ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.
ಚಿತ್ರಕ್ಕೆ ವಿಶ್ವಜೀತ್ ಹರೀಶ್ ನಿರ್ಮಾಪಕರು. ವಿಶ್ವಜೀತ್ ನಿರ್ಮಾಣದ ಜತೆ ನೆಗೆಟಿವ್ ಪಾತ್ರವೊಂದರಲ್ಲೂ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಮೂಲಕ ನವೀನ್ ತೀರ್ಥಹಳ್ಳಿ ಎಂಬ ಯುವ ನಟ ಹೀರೋ ಆಗಿದ್ದಾರೆ. ನವೀನ್ ಅಭಿನಯದ “ಕೌರ್ಯ’ ಚಿತ್ರದ ಟೀಸರ್ ಮತ್ತು ಫೋಟೋ ನೋಡಿದ ನಿರ್ದೇಶಕ ಯಂಡಮೂರಿ ವೀರೇಂದ್ರನಾಥ್, ನವೀನ್ ತೀರ್ಥಹಳ್ಳಿ ಅವರನ್ನು ಹೀರೋ ಮಾಡಿ ಸಿನಿಮಾ ಮುಗಿಸಿದ್ದಾರೆ. ಚಿತ್ರದಲ್ಲಿ ನವೀನ್ ತೀರ್ಥಹಳ್ಳಿ ಅವರದು ಖಡಕ್ ಆಂಟಿ ಟೆರರಿಸ್ಟ್ ಸ್ಕ್ವಾಡ್ ಅಧಿಕಾರಿಯ ಪಾತ್ರವಂತೆ.
ನವೀನ್ ತೀರ್ಥಹಳ್ಳಿ ಹತ್ತಾರು ಚಿತ್ರಗಳಲ್ಲೂ ಸಣ್ಣಪುಟ್ಟ ಪಾತ್ರ ನಿರ್ವಹಿಸುವ ಮೂಲಕ ಗಮನಸೆಳೆದಿದ್ದಾರೆ. ನವೀನ್ “ಕೌರ್ಯ’ ಚಿತ್ರದಲ್ಲಿ ಹೀರೋ ಆಗಿದ್ದರೂ “ಕರಿಗಂಬಳಿಯಲ್ಲಿ ಮಿಡಿನಾಗ’ ಅವರ ಮೊದಲ ಸಿನಿಮಾವಂತೆ. ನವೀನ್‌ಗೆ ನಟನೆ ಎಂದರೆ ಎಲ್ಲಿಲ್ಲದ ಪ್ರೀತಿ. ಹಾಗಾಗಿ ಅವರಿಗೆ ಚಿಕ್ಕಂದಿನಿಂದಲೂ ಸಿನಿಮಾದಲ್ಲಿ ನಟಿಸುವ ಆಸೆ ಹೆಚ್ಚಾಗಿತ್ತು. ಸಿನಿಮಾ ಹೀರೋಗೆ ಇರಬೇಕಾದ ಎಲ್ಲಾ ಅರ್ಹತೆಯನ್ನು ಪಡೆದ ಬಳಿಕ ಅವರು ಇಲ್ಲೇ ಗಟ್ಟಿ ನೆಲೆ ಕಾಣಬೇಕೆಂಬ ತಯಾರಿ ಮಾಡಿಕೊಂಡಿದ್ದಾರೆ.
“ಕರಿಗಂಬಳಿಯಲ್ಲಿ ಮಿಡಿನಾಗ’ ಚಿತ್ರದ ಬಗ್ಗೆ ಸಾಕಷ್ಟು ನಂಬಿಕೆ ಇಟ್ಟಿರುವ ನವೀನ್‌ಗೆ ಚಿತ್ರ ಗೆಲುವು ಕೊಡುವ ನಿರೀಕ್ಷೆ ಇದೆಯಂತೆ. ಅವರಿಗೆ ಆ್ಯಕ್ಷನ್ ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಆಸೆ ಇದೆ. ಹಾಗಂತ ಅದೇ ಪಾತ್ರಗಳನ್ನು ಎದುರು ನೋಡುವುದಿಲ್ಲ. ಎಲ್ಲಾ ರೀತಿಯ ಪಾತ್ರಗಳಲ್ಲೂ ಕಾಣಿಸಿಕೊಳ್ಳುವ ಬಯಕೆ ಅವರದು. ಇದು ಮುಸ್ಲಿಂ ತಂದೆ, ಹಿಂದು ಮಗಳ ನಡುವಿನ ಬಂಧದ ಕಥೆ ಹೊಂದಿದೆ. ಇಲ್ಲಿ ಉಗ್ರಗಾಮಿಗಳ ಅಟ್ಟಹಾಸ ಮತ್ತಿತರ ಅಂಶಗಳೂ ಇಲ್ಲಿರಲಿವೆ.
ಇನ್ನು, ಈ ಚಿತ್ರಕ್ಕೆ ಯತಿರಾಜ್ ವೀರಾಬುಧಿ ಮಾತುಗಳನ್ನು ಪೋಣಿಸಿದ್ದಾರೆ. ಕೆ.ಅಜಯ್‌ಕುಮಾರ್ ಸಹಾಯಕ ನಿರ್ದೇಶಕರಾದರೆ, ನಿರಂಜನ್ ಬಾಬು ಕ್ಯಾಮೆರಾ ಹಿಡಿದಿದ್ದಾರೆ. ಹೊಸ್ಮನೆ ಮೂರ್ತಿ ಕಲಾನಿರ್ದೇಶನವಿದೆ. ಮಾರತ್‌ಹಳ್ಳಿ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ಚಿರಶ್ರೀ ಅಂಚನ್ ನಾಯಕಿಯಾಗಿದ್ದಾರೆ. ಉಳಿದಂತೆ ಸೂರ್ಯನಾರಾಯಣ, ಉಪ್ಪಲೂರಿ ಸುಬ್ಬರಾಯ ಶರ್ಮ ಇತರರು ನಟಿಸಿದ್ದಾರೆ.