Advertisement

Theerthahalli: 17ನೇ ವರ್ಷದ ಸುಬ್ರಮಣ್ಯ ಷಷ್ಠಿ ದೀಪೋತ್ಸವ

10:32 AM Dec 20, 2023 | Kavyashree |

ತೀರ್ಥಹಳ್ಳಿ: ತಾಲೂಕಿನ ಹುಂಚದಕಟ್ಟೆ ಗ್ರಾಮದ ರಾಮನಸರ ಶ್ರೀ ನಾಗದೇವತೆ ದೇವಸ್ಥಾನದಲ್ಲಿ 17ನೇ ವರ್ಷದ  ಸುಬ್ರಮಣ್ಯ ಷಷ್ಠಿ ದೀಪೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

Advertisement

ಸೋಮವಾರ ಬೆಳಿಗ್ಗೆ ಶ್ರೀ ನಾಗದೇವತೆ, ಶ್ರೀ ಚೌಡೇಶ್ವರಿ ದೇವಿ, ಶ್ರೀ ವೀರಭದ್ರೇಶ್ವರ ಸ್ವಾಮಿ ಸೇರಿದಂತೆ ಪರಿವಾರ ದೇವತೆಗಳಿಗೆ ಗಣಹೋಮ, ಪಂಚ ವಿಂಶತಿ ಕಲಶ, ಕಲಾತತ್ವ ಅಧಿವಾಸ ಹೋಮ ಹಾಗೂ ಪೂಜಾ ವಿಧಿವಿಧಾನಗಳನ್ನು ವೇದಮೂರ್ತಿ ವಿದ್ವಾನ್ ಮುರಳೀಧರ ಕೆದ್ಲಾಯ್ ಹೆಗಡೆಗೆರೆ ನೆರೆವೇರಿಸಿದರು. ಅರಸೀಕೆರೆ ಮಾರುತಿ ಸಚ್ಚಿದಾನಂದ ಆಶ್ರಮದ ಶ್ರೀಪರಂಪರ ಅವಧೂತ ಸದ್ಗುರು ಶ್ರೀಸತೀಶ್ ಶರ್ಮ ಪಾಲ್ಗೊಂಡಿದ್ದರು.

ಮಧ್ಯಾಹ್ನ ಆಶ್ಲೇಷ ಬಲಿ, ಅನ್ನಸಂತರ್ಪಣೆ ನಡೆಯಿತು. ದೇವಸ್ಥಾನ ಸನ್ನಿಧಿಯಿಂದ ಹುಂಚದಕಟ್ಟೆ ಮುಖ್ಯ ವೃತ್ತದವರೆಗೂ ವಿವಿಧ ಗ್ರಾಮೀಣ ಕಲಾ ತಂಡಗಳೊಂದಿಗೆ ಭಕ್ತರ ಸಮ್ಮುಖದಲ್ಲಿ ದೇವರ ಮೂರ್ತಿಯ ಉತ್ಸವ ಮೆರವಣಿಗೆ ನಡೆಸಲಾಯಿತು. ರಾತ್ರಿ ಗ್ರಾಮದ ಸುತ್ತಲ ಗ್ರಾಮಸ್ಥರು ಸೇರಿದಂತೆ ಜಿಲ್ಲೆ, ಹೊರ ಜಿಲ್ಲೆಗಳಿಂದ ಆಗಮಿಸಿದ ಸಾವಿರಾರು ಭಕ್ತರು ದೀಪ ಬೆಳಗಿಸುವ ಮೂಲಕ ದೇವರ ಕೃಪೆಗೆ ಪಾತ್ರರಾದರು.

ದೀಪೋತ್ಸವ ಕಾರ್ಯಕ್ರಮಕ್ಕೂ ಮುನ್ನಾ ದೇವಸ್ಥಾನ ಆವರಣದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳು ಮನುಷ್ಯನಲ್ಲಿ ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಮನುಷ್ಯ ಇಂದು ಎಷ್ಟೇ ಆಧುನಿಕತೆಗೆ ಮಾರುಹೋಗಿದ್ದರು ಜೀವನದಲ್ಲಿ ಸೋಲು ಕಂಡಾಗ ಧಾರ್ಮಿಕ ಕ್ಷೇತ್ರಗಳು ಬದುಕುವ ಚೈತನ್ಯವನ್ನು ಮೂಡಿಸುತ್ತದೆ ಎಂದರು.

Advertisement

ಈ ಕ್ಷೇತ್ರದಲ್ಲಿ ಅದ್ಬುತವಾದ ಶಕ್ತಿ ಅಡಗಿದ್ದು, ಬಹಳಷ್ಟು ದೂರದಿಂದ ಭಕ್ತರು ಇಲ್ಲಿಗೆ ಬರುತ್ತಿರುವುದು ಈ ಕ್ಷೇತ್ರದ ಮಹಿಮೆಯನ್ನು ಅರಿಯಬಹುದಾಗಿದೆ ಎಂದ ಅವರು, ಇಂದಿನ ಯಾಂತ್ರಿಕ ಬದುಕಿನಲ್ಲಿ ನೆಮ್ಮದಿಕೊಂಡುವ ಕ್ಷೇತ್ರಗಳು ಧಾರ್ಮಿಕ ಕ್ಷೇತ್ರಗಳಾಗಿವೆ. ನಮ್ಮ ದೇಹಾರೋಗ್ಯದಲ್ಲಿ ವ್ಯತ್ಯಾಸವಾದರೇ ಆಸ್ಪತ್ರೆಗಳು ಇವೆ. ಆದರೆ, ಮನಸ್ಸಿಗೆ ನೆಮ್ಮದಿ ಇಲ್ಲದಿದ್ದರೇ ಧಾರ್ಮಿಕ ಕ್ಷೇತ್ರಗಳೇ ಮನಸ್ಸಿಗೆ ನೆಮ್ಮದಿಕೊಡುವ ಆಸ್ಪತ್ರೆಗಳಾಗಿವೆ ಎಂದು ಹೇಳಿದರು.

ಧಾರ್ಮಿಕ ಸಭಾ ಕಾರ್ಯಕ್ರಮವನ್ನು ವೇದಮೂರ್ತಿ ವಿದ್ವಾನ್ ಮುರಳೀಧರ ಕೆದ್ಲಾಯ್ ಹೆಗಡೆಗೆರೆ ಉದ್ಘಾಟಿಸಿದರು. ಜೀ ಕನ್ನಡ ವಾಹಿನಿ ಸರಿಗಮಪ ಖ್ಯಾತಿಯ ಜೋಗಿ ಪದ ಗಾಯಕ ನಾಗರಾಜ್ ತುಮರಿ ಸೇರಿದಂತೆ ಅನೇಕರುನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ದೇವಸ್ಥಾನ ವ್ಯವಸ್ಥಾಪಕರಾದ ಸುನದಮ್ಮ, ಚಂದ್ರಶೇಖರ್(ಪುಟ್ಟು), ನಾಗರಾಜ್, ಹುಂಚದಕಟ್ಟೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೃತಿ ತಾರಾನಾಥ್, ದೇವಸ್ಥಾನ ಪ್ರಧಾನ ಅರ್ಚಕರಾದ ಸುರೇಶ್ ಭಟ್, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎಚ್.ಆರ್.ರಾಘವೇಂದ್ರ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೆ.ಎಸ್.ಮಹೇಶ್, ಪ್ರಗತಿಪರ ಕೃಷಿಕ ಬಸವರಾಜ್ ಗೌಡ, ಗಣೇಶ್, ಗುತ್ತಿಗೆದಾರ ಗುರಪ್ಪಗೌಡ, ಉದ್ಯಮಿ ಎಚ್.ಡಿ.ಶಶಿಧರ್, ಸೋಮಶೇಖರ್, ಮಂಜಣ್ಣ, ರಾಜು ಸಾಗರ ಸೇರಿದಂತೆ ಅನೇಕರು ಇದ್ದರು.

ಆಕರ್ಷಕ ಸಿಡಿಮದ್ದು ಪ್ರದರ್ಶನ

ದೀಪೋತ್ಸವದ ಅಂಗವಾಗಿ ದೇವಾಲಯದ ಸುತ್ತಮುತ್ತಲ ಪ್ರದೇಶದಲ್ಲಿ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದರೇ, ದೇವಾಲಯ ಆವರಣವನ್ನು ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಲಾಗಿತ್ತು. ದೀಪೋತ್ಸವ ಕಾರ್ಯಕ್ರಮ ಚಾಲನೆ ಪಡೆದುಕೊಳ್ಳುತ್ತಿದ್ದಂತೆ ದೇವಸ್ಥಾನದ ಆವರಣದಲ್ಲಿ ಬೆಳಕಿನ ಚಿತ್ತಾರ ಮೂಡಿದ್ದು, ಇದೇ ವೇಳೆ ಸಿಡಿಮದ್ದು ಪ್ರದರ್ಶನ ಪ್ರದರ್ಶನ  ನಡೆಯಿತು. ವಿವಿಧ ಬಣ್ಣ ಬಣ್ಣದ ಪಟಾಕಿ, ಬಾಣ ಬಿರುಸುಗಳು ಬಾನಂಗಳದಲ್ಲಿ ಚಿತ್ತಾಕರ್ಷಕ ಮೂಡಿಸುವುದರೊಂದಿಗೆ ಭಕ್ತರ ಗಮನ ಸೆಳೆಯಿತು.

Advertisement

Udayavani is now on Telegram. Click here to join our channel and stay updated with the latest news.

Next