Advertisement
ಮೀಡಿಯಾಗ್ರೀಕ್ನ ಯೂರಿಪಿಡೀಸ್ ನಾಟಕ ಮೀಡಿಯಾ. ಅಭಿನಯಿಸಿದ ತಂಡ ಅದಮ್ಯ ರಂಗ ಸಂಸ್ಕೃತಿ ಟ್ರಸ್ಟ್ ಬೆಂಗಳೂರು. ಮಾಲತೇಶ ಬಡಿಗೇರ ನಿರ್ದೇಶನದಲ್ಲಿ ಮೂಡಿಬಂದ ಈ ನಾಟಕ ದುರಂತಪ್ರಜ್ಞೆಯ ವಿಶಿಷ್ಟ ರಂಗಪ್ರಯೋಗ. ಗ್ರೀಕ್ ನಾಟಕ ಪರಂಪರೆಯಲ್ಲಿ ವಿಧಿ ಮತ್ತು ಪುರುಷ ಪ್ರಯತ್ನ ನಡುವಿನ ಸಂಘರ್ಷ ತುಂಬಾ ಮುಖ್ಯವಾಗಿ ಚರ್ಚಿತವಾಗುತ್ತದೆ. ಈ ಪ್ರಯೋಗವೂ ನಮ್ಮ ಮುಂದೆ ನ್ಯಾಯ-ಅನ್ಯಾಯದ ಹಲವು ನೈತಿಕ ಪ್ರಶ್ನೆಗಳನ್ನು ತರುತ್ತದೆ. ಗ್ರೀಕ್ ನಾಟಕದ ವಿಶೇಷತೆ ಎಂದರೆ ಮೇಳಗಳು ವಹಿಸುವ ವಿಭಿನ್ನ ನಿಲುವುಗಳು ಮತ್ತು ಹಲವು ಬಾರಿ ವಿವೇಕದ ಧ್ವನಿಯಾಗಿ ಘಟನೆಗಳನ್ನು ಮುಂದಕ್ಕೆ ಒಯ್ಯುತ್ತದೆ. ಪ್ರಸ್ತುತ ಈ ಪ್ರಯೋಗವೂ ಹಲವು ವಿಭಿನ್ನತೆಗಳಿಂದ ಗಮನ ಸೆಳೆಯಿತು. ಇಡೀ ನಾಟಕವನ್ನು ಆವರಿಸಿಕೊಂಡ ಕ್ರೌರ್ಯ, ಹಿಂಸೆಯನ್ನು ಮೇಳದ ಪಾತ್ರಗಳನ್ನು ಕ್ರೂರವಾಗಿ ಪ್ರಸಾದನ ಮಾಡುವ ಮೂಲಕ ತೋರಿಸಿದ್ದು ಹಾಗೇ ಮೀಡಿಯಾಗಳನ್ನು ಹೊಂದಿದ್ದ ದೀರ್ಘವಾದ ಕೆಂಪು ಹೊದಿಕೆ ನಾಟಕದ ವಸ್ತುಧ್ವನಿಯ ರೂಪಕವಾಗಿತ್ತು.
ಮಂಗಳೂರಿನ ರಂಗಸಂಗಾತಿ ಅಭಿನಯಿಸಿದ ನಾಟಕ ಮರ,ಗಿಡ,ಬಳ್ಳಿ. ವೈದೇಹಿ ಅವರ ಎರಡು ಕತೆಗಳನ್ನು ಹೆಣೆದು ನಿರ್ದೇಶಿಸಿದವರು ಬಿ.ಎಸ್. ರಾಮ ಶೆಟ್ಟಿ ಹಾರಾಡಿ. ಅನಾರೋಗ್ಯ ಪೀಡಿತ ಹಿರಿ ಜೀವವೊಂದು ತನ್ನನ್ನು ಮಕ್ಕಳು ಸೊಸೆ, ಮಗಳು ಸಂಬಂಧಿಕರು ಹೇಗೆ ಉಪಚರಿಸುತ್ತಾರೆ ಎಂಬ ಒಳತೋಟಿಯ ಪ್ರಜ್ಞಾಪೂರ್ವಕ ಪ್ರವಾಹ ಈ ನಾಟಕದಲ್ಲಿ ಇದೆ. ಮಂದಕ್ಕ ಒಂದು ಸಾಕ್ಷಿಪ್ರಜ್ಞೆಯಂತೆ ನಾಟಕದ ಉದ್ದಕ್ಕೂ ಎಲ್ಲವನ್ನು ಗ್ರಹಿಸುತ್ತಾ ರೋಗ ಪೀಡಿಳಂತೆ ಬಿದ್ದಿರುತ್ತಾಳೆ. ನಾಟಕೀಯವಾಗಿ ಇದನ್ನು ವಿಭಿನ್ನವಾಗಿ ತೋರಿಸಲು ಮಂದಕ್ಕನ ಮಾತನ್ನು (ಸ್ವಗತ) ಪ್ರೇಕ್ಷಕರಿಗೆ ಮಾತ್ರ ಕೇಳಿಸುತ್ತಾ ಅಲ್ಲಿ ಒಳಗೆ ಪಾತ್ರಗಳಿಗೆ ಕೇಳಿಸದಂತೆ ಮಾಡಿ ಇವುಗಳ ಪ್ರತಿಕ್ರಿಯೆಯನ್ನು ಮಾತ್ರ ಪುನಃ ಕೇಳಿಸುವಂತೆ ಮಾಡಿರುವ ತಂತ್ರ ರೋಚಕವಾಗಿದೆ. ತನ್ನ ಸ್ವಗತದ ಮಾತುಗಳನ್ನು ಮತ್ತೂಂದು ಪಾತ್ರದ ಜೊತೆ ಢಿಕ್ಕಿ ಹೊಡೆಸಿ ಮಾತಾಡಿಸಿದ ನಿರ್ದೇಶಕರ ತಂತ್ರ ಪರಿಣಾಮಕಾರಿಯಾಗಿದೆ. ಮಂದಕ್ಕನ ಅಭಿನಯವೂ ಅಷ್ಟೇ ಜೀವಪೂರ್ಣವಾಗಿತ್ತು.ಇನ್ನೊಂದು ಕತೆ ಯಾರಿದ್ದಾರೆ.ಇಲ್ಲಿ ಇನ್ನೊಬ್ಬ ವಯಸ್ಸಾದ ವ್ಯಕ್ತಿ ರಾಮಣ್ಣಯ್ಯನ ಜೊತೆ ಗೀತಾ ಅನುಭವಿಸುವ ಕಿರಿಕಿರಿ, ನೋವು, ಅವಮಾನಗಳು, ಸ್ವಾರ್ಥ ನಾಟಕಕ್ಕೆ ವಿಶಿಷ್ಟ ಆಯಾಮ ತಂದುಕೊಡುತ್ತದೆ. ತನ್ನ ಸ್ವಾರ್ಥಕ್ಕಾಗಿ ಮದುವೆ ವಯಸ್ಸಿಗೆ ಬಂದ ಗೀತಾಳಿಗೆ ಬಂದ ಎಲ್ಲ ವರ ಪ್ರಸ್ತಾಪವನ್ನು ಕುಂಟು ನೆಪ ಹೇಳಿ ತಪ್ಪಿಸುವ ರಾಮಣ್ಣಯ್ಯ ಹಿರಿಯರ ಶೋಷಣೆಯ ಇನ್ನೊಂದು ಮುಖವಾಗಿಯೂ ಮುನ್ನೆಲೆಗೆ ಬರುತ್ತದೆ.
Related Articles
Advertisement
ಹೀಗೆ ಎಲ್ಲ ನಾಟಕಗಳು ಹವ್ಯಾಸಿಗಳ ಉತ್ಸಾಹ,ವೃತ್ತಿಪರರ ನಿಷ್ಠೆಯೊಂದಿಗೆ ರಂಗಪರಿಶ್ರಮ ಹಾಕಿದ್ದು ಎದ್ದು ಕಾಣುತ್ತಿತ್ತು.
ನೀರು ಕುಡಿಸಿದ ನೀರೆಯರುಬೆಂಗಳೂರಿನ ಸಮಷ್ಟಿ ತಂಡ ಅರ್ಪಿಸಿದ ಈ ನಾಟಕವನ್ನು ನಿರ್ದೇಶಿಸಿದವರು ಮಂಜುನಾಥ್ ಎಲ್. ಬಡಿಗೇರ.ಮೂಲತಃ ಷೇಕ್ಸಪಿಯರ್‌ನ ಮೆರ್ರಿ ವೈವ್ಸ್ ಆಫ್ ವಿಲ್ಸನ್ ನಾಟಕದ ಕನ್ನಡ ರೂಪಾಂತರ ಈ ನಾಟಕ ಕನ್ನಡದ್ದೇ ಎನಿಸುವಷ್ಟು ಸುಂದರವಾಗಿ ಸ್ಥಳೀಕರಣಗೊಳಿಸಿ ಪಾತ್ರಗಳಿಗೆ ಆವರಣ ನೀಡಿಲಾಗಿದೆ. ಶುದ್ಧ ಕನ್ನಡೀಕರಣಗೊಳಿಸಿ ಕನ್ನಡ ಸಂಸ್ಕೃತಿಗೆ ಒಗ್ಗಿಸಿದ್ದು ನಾಟಕದ ಹೆಗ್ಗಳಿಕೆ. ರಂಗಭೂಮಿಯ ಸರ್ವಾಂಗಸುಂದರವಾದ ಸಮಗ್ರತೆಯ ರಂಗಪ್ರಯೋಗವಾಗಿ ಇದು ಗಮನ ಸೆಳೆಯುತ್ತದೆ. ಕಾಮುಕ ಕಾಳಿಂಗರಾಯನಿಗೆ ಮಾಲಿನಿ ಮತ್ತು ಶಾಲಿನಿ ಎಂಬಿಬ್ಬರು ಗೃಹಣಿಯರು ಕಲಿಸುವ ಪಾಠವೇ ಈ ನಾಟಕದ ಮೂಲವಸ್ತು. ಇದಕ್ಕೆ ಬೇಕಾಗುವಂತೆ ನಾಟಕದಲ್ಲಿ ನಡೆಯುವ ಬೇರೆ ಬೇರೆ ನಾಟಕೀಯ ಪ್ರಸಂಗಗಳು ಇಡೀ ನಾಟಕದ ಶಕ್ತಿಯೂ ಹೌದು ಮತ್ತು ವೇಗವೂ ಹೌದು. ರಂಗಪರಿಕರ ಮತ್ತು ರಂಗಸಜ್ಜಿಕೆಗಳು ಸಾಂದರ್ಭಿಕ ವ್ಯತ್ಯಾಸದೊಂದಿಗೆ ದೃಶ್ಯದ ಅರ್ಥಪೂರ್ಣತೆಗೆ ನೆರವಾಗಿದೆ. ಮನುಷ್ಯನ ಮನಸ್ಸಿನ ಆಸೆ, ದುರಾಸೆ, ಲೋಲುಪತೆಗಳೇ ಇಲ್ಲಿ ಪಾತ್ರದ ರೂಪ ಪಡೆದು ಜೀವಂತವಾಗಿವೆ. ರಂಗ ಪರಿಕರ,ಸಂಗೀತ, ಬೆಳಕು ನಿರ್ವಹಣೆ ಅತ್ಯುತ್ತಮವಾಗಿತ್ತು. ಪ್ರಾಪರ್ಟಿಗಳ ನಿರ್ವಹಣೆ, ಬಳಕೆಯಲ್ಲೂ ನಟರು ಪಳಗಿದ್ದು ಎದ್ದು ಕಾಣುತ್ತಿತ್ತು. ಕೊನೆಯಲ್ಲಿ ಯಕ್ಷಗಾನ ರೂಪ ಬಳಸಿ ವಿಶಿಷ್ಟವಾಗಿ ನಾಟಕದ ಅಂತ್ಯವಾಗುವುದು ಗಮನಸೆಳೆಯುತ್ತದೆ. ಪ್ರತಿಯೊಬ್ಬ ನಟರು ಪಾತ್ರದ ಉತ್ತಮ ನಿರ್ವಹಣೆ ತೋರಿದ್ದೇ ನಾಟಕದ ಯಶಸ್ಸಿಗೆ ಮುಖ್ಯ ಕಾರಣ ಎನಿಸುತ್ತದೆ. ಮಲ್ಲಿ ಪಾತ್ರದ ಚುರುಕು ನಡೆ, ವಿನೋದದ ಮ್ಯಾನರಿಸಂಗಳು ಮತ್ತೆ ಮತ್ತೆ ನೆನಪಾಗುತ್ತದೆ. ಕೆಲವೊಮ್ಮೆ ಕೆಲ ಪಾತ್ರಗಳದ್ದು ಅತಿರೇಕದ ಅಭಿನಯ ಎನಿಸಿದರೂ ನಾಟಕದ ಒಟ್ಟು ನಡೆಗೆ ಅದು ಒಪ್ಪುತ್ತಿತ್ತು. ಜಿ. ಪಿ. ಪ್ರಭಾಕರ ತುಮರಿ