Advertisement
ಇಂಥ ನಿರಂತರ ಕಲಿಕೆ, ಜೀವನ ಪ್ರೀತಿಯ ಪಾಠ ಕಲಿಸಿಕೊಟ್ಟ , ಭೇಟಿಯಾದಾಗಲೆಲ್ಲ, ಮಾತಾಡಿದಾಗಲೆಲ್ಲ, ನನ್ನೊಳಗೆ ಈಗಲೂ ಒಂದಲ್ಲ ಒಂದು ರೀತಿಯಿಂದ ಬೆರಗನ್ನು ಹುಟ್ಟಿಸುತ್ತ , “ಛೇ ಎಷ್ಟೆಲ್ಲ ಗೊತ್ತು ಇವಳಿಗೆ’ ಅನ್ನಿಸುವಂತೆ ಮಾಡುವ ಈ ನಗುಮೊಗದೊಡತಿಯ ಹೆಸರು ಆಂಡ್ರಿಯಾ ಮೊಂಟೆಗ್ಮರಿ (andrea montgomery).
Related Articles
Advertisement
ಆಂಡ್ರಿಯಾ ಸರದಿ ಬಂದಾಗ, “ನಾನು ಹುಟ್ಟಿದ್ದು ಭಾರತದಲ್ಲಿ , ಬೆಳದಿದ್ದು ಓದಿದ್ದು ಎಲ್ಲ ಏಶಿಯನ್ ರಾಷ್ಟ್ರಗಳಲ್ಲಿ. ನನ್ನ ತವರು ಕೆನಡಾ, ಈಗ ಟೆರ್ರಾನೋವ ಎಂಬ ಥಿಯೇಟರ್ ಕಂಪೆನಿಯ ನಿರ್ದೇಶಕಿಯಾಗಿ ಬೆಲ್ಫಾಸ್ಟ್ ನಲ್ಲಿ ನಿಮ್ಮೊಂದಿಗೆ ಕೆಲಸ ಮಾಡುತ್ತಿದ್ದೇನೆ, ನನ್ನ ಹೆಸರಿಡುವ ಸಂದರ್ಭದಲ್ಲಿ ನನ್ನ ತಂದೆಯ ಸ್ನೇಹಿತರು ನೈನಿತಾಲ್ ಕಾಡುಗಳಲ್ಲಿ ಕಲೆ ಹಾಕಿದ ಒಂದಷ್ಟು ಚಿಟ್ಟೆಗಳನ್ನು ಫ್ರೇಮ್ ಮಾಡಿಕೊಟ್ಟಿದ್ದರು ಅದು ನನ್ನ ಮನಸಿಗೆ ತುಂಬಾ ಆಪ್ತವಾದ ವಸ್ತು ಎಂದು ಪುಟ್ಟ ಡಬ್ಬಿಯನ್ನು ನಮ್ಮ ಮುಂದಿಟ್ಟಾಗ 48 ವರ್ಷಗಳಷ್ಟು ಹಳೆಯ ನನ್ನ ನೆಲದ ಚಿಟ್ಟೆಗಳನ್ನು ಅಂದು ಹಾಗೆ ನೋಡಿದಾಗ ಅದೊಂದು ವಿಚಿತ್ರ ಅನುಭವವಾಗಿತ್ತು. ಆಕೆ ಅದನ್ನು ಅಷ್ಟು ಜೋಪಾನವಾಗಿ ಕಾದಿಟ್ಟುಕೊಂಡ ಬಗೆಗೂ ಮನಸು ತೊಯ್ದಿತ್ತು.
ಮೂರು ದಿನಗಳ ಆ ಕಾರ್ಯಾಗಾರ ನನ್ನ ಯೋಚನಾಲಹರಿಯನ್ನೇ ಬದಲಿಸಿಬಿಟ್ಟಿತ್ತು. ನಾವು ಬರೀ ನಮ್ಮ ಸಮಸ್ಯೆಗಳೇ ದೊಡ್ಡವು , ಎಂದುಕೊಳ್ಳುತ್ತ ಬದುಕನ್ನ ಹಳಿಯುತ್ತ ಕೂಡುತ್ತೇವೆ. ಎಲ್ಲವು ಇದ್ದಾಗ್ಯೂ ನಮಗೆ ಬದುಕಿನ ಬಗ್ಗೆ ಅಸಮಾಧಾನ. ಆದರೆ ಅಲ್ಲಿ ಬಂದ ಪ್ರತಿಯೊಬ್ಬರ ಅನುಭವಗಳು, ಅವರನ್ನು ಬದುಕು ನಡೆಸಿಕೊಂಡ ರೀತಿ ಕೇಳಿದಾಗ ನಾನೆಷ್ಟು ಸುಖೀ ಅನಿಸಿಬಿಟ್ಟಿತ್ತು. ಆಂಡ್ರಿಯಾ ಎಲ್ಲರ ನೆನಪುಗಳನ್ನು ಕೆದಕಿ ತೆಗೆದು, ಆ ನೆನಪುಗಳಲ್ಲಿ ಕತೆ ಹುಡುಕಿ ಆ ಕತೆಗಳಿಂದ ಪಾಠ ಹೇಳಿಕೊಡುವುದರಲ್ಲಿ ನಿಸ್ಸೀಮಳು.
ಅನಂತರ ಆಂಡ್ರಿಯಾ ಜತೆ ನಾನು ಕೆಲವು ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡಿದೆ. ಆಕೆಗೆ ಷೇಕ್ಸ್‌ಪಿಯರ್ ಅಂದರೆ ಅದೇನೋ ಆನಂದ. ಆಕೆ ದಿ ಟೆಂಪೆಸ್ಟ್ ನಾಟಕ ಮಾಡಿಸುವಾಗ, “ನಿನ್ನ ಭಾಷೆಯಲ್ಲಿ, ನಿನ್ನ ಸ್ನೇಹಿತೆ ಯರೊಂದಿಗೆ ಈ ಪ್ಲೇ ಯಲ್ಲಿ ಭಾಗವಹಿಸ್ತೀಯಾ ? ಚಿಕ್ಕ ಕಾರ್ಯಕ್ರಮವಾದರೂ ಸರಿ’ ಎಂದು ಕೇಳಿದ್ದಳು.
ನಾನು ಒಪ್ಪಿಕೊಂಡೆ. ಆಂಡ್ರಿಯಾ ನಿರ್ದೇಶನದ The Tempest ನಾಟಕದಲ್ಲಿ ಮಿರಾಂಡಾ ಮತ್ತು ಫರ್ಡಿನಾಂಡ್ ಎರಡು ಮುಖ್ಯ ಪಾತ್ರಗಳ, ಮದುವೆ ದೃಶ್ಯ ಶುರುವಾಗುವುದೇ ನಾರ್ದರ್ನ್ ಐರ್ಲೆಂಡ್ ಕನ್ನಡತಿಯರ ಸೋಬಾನೆ ಪದದಿಂದ.
750 ಜನರ ಅದ್ಭುತ ತಂಡ 5 ದಿನ 10 ಶೋ ಗಳು. ನಮ್ಮ ಮಾವನ ಮಗನ, ಅತ್ತೆ ಮಗಳ ಮದುವೆ ಏನೋ ಎಂಬಂತೆ ಚಂದ ಚಂದದ ಸೀರೆ ಉಟ್ಟು ಮೆರೆದದ್ದೇ ! ನನಗೊಬ್ಬಳಿಗೇ ಅಲ್ಲ ಬೆಲ್ಫಾಸ್ಟ್ ನಲ್ಲಿರುವ ನನ್ನೆಲ್ಲ ಕನ್ನಡ ಸ್ನೇಹಿತೆಯರಿಗೂ ಹಬ್ಬದ ಸಂಭ್ರಮ ತಂದುಕೊಟ್ಟ ಆಂಡ್ರಿಯಾಕಟ್ಟಿಕೊಟ್ಟ ಈ ನೆನಪಿನ ಬುತ್ತಿ ಸದಾ ತಂಪು.
Home ಅನ್ನುವ ಇನ್ನೊಂದು ಪ್ರಾಜೆಕ್ಟ್ ಮಾಡುವಾಗ ನನಗೆ ಓಲ್ಡ್ ಏಜ್ ಹೋಂ , ವಯೋ ವೃದ್ಧರ ಗುಂಪುಗಳಿಗೆ ಹೋಗಿ ಅವರ ಕಥೆಗಳನ್ನು ಕೇಳಿ ಒಂದು ನಾಟಕ ಬರಿ ಎಂದು ಕಳಿಸಿದಳು. ಸಂಗೀತಕ್ಕೆ ಸಂಬಂಧಿಸಿದ ವಿಷಯವಾದರೆ ಸರಿ, ಈ ಮಾತು ಫೀಲ್ಡ್ ವರ್ಕ್ ಎಲ್ಲ ನನಗೆ ಕಷ್ಟ , ನನ್ನನು ಅವರು ಹೇಗೆ ಸ್ವೀಕರಿಸುತ್ತಾರೋ ಗೊತ್ತಿಲ್ಲ ಬೇಡ ಅಂದೆ. ಇಲ್ಲ ಆಗುತ್ತೆ ನೀ ಮಾಡು ನಿನ್ನ ಕಂಫರ್ಟ್ ಜೋನ್‌ನಿಂದ ಹೊರಗೆ ಬರೋದು ಯಾವಾಗ ನೀ ಇದನ್ನ ಮಾಡ್ತೀಯಾ ಅಷ್ಟೇ !
ಆಕೆಯ ಮಾತನ್ನು ನಿರಾಕರಿಸುವ ಧೈರ್ಯ ಸಾಮರ್ಥ್ಯ ಎರಡು ಇಲ್ಲದ ನಾನು ಆ ಅಜ್ಜಿಯರನ್ನು ಭೇಟಿಯಾಗಲು ಹೋದೆ. ಒಂದು ಮನೆಯ ಸುತ್ತಲೂ ಎಷ್ಟೊಂದು ಕಥೆಗಳಿದ್ದವು. ಅಜ್ಜಿಯೊಬ್ಟಾಕೆ ಹೇಳುತ್ತಿದ್ದರು “ಎಲ್ಲ ಕಣ್ಣ ಮುಂದೆ ಇದೆ , ಕಣ್ಣು ಮುಚ್ಚಾಲೆ , ಮುಟ್ಟಾಟ ಆಡುತ್ತಿದ್ದ ದಿನಗಳು, ಮದುವೆ ಆಗಿ ಹತ್ತಿರದಲ್ಲೇ ಮನೆ ಮಾಡಿಕೊಂಡಿದ್ದು , ಅಮ್ಮ ಮಾಡಿಡುತ್ತಿದ್ದ ಸೂಪ್, ಅದಕ್ಕೆಂದೇ ಕಾಯುತ್ತಿದ್ದ ನಾವು ರವಿವಾರ ಚರ್ಚ್‌ನಿಂದ ಸೀದಾ ಅಮ್ಮನ ಮನೆಗೆ ಓಡಿಬರುತ್ತಿದ್ದುದು. ಟೇಬಲ್ ಸುತ್ತ ಕುಳಿತು ಹರಟೆ ಹೊಡೆಯುತ್ತ ಸೂಪ್ ಕುಡಿಯುತ್ತ ಇರುವ ದೃಶ್ಯ ನನಗೆ ಇನ್ನೂ ಮರೆಯಲಾಗುತ್ತಿಲ್ಲ , ಅದೇ ವರುಷ ನಮ್ಮ ಬೆಲ್ಫಾಸ್ಟ್ ಬಾಂಬ್ ದಾಳಿಗೆ ಈಡಾಗಿದ್ದು ! ಎಲ್ಲ ಹೊಯ್ತು, ಆ ಮನೆಯ ವಾಲ್ ಪೇಪರ್ ಚೂರೊಂದನ್ನ ನಾ ಹಾಗೆ ಇಟ್ಕೊಂಡಿದ್ದೆ ‘….. ಇದನ್ನ ಕೇಳಿದ ಅನಂತರ ನನಗೆ ಅನಿಸಿದ್ದು ದೇಶ ಯಾವುದಾದರೇನು ? ತವರು , ತಾಯಿ , ಅಲ್ಲಿನ ನೆನಪುಗಳು ಎಲ್ಲ ಹೆಣ್ಣುಮಕ್ಕಳಿಗೂ ಒಂದೇ!
ಇಂಥದೇ ಎಂಟು ಕತೆಗಳನ್ನ ಕೇಳಿ, ಮನೆ ಮತ್ತು ಅದರ ಸುತ್ತಲಿನ ಮನಸುಗಳ ಕುರಿತು ನಾನೇ ಒಂದು ಪುಟ್ಟ ನಾಟಕ ಬರೆದು ಅಭಿನಯಿಸುವಷ್ಟು ಆತ್ಮ ವಿಶ್ವಾಸ ತುಂಬಿದ್ದು ಆಂಡ್ರಿಯಾ.
ನಾನಷ್ಟೇ ಅಲ್ಲ , ನನ್ನಂಥ ಅದೆಷ್ಟೋ ಕಲಾವಿದರಿಗೆ, ಒಂದಿನಿತು ಇಂಗ್ಲಿಷ್ ಬಾರದ ನಟ ನಟಿಯರಿಗೆ, ಯುವ ಕವಿಗಳಿಗೆ, ಬರಹಗಾರರಿಗೆ, ನೃತ್ಯ ಕಲಾವಿದರಿಗೆ ಆಂಡ್ರಿಯಾ ಸ್ಫೂ³ರ್ತಿಯ ಸೆಲೆ. ಆಕೆಯ ಹತ್ತಿರ ಮಾತಾಡಿದರೆ ಸಾಕು ಮನಸಿನ ಎಷ್ಟೋ ಗೋಜಲುಗಳು ತಂತಾನೇ ಸರಿ ಹೋಗುತ್ತವೆ. ಎಷ್ಟು ಪ್ರೀತಿ ಸಲಿಗೆ ತೋರಿಸುತ್ತಾಳ್ಳೋ ಕೆಲಸ, ಗುಣಮಟ್ಟದ ವಿಷಯಕ್ಕೆ ಬಂದರೆ ಅಷ್ಟೇ ನಿಷ್ಠುರ ಸ್ವಭಾವದವಳು. ಸುಮ್ ಸುಮ್ನೆ ಏನೋ ಒಂದು ಕೆಲಸ ಮಾಡಿ ಮುಗಿಸುತ್ತೇವೆ ಎಂದರೆ ಆಕೆಯ ಮುಂದೆ ನಡೆಯುವುದಿಲ್ಲ. ಪ್ರತಿ ಕೆಲಸದಲ್ಲೂ ಶಿಸ್ತು , ಅಚ್ಚುಕಟ್ಟುತನ ಬೇಕೇ ಬೇಕು.
ಆ ದಿನ ಒಮ್ಮೆ ಆಕೆಯ ಮನೆಗೆ ಕರೆದಿದ್ದಳು, ಮನೆಯ ಒಳಗೆ ಕಾಲಿಟ್ಟರೆ ಮಲೆನಾಡಿನ ಮೆತ್ತಿ ಮನೆಯ ಒಳಗೆ ಕಾಲಿಟ್ಟಂತೆ ಅನಿಸಿತು. ಇಂಡೋನೇಶಿಯಾದಿಂದ ತರಿಸಿಕೊಂಡ ಕಟ್ಟಿಗೆಯ ಪೀಠೊಪಕರಣಗಳು , ಭಾರತ ಮೂಲದ ಅಲಂಕಾರಿಕ ವಸ್ತುಗಳು , ನವಿರಾಗಿ ಹರಡಿದ್ದ ಸೂರ್ಯರಶ್ಮಿ , ಆ ಬೆಳಕಿನ ಮೂಲೆಯಲ್ಲೊಂದು ದಾಸವಾಳದ ಗಿಡ ಅದರಲ್ಲಿ ಅರಳಿ ನಗುತ್ತಿದ್ದ ಹಳದಿ ಜಪಾಕುಸುಮ. ಕೈಯ್ಯಲ್ಲಿ ಆಕೆ ಮಾಡಿಕೊಟ್ಟ ಘಮಘಮಿಸುವ ಚಹಾ, ಆ ದಿನ ಅನಿಸಿದ್ದು “ಆಂಡ್ರಿಯಾ ನನ್ನ ಜೀವನ ಪ್ರೀತಿಗೆ ದೊರಕಿದ ಪುರಸ್ಕಾರ’.
-ಅಮಿತಾ ರವಿಕಿರಣ್