ಉಳ್ಳಾಲ: ಗಿರೀಶ್ ಕಾರ್ನಾಡ್ ಕನ್ನಡ ಸಾಹಿತ್ಯ ಮತ್ತು ರಂಗಭೂಮಿಗೆ ನೀಡಿದ ಕೊಡುಗೆ ಅನನ್ಯ. ಈ ಮೂಲಕ ಅವರು ರಂಗಭೂಮಿಯ ಪುನಶ್ಚೇತನಕ್ಕೆ ಕಾರಣಕರ್ತರಾಗಿದ್ದರು ಎಂದು ಹಿರಿಯ ರಂಗಕರ್ಮಿ ಚಂದ್ರಹಾಸ ಉಳ್ಳಾಲ ಹೇಳಿದರು.
ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಷನ್, ಮೇಲೆ¤ನೆ ಮತ್ತು ಕಲ್ಲಚ್ಚು ಪ್ರಕಾಶನ ಹಮ್ಮಿಕೊಂಡ “ಕನ್ನಡದ ಹೆಮ್ಮೆ: ಗಿರೀಶ್ ಕಾರ್ನಾಡ್ ಒಂದು ನೆನಪು’ ಎಂಬ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಓರ್ವ ಜವಾಬ್ದಾರಿಯುತ ಸಾಹಿತಿ ತನ್ನ ಕಾಲದ ದುರಂತಗಳಿಗೆ ಯಾವ ರೀತಿಯಲ್ಲಿ ಪ್ರತಿಸ್ಪಂದಿಸಬೇಕು ಎನ್ನುವುದಕ್ಕೆ ಕಾರ್ನಾಡ್ ನಮ್ಮ ಮುಂದೆ ಒಂದು ಮಾದರಿಯನ್ನು ಇಟ್ಟು ಹೋಗಿದ್ದಾರೆ ಎಂದು ಲೇಖಕ ಇಸ್ಮತ್ ಪಜೀರ್ ಹೇಳಿದರು.
ಕಲ್ಲಚ್ಚು ಪ್ರಕಾಶನದ ಮುಖ್ಯಸ್ಥ ಸಾಹಿತಿ ಮಹೇಶ್ ಆರ್. ನಾಯಕ್ ಮಾತನಾಡಿ, ಸಾವಿಗೆ ಸಂಭ್ರಮಿಸುವ ವಿಕೃತಿ ನಮ್ಮ ನೈತಿಕ ಅಧಃಪತನವನ್ನು ತೋರಿಸುತ್ತದೆ. ಸತ್ತ ವ್ಯಕ್ತಿಯ ಸಾಧನೆಗಳು ಮತ್ತು ಒಳಿತುಗಳ ಕುರಿತು ಮಾತನಾಡುವುದು ಮತ್ತು ಆದರ್ಶ ಪಾಲಿಸುವುದು ಭಾರತೀಯ ಸಂಸ್ಕೃತಿಯಾಗಬೇಕು ಎಂದರು.
ಜಮಾಅತೇ ಇಸ್ಲಾಮೀ ಹಿಂದ್ ಉಳ್ಳಾಲ ಘಟಕದ ಅಧ್ಯಕ್ಷ ಅಬ್ದುಲ್ ಕರೀಂ ಅಧ್ಯಕ್ಷತೆ ವಹಿಸಿದ್ದರು. ಯುವ ಲೇಖಕ ಅಶೀರುದ್ದೀನ್ ಮಂಜನಾಡಿ ಸ್ವಾಗತಿಸಿ, ನಿರೂಪಿಸಿದರು. ಎಸ್.ಐ.ಒ. ಉಳ್ಳಾಲ ಘಟಕಾಧ್ಯಕ್ಷ ನಿಝಾಮುದ್ದೀನ್ ಉಮರ್ ವಂದಿಸಿದರು. ಕಾರ್ನಾಡ್ ಅವರ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥನೆ ಸಲ್ಲಿಸಲಾಯಿತು.