ಮೈಸೂರು: ಉತ್ತರ ಪ್ರದೇಶದ ಲಕ್ನೋ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೈಸೂರಿನ ಹಿರಿಯ ರಂಗಕರ್ಮಿ ಕೆ. ಮುದ್ದುಕೃಷ್ಣ (68) ಹಾಗೂ ಅವರ ಪತ್ನಿ ಸಿಎಫ್ಟಿಆರ್‌ಐನ ವಿಜ್ಞಾನಿ ಇಂದ್ರಾಣಿ (59) ಮೃತಪಟ್ಟಿದ್ದಾರೆ.
ನಗರದ ರಾಮಕೃಷ್ಣ ನಗರದ ನಿವಾಸಿಗಳಾದ ಕೆ. ಮುದ್ದುಕೃಷ್ಣ ದಂಪತಿ ಕಳೆದ 4 ದಿನಗಳ ಹಿಂದೆ ಲಕ್ನೋಗೆ ಪ್ರವಾಸ ಬೆಳೆಸಿದ್ದರು. ಬಾಡಿಗೆ ಕಾರಿನಲ್ಲಿ ವಾರಾಣಸಿ ಹಾಗೂ ಕಾಶಿ ನೋಡಲು ತೆರಳುತ್ತಿದ್ದ ಸಂದರ್ಭ ಇವರ ಕಾರಿಗೆ ಭಾನುವಾರ ಮಧ್ಯಾಹ್ನ 3.30ಕ್ಕೆ ಬಸ್ ಡಿಕ್ಕಿ ಹೊಡೆದ ಪರಿಣಾಮ ದಂಪತಿ ತೀವ್ರವಾಗಿ ಗಾಯಗೊಂಡಿದ್ದರು. ಇಂದ್ರಾಣಿ ಅವರು ಆಸ್ಪತ್ರೆ ಸಾಗಿಸುವ ವೇಳೆ ಮೃತಪಟ್ಟಿದ್ದರು.
ಗಂಭೀರವಾಗಿ ಗಾಯಗೊಂಡಿದ್ದ ಮುದ್ದುಕೃಷ್ಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚೇತರಿಕೆ ಹಾದಿಯಲ್ಲಿದ್ದ ಮುದ್ದುಕೃಷ್ಣ ಅವರು ಸೋಮವಾರ ಬೆಳಗ್ಗೆ ಪತ್ನಿ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇಂದು ಇಂದ್ರಾಣಿ ಅವರ ಜನ್ಮ ದಿನವಾಗಿತ್ತು. ಈ ಸಂದರ್ಭದಲ್ಲೇ ದುರಂತ ಸಂಭವಿಸಿದೆ.
ಮೃತರಿಗೆ ಅನನ್ಯ ಮತ್ತು ಅಲೋಕ್ ಎಂಬ ಇಬ್ಬರು ಗಂಡು ಮಕ್ಕಳಿದ್ದು, ಇಬ್ಬರು ಮದುವೆಯಾಗಿ ಸ್ವೀಡನ್‌ನಲ್ಲೇ ನೆಲೆಸಿದ್ದಾರೆ. ಸದ್ಯ ಮುದ್ದುಕೃಷ್ಣ ಅವರ ಆಪ್ತ ಗೆಳೆಯ, ರಂಗ ಕಲಾವಿದ ಜಯಂತ್ ಪಾಟೀಲ್ ಹಾಗೂ ಇತರರು ಲಕ್ನೋಗೆ ತೆರಳಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಪಾರ್ಥಿವ ಶರೀರವನ್ನು ಮಂಗಳವಾರ ಮಧ್ಯಾಹ್ನ ಮೈಸೂರಿಗೆ ಬರಲಿದ್ದು, ಜು.10ರಂದು ಅಂತ್ಯ ಸಂಸ್ಕಾರ ನೆರವೇರಲಿದೆ.
ಬ್ಯಾಂಕ್ ಉದ್ಯೋಗಿಯಾಗಿದ್ದ ಮುದ್ದುಕೃಷ್ಣ 15 ವರ್ಷದ ಹಿಂದೆ ಸ್ವಯಂ ನಿವೃತ್ತರಾಗಿದ್ದರು. 1983ರಲ್ಲೇ “ಸಮುದಾಯ’ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಇವರು, ಮೈಸೂರಿನಲ್ಲಿ ರಂಗ ಸಂಘಟಕರಾಗಿ ಕೆಲಸ ಮಾಡಿದ್ದರು. ಸಮುದಾಯದ ಕಾರ್ಯದರ್ಶಿಯಾಗಿ, ನಾಟಕ ಅಕಾಡೆಮಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಮಾನವ ಮಂಟಪದಲ್ಲಿ ನೂರಾರು ಜೋಡಿಗೆ ಸರಳ ವಿವಾಹ ಮಾಡಿಸಿದ್ದ ಇವರು, ನೇರ ನುಡಿಗೆ ಹೆಸರಾಗಿದ್ದರು.
ಇವರು ರಂಗಪ್ರದರ್ಶನ ನಡೆಯುವ ಎಲ್ಲಾ ಜಾಗದಲ್ಲಿ ಮುದ್ದುಕೃಷ್ಣ ಇರುತ್ತಿದ್ದರು. ಜೊತೆಗೆ ಅಭಿನಯಿಸಿದ್ದಕ್ಕಿಂತ ರಂಗ ಸಂಘಟನೆ ಮಾಡಿದ್ದೆ ಹೆಚ್ಚು. ಸಮುದಾಯದಲ್ಲೂ ಕಾರ್ಯ ನಿರ್ವಹಿಸಿದ್ದರು. ಪಕ್ಷಿ ವೀಕ್ಷಕರಾಗಿಯೂ ಇದ್ದ ಮುದ್ದುಕೃಷ್ಣ ಅವರು ರಂಗ ವಿಮರ್ಶಕರಾಗಿದ್ದರು ಎಂದು ಹಿರಿಯ ರಂಗಕರ್ಮಿ ಮೈಮ್ ರಮೇಶ್ ಪತ್ರಿಕೆಗೆ ತಿಳಿಸಿದರು.
ಮುಖ್ಯಮಂತ್ರಿ ಸಂತಾಪ: ಲಕ್ನೋದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ರಂಗಕರ್ಮಿ ಕೆ. ಮುದ್ದುಕೃಷ್ಣ ಹಾಗೂ ಪತ್ನಿ ಇಂದ್ರಾಣಿ ಅಕಾಲಿಕ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ ವ್ಯಕ್ತಪಡಿಸಿದ್ದಾರೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬಕ್ಕೆ ಈ ಆಘಾತ ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುವುದಾಗಿ ಅವರು ತಿಳಿಸಿದ್ದಾರೆ.