ಬೆಂಗಳೂರು: ರಂಗಭೂಮಿ ಇಂದು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ನೆರವಿಗೆ ಧಾವಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಮನು ಬಳಿಗಾರ್ ಹೇಳಿದ್ದಾರೆ. ಸಿರಿಮನೆ ಪ್ರತಿಷ್ಠಾನ ಸೋಮವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಂಗಭೂಮಿ ಸಾಧಕ ಹಾಗೂ ಸಾಮಾಜಿಕ ಚಿಂತಕ ಪ್ರಸಾದ್ ರಕ್ಷಿದಿ ಅವರಿಗೆ, “ಡಾ.ಸಿ.ವಿ.ವತ್ಸಲಾದೇವಿ ಸ್ಮಾರಕ’ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ರಂಗಭೂಮಿ ಕ್ಷೇತ್ರದಲ್ಲಿ ಮರಾಠಿ ರಂಗಭೂಮಿಯಷ್ಟೇ ಕನ್ನಡ ರಂಗಭೂಮಿಗೂ ದೊಡ್ಡ ಹೆಸರಿದೆ. ಹಿರಿಯ ರಂಗ ಕಲಾವಿದ ಗುಬ್ಬಿ ವೀರಣ್ಣ ಸೇರಿದಂತೆ ಅನೇಕ ಮಹಾನ್ ಕಲಾವಿದರು ಕನ್ನಡ ರಂಗ ಭೂಮಿಯನ್ನು ಕಟ್ಟಿ ಬೆಳೆಸಿದ್ದಾರೆ. ಆದರೆ, ಇಂತಹ ರಂಗಭೂಮಿ ಕ್ಷೇತ್ರ ಈಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಹೊಸ ಸರ್ಕಾರ ರಂಗಭೂಮಿ ಬೆಳವಣಿಗೆಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಮೊಬೈಲ್‌ನಲ್ಲಿ ಮಿಂದು ಹೋಗಿರುವ ಯುವ ಜನರು ಸಿನಿಮಾದ ಭ್ರಮೆಯ ಹಿಂದೆ ಸಾಗುತ್ತಿದ್ದಾರೆ. ಸಿನಿಮಾವನ್ನು ಪ್ರೀತಿಸುವುದು ತಪ್ಪಲ್ಲ. ಆದರೆ, ಸಿನಿಮಾಕ್ಕೆ ನೀಡಿದ ಪ್ರೋತ್ಸಾಹವನ್ನು ರಂಗಭೂಮಿಗೂ ನೀಡಬೇಕು. ಹೀಗೆ ಮಾಡಿದಾಗ ಮಾತ್ರ ರಂಗಭೂಮಿ ಉಳಿಯಲು ಸಾಧ್ಯ ಎಂದು ಹೇಳಿದರು.
ಸುಲಭದ ಕೆಲಸವಲ್ಲ: ಹಿರಿಯ ರಂಗತಜ್ಞೆ ಪ್ರೊ.ರಾಮೇಶ್ವರಿ ವರ್ಮ ಮಾತಾಡಿ, ರಂಗಭೂಮಿಯನ್ನು ಕಟ್ಟುವುದು ಮತ್ತು ಅದನ್ನು ನಡೆಸಿಕೊಂಡು ಹೋಗುವುದು ಸುಲಭದ ಮಾತಲ್ಲ. ರಂಗಾಸಕ್ತರ ಸಂಖ್ಯೆ ಕಡಿಮೆಯಾಗುತ್ತಿರುವ ಇಂದಿನ ದಿನಗಳಲ್ಲಿ ಹಾಸನದ ಒಂದು ಪುಟ್ಟ ಹಳ್ಳಿಯಲ್ಲಿ ರಂಗಮಂದಿರವನ್ನು ನಿರ್ಮಿಸಿ, ನಾಟಕಗಳ ಪ್ರಯೋಗಗಳಲ್ಲಿ ತೊಡಗಿರುವ ಪ್ರಸಾದ್ ರಕ್ಷಿದಿ ಅವರ ಕಾರ್ಯ ಶ್ಲಾಘನೀಯ ಎಂದು ಬಣ್ಣಸಿದರು.
ರಂಗ ಚುಟುವಟಿಕೆಗಳ ಜತೆಗೆ, ಸಾಮಾಜಿಕ ಸೇವೆಯಲ್ಲೂ ಪ್ರಸಾದ್ ರಕ್ಷಿದಿ ಅವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅನಕ್ಷರಸ್ಥರಿಗೆ ಅಕ್ಷರ ಪಾಠ ಹೇಳಿಕೊಟ್ಟಿದ್ದಾರೆ. ಇಂತವರನ್ನು ಮತ್ತಷ್ಟು ಗುರುತಿಸಿ ಪ್ರೋತ್ಸಾಹಿಸುವ ಅಗತ್ಯ ಇದೆ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಸಾದ್ ರಕ್ಷಿದಿ, ರಂಗಭೂಮಿ ಚುಟುವಟಿಕೆಗಳು ಒಟ್ಟು ಸಮುದಾಯದ ಭಾಗವಾಗಿರಬೇಕು. ಆಗ ಮಾತ್ರ ರಂಗಭೂಮಿ ಉಳಿಯಸು ಸಾಧ್ಯ. ಪ್ರಶಸ್ತಿಗಳ ಬಗ್ಗೆ ಹಲವು ರೀತಿಯ ಪ್ರಶ್ನೆಗಳು ಎದ್ದಿರುವ ಮಧ್ಯೆ ನಮ್ಮೂರಿಗೆ ಬಂದು, ನನ್ನ ಕೆಲಸವನ್ನು ಮೆಚ್ಚಿ ಪ್ರಶಸ್ತಿ ನೀಡಿರುವುದು ಖುಷಿ ತಂದಿದೆ ಎಂದು ಹೇಳಿದರು.
ಸಿರಿಮನೆ ಪ್ರತಿಷ್ಠಾನದ ಅಧ್ಯಕ್ಷ ಡಾ.ಸಿ.ವೀರಣ್ಣ, ಪ್ರಾಧ್ಯಾಪಕ ಹಾಗೂ ಲೇಖಕ ಡಾ.ಸಿ.ಚ.ಯತೀಶ್ವರ ಮತ್ತಿತರರು ಉಪಸ್ಥಿತರಿದ್ದರು.