ಧಾರವಾಡ: ರಂಗಭೂಮಿ ಧರ್ಮ ಹುಟ್ಟುವ ಮೊದಲೇ ಹುಟ್ಟಿದ್ದು, ನಾಟಕ ಮಾಡುವುದೆಂದರೆ ಅದೊಂದು ಪವಿತ್ರ ಕಾರ್ಯವಾಗಿದೆ ಎಂದು ಹಿರಿಯ ವಿದ್ವಾಂಸ ಡಾ| ಬಾಳಣ್ಣ ಶೀಗೀಹಳ್ಳಿ ಹೇಳಿದರು. ನಗರದ ಕವಿಸಂನಲ್ಲಿ ಹಮ್ಮಿಕೊಂಡಿದ್ದ ಎಂಟು ದಿನಗಳ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಾಷೆ ಹುಟ್ಟುವ ಮೊದಲೇ ಅಭಿನಯದ ಮೂಲಕ ತನ್ನ ಕಾರ್ಯವನ್ನು ಇತರ ಸದಸ್ಯರ ಮುಂದೆ ಮನುಷ್ಯ ಹಂಚಿಕೊಳ್ಳುತ್ತಿದ್ದ. ರಂಗಭೂಮಿ ಎನ್ನುವುದು ಬರೀ ಮನರಂಜನೆಗೆ ಇರುವುದಲ್ಲ. ಅದು ಸ್ವಾತಂತ್ರ ಚಳವಳಿಗೆ ಬಹುದೊಡ್ಡ ಕೊಡುಗೆ ನೀಡಿದ್ದನ್ನು ಯಾರೂ ಮರೆಯುವಂತದ್ದಲ್ಲ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ ರಂಗಣ್ಣವರ ಮಾತನಾಡಿದರು. ನಾಡೋಜ ಡಾ| ಪಾಟೀಲ ಪುಟ್ಟಪ್ಪ ಅಧ್ಯಕ್ಷತೆ ವಹಿಸಿದ್ದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹನುಮಾಕ್ಷಿ ಗೋಗಿ, ಅಣ್ಣಿಗೇರಿಯ ಅಬ್ದುಲಸಾಬ ಇಮಾಮಸಾಬ ನಡಕಟ್ಟಿನ,
ಕಲಘಟಗಿಯ ಶಿವಪ್ಪ ಭರಮಪ್ಪ ಅದರಗುಂಚಿ ಮತ್ತು ಸಂಘದ ರಂಗಕಲಾ ಸನ್ಮಾನಕ್ಕೆ ಭಾಜನರಾದ ವೀರನಗೌಡ ಶಿ. ಸಿದ್ಧಾಪುರ, ರಾಧಿಕಾ ವಿ. ಬೇವಿನಕಟ್ಟಿ, ಶಂಕರ ಹೂಗಾರ, ಕಲ್ಲನಗೌಡ ಶಿ. ಸಿದ್ಧಾಪುರ ಅವರನ್ನು ಸನ್ಮಾನಿಸಲಾಯಿತು. ಕೃಷ್ಣ ಜೋಶಿ ಸ್ವಾಗತಿಸಿದರು. ಡಾ| ಡಿ.ಎಂ. ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು. ಶಂಕರ ಹಲಗತ್ತಿ ನಿರೂಪಿಸಿದರು.
ಶಿವಾನಂದ ಭಾವಿಕಟ್ಟಿ ವಂದಿಸಿದರು. ನಂತರ ಶರಣಬಸವ ಶಿಗ್ಗಾಂವಿ ರಚನೆಯ ಕೃಷ್ಣಮೂರ್ತಿ ತಾಳಿಕಟ್ಟೆ ನಿರ್ದೇಶನದ ಸಾಣೇಹಳ್ಳಿಯ ಶಿವಕುಮಾರ ಕಲಾ ಸಂಘದ ಜಗದೀಶ ಅವರ ಸಂಗೀತದಲ್ಲಿ ಮಕ್ಕಳೇ ಪ್ರಸ್ತುತಪಡಿಸಿದ “ನನ್ನ ಕನಸಿನ ಲೋಕ’ ನಾಟಕ ಬಂಕಾಪುರದ ಅಳಿಲು ಸೇವಾ ಸಂಸ್ಥೆ ತಂಡದಿಂದ ಪ್ರದರ್ಶನಗೊಂಡಿತು.