Advertisement

ರಂಗಭೂಮಿ ಕಲೆಗಿದೆ ಮಹತ್ತರ ಇತಿಹಾಸ

04:42 PM Aug 18, 2019 | Suhan S |

ಚನ್ನಪಟ್ಟಣ: ರಂಗಭೂಮಿ ಕಲೆ ತನ್ನದೇ ಆದ ಮಹತ್ತರ ಇತಿಹಾಸ ಹೊಂದಿದೆ. ಇತ್ತೀಚಿನ ದೂರದರ್ಶನದಲ್ಲಿ ಪ್ರದರ್ಶನವಾಗುವ ಯಾವ ಕಾರ್ಯಕ್ರಮಗಳೂ ಇದಕ್ಕೆ ಸರಿಸಾಟಿಯಾಗಲಾರದು ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಎಂ.ಲಿಂಗಪ್ಪ ಹೇಳಿದರು.

Advertisement

ಪಟ್ಟಣದ ಕೊಲ್ಲಾಪುರದ ಮಹಾಲಕ್ಷ್ಮೀ ದೇವಾಲಯದ ಆವರಣದಲ್ಲಿ ಶ್ರೀಕೆಂಗಲ್ ಅಂಜನೇಯ ಕಲಾ ಸೇವಾ ಟ್ರಸ್ಟ್‌ ಆಯೋಜಿಸಿದ್ದ ಶ್ರೀಕೃಷ್ಣಸಂಧಾನ ಪೌರಾಣಿಕ ನಾಟಕ ಉದ್ಘಾಟಿಸಿದ ಅವರು ಮಾತನಾಡಿ, ನಾಟಕ ಕಲೆಗೆ ರಾಜ ಮಹಾರಾಜರ ಕಾಲದ ಪರಂಪರೆ ಹೊಂದಿದೆ. ಗ್ರಾಮೀಣ ಪ್ರತಿಭೆಗಳು ಕಲೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು, ಆ ಪಾತ್ರಗಳಿಗೆ ಜೀವ ತುಂಬುತ್ತಿದ್ದರು. ಇಂದಿನ ಸಿನಿಮಾ, ಧಾರಾವಾಹಿಗಳು ಕೇವಲ ಹಣ ಮಾಡುವ ಉದ್ದೇಶದಿಂದ ಮೂಡಿಬರುತ್ತಿವೆ ಎಂದರು.

ಪಾತ್ರಕ್ಕೆ ತಕ್ಕಂತೆ ಕಲಾವಿದರು ಸಜ್ಜು: ಪೌರಾಣಿಕ ನಾಟಕಗಳ ಪಾತ್ರಗಳನ್ನು ಅಭಿನಯಿಸುತ್ತಿದ್ದ ಕಲಾವಿದರು ಸಾಕಷ್ಟು ತರಬೇತಿ ಪಡೆದು, ಆ ಪಾತ್ರಕ್ಕೆ ತಕ್ಕಂತೆ ಸಜ್ಜುಗೊಳ್ಳುತ್ತಿದ್ದರು. ನಾಟಕ ವೀಕ್ಷಣೆಗೆ ಬರುವ ಪ್ರೇಕ್ಷಕರು ಆ ಪಾತ್ರಧಾರಿಯ ಮೂಲಕ ದೇವರನ್ನು ಕಾಣುತ್ತಿದ್ದರು. ಹಾಗೆಯೇ ಅಲ್ಲಿನ ಒಳ್ಳೆಯ ಸಂದೇಶಗಳನ್ನು ತಮ್ಮ ಬದುಕಿನಲ್ಲಿ ಕಡ್ಡಾಯವಾಗಿ ಅಳವಡಿಸಿಕೊಳ್ಳುತ್ತಿದ್ದರು. ಆ ಪ್ರದರ್ಶನಗಳು ನಾಟಕದಂತೆ ಕಾಣುತ್ತಿರಲಿಲ್ಲ. ನಿಜ ಜೀವನದಲ್ಲಿ ಇರುವಂತೆ ಭಾಸವಾಗುತ್ತಿತ್ತು ಎಂದು ಹೇಳಿದರು.

ಕಲಾವಿದರನ್ನು ಪ್ರೋತ್ಸಾಹಿಸಿ: ಗ್ರಾಮೀಣ ಪ್ರದೇಶದಲ್ಲಿ ಎಲೆಮರೆ ಕಾಯಿಯಂತೆ ಇರುವ ಪ್ರತಿಭೆಗಳು ಅದರಲ್ಲೂ ರಂಗಭೂಮಿ ಕಲಾ ಪ್ರವೀಣರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅವರನ್ನು ಪ್ರೋತ್ಸಾಹಿಸಬೇಕಾದ ಜಾವಬ್ದಾರಿ ಸರ್ಕಾರ ಹಾಗೂ ಸಂಸ್ಥೆಗಳದ್ದಾಗಿದೆ. ಈ ನಿಟ್ಟಿನಲ್ಲಿ ಕಾರ್ಯೋನ್ಮು ಖರಾಗಬೇಕು ಎಂದು ಸಲಹೆ ನೀಡಿದರು.

ಚನ್ನಪಟ್ಟಣ ಕಲಾವಿದರ ಸ್ವರ್ಗ: ಹಿರಿಯ ರಂಗಭೂಮಿ ಕಲಾವಿದ ಗೋಪಾಲ್ಗೌಡ ಮಾತನಾಡಿ, ಚನ್ನಪಟ್ಟಣ ಕಲಾವಿದರ ಸ್ವರ್ಗ. ಇಲ್ಲಿ ಇರುವ ಕಲಾವಿದರು ನಿಜಕ್ಕೂ ಇಡೀ ರಾಜ್ಯದಲ್ಲಿ ಎಲ್ಲಿಯೂ ಇಲ್ಲ. ಕಾಲಕಾಲಕ್ಕೆ ಸಂಸ್ಥೆಗಳ ಮೂಲಕ ಅಥವಾ ಗ್ರಾಮಗಳಲ್ಲಿ ನಾಟಕ ಪ್ರದರ್ಶನಗಳು ಹೇರಳವಾಗಿ ಆಗುತ್ತಿವೆ. ನಿಜಕ್ಕೂ ಇದು ನಾಟಕ ಕಲೆಗಳ ತವರು ಎಂದರೆ ತಪ್ಪಾಗಲಾರದು ಎಂದರು.

Advertisement

ಈ ವೇಳೆ ರಂಗಭೂಮಿ ಕಲಾವಿದ ಎಂ.ಎನ್‌.ನವೀನ್‌ಕುಮಾರ್‌ ಅವರಿಗೆ ಬೆಳ್ಳಿ ಕಿರೀಟಧಾರಣೆ ಮಾಡಿ, ಗೌರವಿಸಲಾಯಿತು. ರಂಗಭೂಮಿ ನಿರ್ದೇಶಕ ಮಂಗಳವಾರಪೇಟೆ ಧರ್ಮೇಂದ್ರ ಕುಮಾರ್‌, ಕೊಲ್ಲೂರು ಶ್ರೀನಿವಾಸ್‌, ಕೃಷ್ಣರಾಜು, ಶಿವಾನಂದ ಮೂರ್ತಿ, ಪಿ.ವಿಜೇಂದ್ರ, ಪಿ.ಗುರುಮಾದಯ್ಯ, ತೇಜಸ್‌ ಬಿ.ಕೆ. ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next