Advertisement

ಟಾರ್ಚ್‌ನಲ್ಲೇ ರಂಗಪ್ರಯೋಗ; ಶೌಚಾಲಯಕ್ಕಿಲ್ಲ ನೀರು!

11:04 PM Sep 01, 2019 | Team Udayavani |

ಬೆಂಗಳೂರು: ಮಲ್ಲತ್ತಹಳ್ಳಿಯಲ್ಲಿರುವ ಕಲಾಗ್ರಾಮ ಅವ್ಯವಸ್ಥೆಯ ಆಗರವಾಗಿದೆ. ಅಲ್ಲಿ ಶನಿವಾರದಿಂದ ವಿದ್ಯುತ್‌ ಕೈ ಕೊಟ್ಟಿದ್ದು ಆ ಹಿನ್ನೆಲೆಯಲ್ಲಿ ರಾಷ್ಟ್ರೀಯ ನಾಟಕ ಶಾಲೆ ವಿದ್ಯಾರ್ಥಿಗಳು ಟಾರ್ಚ್‌ ಬಳಸಿ ನಾಟಕ ಪ್ರದರ್ಶನ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಶನಿವಾರ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ ಸುಟ್ಟು ಹೋಗಿದ್ದು ಆ ಹಿನ್ನೆಲೆಯಲ್ಲಿ ರಾಷ್ಟ್ರೀಯ ನಾಟಕ ಶಾಲೆಯ ವಿದ್ಯಾರ್ಥಿಗಳು ಟಾರ್ಚ್‌ ಹಿಡಿದು ರಂಗಪ್ರಯೋಗ ನಡೆಸಿದರು. ಸಂಜೆ 7ರ ವೇಳೆ ಕೇರಳ ಮೂಲದ ರಂಗ ನಿರ್ದೇಶಕ ಉನ್ನಿಕೃಷ್ಣನ್‌ ನಿರ್ದೇಶನದ “ಮುಡಿಯೆತ್ತು’ ನಾಟಕ ಪ್ರದರ್ಶನವನ್ನು ಹಮ್ಮಿಕೊಂಡಿತ್ತು. ಆದರೆ ವಿದ್ಯುತ್‌ ಕೈ ಕೊಟ್ಟ ಹಿನ್ನೆಲೆಯಲ್ಲಿ ಟಾರ್ಚ್‌ ಬಳಸಿ ರಂಗ ಪ್ರಯೋಗ ಮುಂದುವರಿಸಿದರು.

ಜತೆಗೆ ಭಾನುವಾರ ರಾಷ್ಟ್ರೀಯ ನಾಟಕ ಶಾಲೆ ಹಳೇ ವಿದ್ಯಾರ್ಥಿಗಳು ಕೂಡ ರಂಗನಿರ್ದೇಶಕ ಪವನ ದೇಶಪಾಂಡೆ ನಿರ್ದೇಶನದ “ತದ್ರೂಪಿ’ ನಾಟಕದ ರಂಗ ಪ್ರಯೋಗ ಹಮ್ಮಿಕೊಂಡಿತ್ತು. ಆದರೆ ವಿದ್ಯುತ್‌ ಇಲ್ಲದ ಹಿನ್ನೆಲೆಯಲ್ಲಿ ನಾಟಕ ಪ್ರದರ್ಶನಕ್ಕೆ ಅಡೆತಡೆ ಉಂಟಾಗಿತ್ತು. ಈಗಾಗಲೇ ಪ್ರದರ್ಶನದ ಟಿಕೆಟ್‌ಗಳು ಮಾರಾಟವಾಗಿರುವ ಹಿನ್ನೆಲೆಯಲ್ಲಿ 7 ಸಾವಿರ ರೂ. ನೀಡಿ ಜನರೇಟರ್‌ ಬಾಡಿಗೆ ಪಡೆದು ನಾಟಕ ಪ್ರದರ್ಶಿಸಲಾಯಿತು ಎಂದು ರಾಷ್ಟ್ರೀಯ ನಾಟಕ ಶಾಲೆಯ ಬೆಂಗಳೂರು ಕೇಂದ್ರದ ಮುಖ್ಯಸ್ಥ ಸಿ.ಬಸವಲಿಂಗಯ್ಯ ಹೇಳಿದ್ದಾರೆ.

“ಉದಯವಾಣಿ’ಯೊಂದಿಗೆ ಮಾತನಾಡಿದ ಬಸವಲಿಂಗಯ್ಯ, ಹೊಸ ಬ್ಯಾಚ್‌ನ ತರಗತಿಗಳು ಈಗಾಗಲೇ ಪ್ರಾರಂಭವಾಗಿದ್ದು ವಿದ್ಯುತ್‌ ಇಲ್ಲದ ಹಿನ್ನೆಲೆಯಲ್ಲಿ ರಂಗ ಕಲಿಕೆಗೂ ಸಾಕಷ್ಟು ತೊಂದರೆ ಉಂಟಾಗಿದೆ. ಕಲಾಗ್ರಾಮಕ್ಕೆ ಖಾಯಂ ಅಧಿಕಾರಿಯೊಬ್ಬರನ್ನು ನೇಮಕ ಮಾಡುವತ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗಮನಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ವಿದ್ಯಾರ್ಥಿನಿಯರ ಪರದಾಟ: ಶನಿವಾರದಿಂದ ನೀರಿನ ಅಭಾವ ಸೃಷ್ಟಿಯಾಗಿದೆ. ವಿದ್ಯಾರ್ಥಿ, ವಿದ್ಯಾರ್ಥಿನಿಯರು ಶೌಚಾಲಯ ಸೇರಿ ಇನ್ನಿತರ ನಿತ್ಯ ಕರ್ಮಗಳಿಗೆ ತೊಂದರೆ ಅನುಭವಿಸುತ್ತಿದ್ದು ಸ್ನಾನಕ್ಕೂ ನೀರಿಲ್ಲದ ಸ್ಥಿತಿ ಉದ್ಭವಿಸಿದೆ. ವಿದ್ಯುತ್‌ ಅವ್ಯವಸ್ಥೆ ಸಂಬಂಧ ಕಲಾಗ್ರಾಮ ದಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಅಲ್ಲದೆ ಬೆಸ್ಕಾಂ ಅಧಿಕಾರಿಗಳು ಕೂಡ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ನಾಟಕ ಶಾಲೆಯ ಅಧಿಕಾರಿಗಳು ದೂರಿದ್ದಾರೆ.

Advertisement

ಈ ಹಿಂದೆ ಅಂದರೆ ಕಳೆದ ಜೂನ್‌ ತಿಂಗಳ ಅಂತ್ಯದ ವೇಳೆ ಇದೇ ರೀತಿಯ ತೊಂದರೆ ಉಂಟಾಗಿತ್ತು. ಆ ವೇಳೆ ವಿದ್ಯಾರ್ಥಿನಿಯರು ಬಹಳಷ್ಟು ತೊಂದರೆ ಅನುಭವಿಸಿದ್ದರು. ಒಂದೆರಡು ದಿನ ಪರಿಸ್ಥಿತಿಯನ್ನು ನಿಭಾಯಿಸಿದ್ದ ರಾಷ್ಟ್ರೀಯ ನಾಟಕ ಶಾಲೆಯ ಅಧಿ ಕಾರಿ ಗಳು ಸಮಸ್ಯೆ ಸಂಪೂರ್ಣವಾಗಿ ಪರಿಹಾರವಾ ಗದ ಹಿನ್ನೆಲೆಯಲ್ಲಿ ಐದು ದಿನ ರಜೆ ನೀಡಿದ್ದರು.

ಇದೀಗ ಮತ್ತೆ ಅಂತಹದ್ದೇ ಸಮಸ್ಯೆ ಎದುರಾಗಿದೆ. ಇತ್ತೀಚೆಗಷ್ಟೇ ನಾಟಕ ಶಾಲೆಗೆ ವಿದ್ಯಾರ್ಥಿಗಳ ಹೊಸ ಬ್ಯಾಚ್‌ ಪ್ರವೇಶ ಪಡೆದಿದೆ. ತರಗತಿಗಳು ಆರಂಭ ವಾಗಿ ಕೆಲವೇ ದಿನಗಳಾಗಿದ್ದು ಈ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ರಜೆ ನೀಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಸಮಸ್ಯೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಸ್ಪಂದಿಸಬೇಕೆಂದು ಮನವಿ ಮಾಡಿದ್ದಾರೆ.

ಅಡುಗೆ ನೀರಿಗೆ ತೊಂದರೆ: ಕಲಾಗ್ರಾಮದಲ್ಲಿರುವ ರಾಷ್ಟ್ರೀಯ ನಾಟಕ ಶಾಲೆಯ ವಿದ್ಯಾರ್ಥಿ ವಸತಿ ನಿಲಯದಲ್ಲಿ ವಿವಿಧ ರಾಜ್ಯಗಳಿಂದ ಬಂದಿರುವ ಸುಮಾರು 20 ಮಂದಿ ವಿದ್ಯಾರ್ಥಿಗಳಿದ್ದಾರೆ. ಇದರಲ್ಲಿ ಆರು ಮಂದಿ ವಿದ್ಯಾರ್ಥಿನಿಯರು ಇದ್ದಾರೆ. ಸಂಪೂರ್ಣವಾಗಿ ವಿದ್ಯುತ್‌ ಕೈ ಕೊಟ್ಟಿರುವ ಹಿನ್ನೆಲೆಯಲ್ಲಿ ಅಡುಗೆ ಸಿದ್ಧಪಡಿಸಲು ನೀರಿನ ಅಭಾವ ಎದುರಾಗಿದೆ. ಶನಿವಾರ ವಸತಿ ನಿಲಯದ ಕೊಳದಲ್ಲಿದ್ದ ನೀರನ್ನು ಬಳಕೆ ಮಾಡಲಾಗಿತ್ತು. ಆದರೆ ಕೊಳದ ನೀರು ಕೂಡ ಈಗ ಖಾಲಿಯಾಗಿದ್ದು ಹಣ ಕೊಟ್ಟು ಟ್ಯಾಂಕರ್‌ಗಳ ಮೂಲಕ ನೀರನ್ನು ಖರೀದಿಸಬೇಕಾದ ಪರಿಸ್ಥಿತಿ ಎದುರಾಗಿದೆ.

ಕಲಾಗ್ರಾಮದಲ್ಲಿ ಉಂಟಾಗಿರುವ ವಿದ್ಯುತ್‌ ಸಮಸ್ಯೆ ಗಮನಕ್ಕೆ ಬಂದಿದೆ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಶೀಘ್ರದಲ್ಲೇ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು.
-ಕೆ.ಎಂ.ಜಾನಕಿ, ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next